ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಯುಬಿಡಿಟಿ ಕಾಲೇಜು ಉಳಿಸಿ ಅಭಿಯಾನಕ್ಕೆ ಸಂಘ-ಸಂಸ್ಥೆಗಳ ಬೆಂಬಲ, ಪ್ರತಿಭಟನೆ

ದಾವಣಗೆರೆ, ಅ. 16- ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜು ಉಳಿಸಬೇಕು. ಶೇ. 50 ರಷ್ಟು ಪೇಮೆಂಟ್ ಕೋಟಾ ಜಾರಿಗೊಳಿಸಿರುವುದನ್ನು ಹಿಂಪಡೆಯಬೇಕು. ಕಾಲೇಜಿಗೆ ಅನುದಾನ ನೀಡಬೇಕೆಂದು ಆಗ್ರಹಿಸಿ ಎಐಡಿಎಸ್‌ಓ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಮತ್ತು ಕನ್ನಡಪರ ಸಂಘಟನೆಗಳ ಬೆಂಬಲದೊಂದಿಗೆ ನಡೆದ ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಜ್ಯದ ಪ್ರಥಮ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾದ ಯುಬಿಡಿಟಿ ಕಾಲೇಜನ್ನು ಶೇ. 50 ರಷ್ಟು ಪೇಮೆಂಟ್ ಕೋಟಾ ಮೂಲಕ ಖಾಸಗೀರಣ ಮಾಡುತ್ತಿರುವುದನ್ನು ಪ್ರತಿಭಟನಾ ಕಾರರು ಖಂಡಿಸಿದರು.

ಬೆಳಿಗ್ಗೆಯಿಂದಲೇ ಬೀದಿಗಿಳಿದ ವಿದ್ಯಾರ್ಥಿ ಯುವಜನರು, ರೈತ ಮುಖಂಡರು, ಕಾರ್ಮಿಕ ಮುಖಂಡರು, ದಲಿತ ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ, ಯುಬಿಡಿಟಿ ಕಾಲೇಜಿನಲ್ಲಿ ಜಾರಿಗೆ ತಂದಿರುವ ಶೇ. 50 ರಷ್ಟು ಪೇಮೆಂಟ್ ಕೋಟಾ ಪದ್ಧತಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು.

ನಗರದ ಜಯದೇವ ವೃತ್ತ, ಅಶೋಕ ರಸ್ತೆ, ಗಾಂಧಿ ವೃತ್ತ, ಪಿ.ಬಿ. ರಸ್ತೆ, ಹದಡಿ ರಸ್ತೆ, ಕೆ.ಆರ್. ಮಾರ್ಕೆಟ್ ರಸ್ತೆ, ಕಾಯಿಪೇಟೆ, ಗಡಿಯಾರ ಕಂಬ, ಕಾಯಿಪೇಟೆಯಲ್ಲಿ ಮಧ್ಯಾಹ್ನದವರೆಗೆ ಕೆಲವು  ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಎವಿಕೆ ಕಾಲೇಜು ರಸ್ತೆ, ರಾಮ್ ಅಂಡ್ ಕೋ ರಸ್ತೆ, ಆಂಜನೇಯ ಬಡಾವಣೆ, ವಿದ್ಯಾನಗರ, ಚರ್ಚ್ ರಸ್ತೆ, ಶಾಮನೂರು ರಸ್ತೆಗಳ ಬದಿಯಲ್ಲಿನ ವ್ಯಾಪಾರ ವಹಿವಾಟು ಎಂದಿನಂತೆ ನಡೆಯಿತು.

ನಗರ ಸಂಚಾರ ವ್ಯವಸ್ಥೆ ಸಹಜವಾಗಿ ಇರುವುದು ಕಂಡಬಂದಿತು. ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಬೆಳಿಗ್ಗೆ ಕೆಲ ಹೊತ್ತು ಸ್ಥಗಿತಗೊಂಡು ನಂತರ ಎಂದಿನಂತೆ ಆರಂಭಗೊಂಡಿತು. ಆಟೋಗಳ ಸಂಚಾರ ಕೂಡ ಎಂದಿನಂತೆ ಇತ್ತು.

ನಗರದ ಕೆಲವು ಕಾಲೇಜುಗಳು ರಜೆ ಘೋಷಿಸಿದ್ದವು. ಮತ್ತೆ ಕೆಲವು ಕಾಲೇಜುಗಳಲ್ಲಿ ಎಂದಿನಂತೆ ತರಗತಿಗಳು ನಡೆದವು. ವಿದ್ಯಾರ್ಥಿಗಳ ಹಾಜರಾತಿ ಮಾತ್ರ ಕಡಿಮೆ ಇರುವುದು ಕಂಡುಬಂದಿತು.

ರೈಲ್ವೆ ನಿಲ್ದಾಣದ ಬಳಿ ಬಹಿರಂಗ ಸಭೆ: ಗಾಂಧಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ರೈಲ್ವೆ ನಿಲ್ದಾಣದ ಬಸ್‌ ತಂಗುದಾಣದ ಬಳಿ ನಡೆದ ಬಹಿರಂಗ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿದರು.

ಅಭಯಾ ದಿವಾಕರ್, ತೇಜಸ್ವಿ ಪಟೇಲ್, ಹಿರೇಮಠ್, ಹೆಚ್.ಜಿ. ಉಮೇಶ್, ಬಲ್ಲೂರು ರವಿಕುಮಾರ್, ಚಿನ್ನಸಮುದ್ರ ಶೇಖರನಾಯ್ಕ, ಐಗೂರು ಸುರೇಶ್, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಗುಮ್ಮನೂರು ಬಸವರಾಜ್, ಇಸ್ಮಾಯಿಲ್, ರಾಜೇಂದ್ರ ಬಂಗೇರ ಸೇರಿದಂತೆ ಅನೇಕರು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.

ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್‌ ಮನವಿ ಪತ್ರ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ಆವರಗೆರೆ ಚಂದ್ರು, ರಂಗನಾಥ್, ನಿವೃತ್ತ ಪ್ರಾಚಾರ್ಯ ಕೆ.ಎಸ್. ಈಶ್ವರಪ್ಪ, ಕುಕ್ಕುವಾಡ ಮಂಜುನಾಥ್, ಕೈದಾಳ್ ಮಂಜುನಾಥ್, ಪೂಜಾ ನಂದಿಹಳ್ಳಿ, ಸೌಮ್ಯ, ಬನಶ್ರೀ, ಸತೀಶ ಅರವಿಂದ್, ಭಾರತಿ, ಲೀಲಾ ಮಾಗಾನಹಳ್ಳಿ, ಅವಿನಾಶ್ (ಅಭಿ), ಶಶಿಕಲಾ, ಅನಿಲ್, ಸುನಿಲ್, ಅಖಿಲೇಶ್, ಅಭಿಷೇಕ್, ಪೀರ್‌ಸಾಬ್, ವೆಂಕಟೇಶ್, ಮೇಘನಾ, ಕಾವ್ಯ, ಸುಮನ್ ಮತ್ತಿತರರು ಭಾಗವಹಿಸಿದ್ದರು.

error: Content is protected !!