ದಾವಣಗೆರೆ: ಸ್ಮಾರ್ಟ್ ಸಿಟಿ ಯೋಜನೆಯಡಿ ಕಣ್ಣಿಗೆ ಕಾಣಿಸುವಂತಹ ಕೆಲ ಕಾಮಗಾರಿಗಳಲ್ಲಿ ಇತ್ತೀಚೆಗೆ ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಗೊಂಡ ಖಾಸಗಿ ಹಾಗೂ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳೂ ಸೇರಿವೆ.
ಇವುಗಳ ಪೈಕಿ ಖಾಸಗಿ ಬಸ್ ನಿಲ್ದಾಣ ಬಸ್‌ಗಳ ನಿಲುಗಡೆಗೂ ಜಾಗವಿಲ್ಲದಂತಹ ಬಸ್ ನಿಲ್ದಾಣ’ ಎಂದು ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದರೆ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣವು ಅಷ್ಟೇ ಹೊಗಳಿಕೆಗೆ ಪಾತ್ರವಾಗುತ್ತಿದೆ
ಪ್ರಥಮ ಬಾರಿಗೆ ಬಸ್ ನಿಲ್ದಾಣದ ಒಳ ಪ್ರವೇಶಿಸುತ್ತಲೇ `ವಾಹ್’ ಎನ್ನುವ ಉದ್ಘಾರ ಬರುವಷ್ಟರ ಮಟ್ಟಿಗೆ ಸುಂದರವಾಗಿ ಕಾಣುತ್ತಿದೆ. ಪ್ರಯಾಣಿಕರಿಂದಲೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.
ಹೌದು, ಬರೋಬ್ಬರಿ 109.84 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ನೂತನ ಬಸ್ ನಿಲ್ದಾಣ 6 ಎಕರೆ 7 ಗುಂಟೆ ಪ್ರದೇಶದಲ್ಲಿದೆ. ಈ ನಿಲ್ದಾಣದಲ್ಲಿ 14 ಪ್ಲಾಟ್‌ಫಾರ್ಮ್‌ಗಳಿವೆ. ಏಕಕಾಲದಲ್ಲಿ 46 ಬಸ್‌ಗಳ ನಿಲುಗಡೆ ಸಾಧ್ಯವಿದೆ.
ಬಸ್ ನಂಬರ್ ಹಾಗೂ ಸಮಯದ ಮಾಹಿತಿ ನೀಡುವ ಡಿಜಿಟಲ್ ಪರದೆಗಳಿವೆ. ಸ್ವಚ್ಛ ಗಾರ್ಡನ್ ಹಸಿರು ಕಣ್ಣಿಗೆ ತಂಪು ನೀಡುತ್ತದೆ. ಶುದ್ಧ ಕುಡಿಯುವ ನೀರು, ಲಿಫ್ಟ್ ವ್ಯವಸ್ಥೆ, ಪಾರ್ಕಿಂಗ್, ಲಗೇಜ್ ರೂಂ, ಲಾಕರ್, ಪೊಲೀಸ್ ಚೌಕಿ ಸೇರಿದಂತೆ ಹತ್ತಾರು ಸೌಲಭ್ಯಗಳಿವೆ.
22 ವಾಣಿಜ್ಯ ಮಳಿಗೆಗಳಿವೆ. ಇವುಗಳ ಪೈಕಿ ಬೇಕರಿ, ಜನರಲ್ ಸ್ಟೋರ್‌ಗಳೇ ಹೆಚ್ಚಾಗಿವೆ. 3 ವಿದ್ಯುತ್ ನಿರ್ವಹಣಾ ಕೊಠಡಿಗಳಿವೆ. ಶುದ್ಧ ಸಸ್ಯಹಾರಿ ಕ್ಯಾಂಟೀನ್ ದಿನದ 24 ತಾಸು ತೆರೆದಿರುತ್ತದೆ. ಮಾಂಸಾಹಾರಿ ಹೋಟೆಲ್ ಸಹ ಶೀಘ್ರವೇ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ನಿಲ್ದಾಣದಲ್ಲಿ ಚಿಕ್ಕಮಕ್ಕಳ ಪೋಷಣಾ ಕೊಠಡಿಯಿದ್ದು, ತಾಯಂದಿರು ಮಗುವಿಗೆ ಹಾಲುಣಿಸಿ, ವಿಶ್ರಾಂತಿ ಪಡೆಯಬಹುದಾಗಿದೆ. ಒಳಗಡೆಯೇ ಪ್ರತ್ಯೇಕ ಶೌಚಾಲಯ ಹಾಗೂ ಸ್ನಾನದ ಕೊಠಡಿಯೂ ಇದೆ.
ಕಾಯಿನ್ ಹಾಕಿದ್ರೆ ಕುಡಿಯೋ ನೀರು: ನೂತನ ಬಸ್ ನಿಲ್ದಾಣದಲ್ಲಿ ಲೀಟರ್ ಶುದ್ಧ ಕುಡಿಯುವ ನೀರಿಗೆ 20 ರೂ. ಕೊಡಬೇಕೆಂದಿಲ್ಲ. 1 ಕಾಯಿನ್ ಹಾಕಿದರೆ 1 ಲೀಟರ್ ಹಾಗೂ 2 ರೂ. ಕಾಯಿನ್‌ಗೆ 2 ಲೀಟರ್ ಶುದ್ಧ ಕುಡಿಯುವ ನೀರು ದೊರೆಯುತ್ತದೆ. ಆದರೆ ವಿದ್ಯುತ್ ಸಂಪರ್ಕ ಇಲ್ಲದಾಗ ಈ ಯಂತ್ರಗಳು ಕಾರ್ಯ ನಿರ್ವಹಿಸುತ್ತಿಲ್ಲ. ಈ ಸಮಸ್ಯೆಯನ್ನು ಸಂಬಂಧಿಸಿದ ಕೆಲಸಗಳು ನಡೆಯುತ್ತಿದ್ದು, ಶೀಘ್ರವೇ ಈ ಸಮಸ್ಯೆ ಬಗೆ ಹರಿಸುವುದಾಗಿ ಸಿದ್ದೇಶ್ ಎಚ್.ಎಸ್. ಸಹಾಯಕ ಸಂಚಾರ ಅಧೀಕ್ಷಕರು ಪತ್ರಿಕೆಗೆ ತಿಳಿಸಿದರು.
ನೂತನ ನಿಲ್ದಾಣದ ಸುತ್ತ ಗರಿಗೆದರಿದ ವ್ಯಾಪಾರ
ನವೀಕರಣ ಹಿನ್ನೆಲೆಯಲ್ಲಿ ಹೈಸ್ಕೂಲ್ ಮೈದಾನಕ್ಕೆ ಬಸ್ ನಿಲ್ದಾಣ ಸ್ಥಳಾಂತರಗೊಳಿಸಿದ್ದರಿಂದ ಕಳೆದ ಕೆಲವು ವರ್ಷಗಳಿಂದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಹಾಗೂ ಸುತ್ತ ಮುತ್ತ ವ್ಯಾಪಾರ ವಹಿವಾಟು ಕಡಿಮೆಯಾಗಿತ್ತು.
ಈಗ ಮತ್ತೆ ಬಸ್ ನಿಲ್ದಾಣ ಕಾರ್ಯಾರಂಭವಾಗಿದ್ದು, ಜನ ಸಂದಣಿ ಹೆಚ್ಚಾಗುತ್ತಿದೆ. ಶಕ್ತಿ ಯೋಜನೆಯೂ ಪ್ರಯಾಣಿಕರ ಹೆಚ್ಚಳಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಿಲ್ದಾಣದ ಒಳಗಷ್ಟೇ ಅಲ್ಲದೆ, ಹೊರ ಭಾಗಗಳಲ್ಲೂ ವ್ಯಾಪಾರ-ವಹಿವಾಟು ಗರಿಗೆದರಿದೆ.
ನೂತನ ನಿಲ್ದಾಣದಲ್ಲಿ ಬಸ್ಗೆ ಕಾಯುತ್ತಿರುವ ಪ್ರಯಾಣಿಕರು
ಲಗೇಜ್ ರೂಂ ಹಾಗೂ ಲಾಕರ್ ಸೌಲಭ್ಯದ ವಿಭಾಗ
ಕಾಯಿನ್ ನೀಡಿ ಶುದ್ಧ ನೀರು ಪಡೆಯುವ ಘಟಕ
ಲಾಕರ್ ಸೌಲಭ್ಯ: ಪ್ರಯಾಣಿಕರಿಗೆ ಲಗೇಜ್ ಇಟ್ಟುಕೊಳ್ಳಲು ಇಲ್ಲಿ ಲಗೇಜ್ ರೂಂ ವ್ಯವಸ್ಥೆ ಇದೆ. ಅಲ್ಲದೇ ಲಾಕರ್ ಸೌಲಭ್ಯವೂ ಇದೆ. ನಿಗದಿತ ಶುಲ್ಕ ಪಾವತಿಸಿ ಲಗೇಜ್ ಇಟ್ಟುಕೊಳ್ಳುವ ವ್ಯವಸ್ಥೆ ಇದೆ.
3 ಸುಸಜ್ಜಿತ ಶೌಚಾಲಯಗಳು: ಬಸ್ ನಿಲ್ದಾಣದಲ್ಲಿ ಮೂರು ಸುಸಜ್ಜಿತ ಶೌಚಾಲಯಗಳಿವೆ. ಪುರುಷರು, ಮಹಿಳೆಯರು ಹಾಗೂ ಅಂಗವಿಕಲರಿಗಾಗಿ ಇರುವ ಪ್ರತ್ಯೇಕ ಶೌಚಾಲಯಗಳಿವು. ಟಾಯ್ಲೆಟ್‌ಗೆ 2 ರೂ. ದರ ನಿಗದಿಪಡಿಸಲಾಗಿದೆ. ಅಂದ ಹಾಗೆ ಮೂತ್ರವಿಸರ್ಜನೆಗೆ ಉಚಿತ ಎನ್ನಲಾಗುತ್ತಿದೆಯಾದರೂ, 2 ರೂ. ಟಾಯ್ಲೆಟ್‌ಗೆ 5 ರೂ. ಪಡೆಯಲಾಗುತ್ತಿದೆ.
ವಿಶಾಲ ಪಾರ್ಕಿಂಗ್ ವ್ಯವಸ್ಥೆ: 3500 ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಹುದಾದ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಬಸ್ ನಿಲ್ದಾಣದ ನೆಲ ಮಹಡಿಯಲ್ಲಿದೆ. ಲಘು ವಾಹನ ನಿಲುಗಡೆಗೂ ಅವಕಾಶವಿದ್ದು, ಇಲ್ಲಿಂದ ಫ್ಲಾಟ್‌ಫಾರ್ಮ್ ತೆರಳಲು ಮೆಟ್ಟಿಲು ವ್ಯವಸ್ಥೆ, ಲಿಫ್ಟ್ ವ್ಯವಸ್ಥೆಯೂ ಇದೆ.
ನೂರಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸಿ.ಸಿ ಟಿವಿಗಳ ನಿರ್ವಹಣೆ ಹಾಗೂ ಕಣ್ಗಾವಲಿಗೆ ಮೊದಲನೇ ಮಹಡಿಯಲ್ಲಿ ಕಂಟ್ರೋಲ್ ರೂಂ ಇದೆ.
ನಿಲ್ದಾಣದ ಮತ್ತೊಂದು ಭಾಗದಲ್ಲಿ ಶಾಪಿಂಗ್ ಮಾಲ್‌ಗಳು, ಥಿಯೇಟರ್‌ಗಳ ಆರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಒಟ್ಟಿನಲ್ಲಿ ದಾವಣಗೆರೆ ಜನರ ಹೈಟೆಕ್ ಬಸ್ ನಿಲ್ದಾಣದ ಬಹುದಿನಗಳ ಕನಸು ನನಸಾಗಿದೆ.