ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಸಂಸದೆ ಡಾ.ಪ್ರಭಾ
ದಾವಣಗೆರೆ, ಅ. 17- ಜಿಲ್ಲಾಮಟ್ಟದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ 4 ಕೋಟಿ ರೂ., ತಾಲ್ಲೂಕು ಮಟ್ಟದಲ್ಲಿ ನಿರ್ಮಿಸಲು 2 ಕೋಟಿ ರೂ., ಹೋಬಳಿ ಮತ್ತು ಪಂಚಾಯತಿ ಮಟ್ಟದಲ್ಲಿ 75 ಲಕ್ಷ ರೂ., ಗ್ರಾಮ ಮಟ್ಟದಲ್ಲಿ 20 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಗಳ ಸಂಯುಕ್ತಾಶ್ರಯದಲ್ಲಿ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿ ಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿ ಜನಜಾತಿಯ ಉನ್ನತ ಗ್ರಾಮ ಯೋಜನೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲೆಯ 44 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಈ ಗ್ರಾಮಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಳ್ಳಬೇಕಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಪ್ರಥಮ ಹಂತದಲ್ಲಿ 7 ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಹಾಗೂ ಎಲ್ಲಾ ರೀತಿಯ ಅಭಿವೃದ್ಧಿ ಕಾಮಗಾರಿ ಗಳನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದರು.
ನಾನು ಕೂಡ ವಾಲ್ಮೀಕಿ ಆದರ್ಶಗಳನ್ನು ಮೈಗೂಡಿಸಿಕೊಳ್ಳುತ್ತೇನೆ. ರಾಮಾಯಣ ಎಂದಾ ಕ್ಷಣ ನೆನಪಾಗುವುದು ಮರ್ಯಾದ ಪುರುಷೋ ತ್ತಮ ಶ್ರೀರಾಮಚಂದ್ರ ಮತ್ತು ರಾಮರಾಜ್ಯ. ರಾಮಾಯಣ ಹಾಗೂ ರಾಮರಾಜ್ಯ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ರಾಮಾಯಣ ಮಹಾಕಾವ್ಯದ ಪ್ರತಿಯೊಂದು ಪಾತ್ರಗಳೂ ಸಹ ಜೀವನದ ಮೇಲೆ ಪರಿಣಾಮ ಬೀರುತ್ತವೆ. ರಾಮಾಯಣದ ಮೌಲ್ಯಗಳನ್ನು ಪ್ರತಿಯೊಬ್ಬರೂ ಸಹ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮಾಯಕೊಂಡದಲ್ಲಿರುವ ವೀರ ಮದಕರಿ ನಾಯಕ ಸಮಾಧಿ ಅಭಿವೃದ್ಧಿಗೆ ಶ್ರಮಿಸಲಾಗುವುದು. ಇತ್ತೀಚಿನ ದಿನಗಳಲ್ಲಿ ಹಬ್ಬಗಳು ಪೊಲೀಸ್ ಭದ್ರತೆಯಲ್ಲಿಯೇ ಆಚರಿಸುವಂತಹ ವಾತಾವರಣ ನಿರ್ಮಾಣವಾಗಿದೆ. ಶಾಂತಿ ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ವಾಲ್ಮೀಕಿ ಜಯಂತಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಇಡೀ ಮನುಕುಲವೇ ಆಚರಿಸು ವಂತಹ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಹಿಂದುಳಿದ ಸಮುದಾಯದಲ್ಲಿ ಹುಟ್ಟಿ ತನ್ನದೇ ಆದ ತಪ: ಶಕ್ತಿ ಮೂಲಕ ಮಹಾನ್ ಋಷಿಯಾಗಿದ್ದ ಲ್ಲದೇ, ಅವರು ಬರೆದ `ರಾಮಾಯಣ’ ಮಹಾಕಾವ್ಯ ಇಡೀ ಸಾಹಿತ್ಯ ಪ್ರಪಂಚ ಇರೋವರೆಗೂ ಪ್ರಸ್ತುತವಾಗಿರುತ್ತದೆ ಎಂದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ಪಾಶ್ಚಿಮಾತ್ಯ ಪ್ರದೇಶಗಳ ಸಂಸ್ಕೃತಿ ರಾಮಾಯಣದಿಂದಲೇ ರಚಿತವಾಗಿದ್ದು, ಭಾರತದ ಯಾವುದೇ ಮೂಲೆಗೆ ಹೋದರೂ ನಮ್ಮ ಸಂಸ್ಕೃತಿ ವಿಸ್ತಾರವಾಗಿದೆ ಎಂದು ತಿಳಿಸಿದರು.
ಸಂಸ್ಕೃತ ಪುರಾಣದಲ್ಲಿ ಒಂದು ಪ್ರತೀತಿಯಿದೆ, ಯಾರಾದರೂ ವಿಜಯದಶಮಿ ದಿನದಂದು ರಾಮಾಯಣ ಓದಿದರೆ, ಅವರಿಗೆ ಸಕಲ ಪುಣ್ಯಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆ ಇದೆ ಎಂದರು.
ರಾಮಾಯಣ ಓದುವುದರಿಂದ ಜೀವನದ ಪಾಠ, ವಿದ್ಯೆ, ಶ್ರದ್ದೆಯನ್ನು ನಾವುಗಳು ಅಳವಡಿಸಿಕೊಳ್ಳುವ ಮಹತ್ವದ ಸಂದೇಶವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೇಯರ್ ಚಮನ್ ಸಾಬ್ ಕೆ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ , ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಡಾ. ನವೀನ್ ಸಿ ಮಠದ್, ವಾಲ್ಮೀಕಿ ಸಮಾಜದ ಮುಖಂಡರು, ಅಧ್ಯಕ್ಷರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಮೇಯರ್ ಕೆ. ಚಮನ್‌ಸಾಬ್ ಮಾತನಾಡಿ, ಜೀವನಕ್ಕೆ ಮಾರ್ಗದರ್ಶನ ಮಾಡುವ ತತ್ವಾದರ್ಶಗಳನ್ನು ವಾಲ್ಮೀಕಿ ಮಹರ್ಷಿ ನೀಡಿದ್ದಾರೆ. ಇಂಡೋನೇಷ್ಯಾದಲ್ಲೂ ಮತ್ತು ಮುಸ್ಲಿಂ ರಾಷ್ಟ್ರಗಳಲ್ಲೂ ರಾಮನ ದೇವಾಲಯಗಳು ಕಂಡು ಬರುತ್ತವೆ ಎಂದರು.
ಇತ್ತೀಚಿನ ದಿನಗಳಲ್ಲಿ ಅವಿಶ್ವಾಸದ ವಾತಾವರಣ ಕಂಡು ಬರುತ್ತಿದ್ದು, ಪರಸ್ಪರ ಪ್ರೀತಿ-ವಿಶ್ವಾಸದಿಂದ ಎಲ್ಲ ಸಮುದಾಯಗಳು ಸೇರಿ ಇಂತಹ ಜಯಂತಿಗಳನ್ನು ಆಚರಿಸುವಂತಾಗಬೇಕು ಎಂದು ಹೇಳಿದರು.
ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ಬಿ. ವೀರಣ್ಣ ಮಾತನಾಡಿ, ಪರಿಶಿಷ್ಟ ಪಂಗಡದ ಹೆಸರಿನಲ್ಲಿ ಅನ್ಯ ಜಾತಿಯವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವ ಮೂಲಕ ನಮ್ಮ ಹಕ್ಕುಗಳನ್ನು ಕಸಿಯುವ ಪ್ರಯತ್ನ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದರು.
ಅತ್ಯಂತ ಹಿಂದುಳಿದ ಸಮಾಜ ನಮ್ಮದು. ನಾವುಗಳು ಸ್ವಾಭಿಮಾನಿಗಳು. ಮಾತು ತಪ್ಪದ ಸಮಾಜ. ಮೋಸ ಮಾಡುವ ಗುಣ ನಮ್ಮದಲ್ಲ ಎಂದ ಅವರು ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕಾದರೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಅಗತ್ಯವಿದೆ ಎಂದರು.
ಉಪ ಮೇಯರ್ ಸೋಗಿ ಶಾಂತಕುಮಾರ್, ಜಿ.ಪಂ. ಸಿಇಓ ಸುರೇಶ ಇಟ್ನಾಳ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ದೂಡಾ ಆಯುಕ್ತ ತಿಮ್ಮಣ್ಣ ಹುಲ್ಮನಿ, ತಹಶೀಲ್ದಾರ್ ಡಾ. ಅಶ್ವಥ್, ಡಿಡಿಪಿಐ ಜಿ.ಕೊಟ್ರೇಶ್, ವಾಲ್ಮೀಕಿ ಸಮಾಜದ ಮುಖಂಡರಾದ ಆಂಜನೇಯ ಗುರೂಜಿ, ಹುಚ್ಚವ್ವನಹಳ್ಳಿ ಮಂಜುನಾಥ್, ಅಂಜಿನಪ್ಪ ಅಣಜಿ, ವಿಜಯಶ್ರೀ, ಲಕ್ಷ್ಮೀದೇವಿ ವೀರಣ್ಣ, ಗಣೇಶ್ ಹುಲ್ಮನಿ, ಮೀನಾಕ್ಷಿ ಜಗದೀಶ್, ಕೆ.ಎಲ್. ಶ್ರೀನಿವಾಸ್, ಮತ್ತಿತರರು ಭಾಗವಹಿಸಿದ್ದರು.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ. ಎ.ಬಿ. ರಾಮಚಂದ್ರಪ್ಪ ಮಹರ್ಷಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಿದರು. ದೀಪಾ ಕಾರ್ಯಕ್ರಮ ನಿರೂಪಿಸಿದರು. ನವೀಣ್ ಸಿ.ಮಠದ್ ಸ್ವಾಗತಿಸಿದರು. ಇದೇ ವೇಳೆ ಅತಿಹೆಚ್ಚು ಅಂಕ ಗಳಿಸಿದ ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.