ಹರಪನಹಳ್ಳಿ, ಅ.15- ಪಶ್ಚಿಮ ಬಂಗಾಳದ ಯುವ ವೈದ್ಯರು ನಡೆಸುತ್ತಿರುವ ಸತ್ಯಾಗ್ರಹ ಬೆಂಬಲಿಸಿ, ನ್ಯಾಯ ಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ವೈದ್ಯರು ಪ್ರತಿಭಟನೆ ನಡೆಿಸಿ ಉಪವಿಭಾಗಾಧಿ ಕಾರಿಗೆ ಮನವಿ ಸಲ್ಲಿಸಿದರು.
ನಗರದ ಐ.ಎಂ.ಎ ಘಟಕ, ಆಯುಷ್ ಘಟಕ, ಐ.ಡಿ.ಎ ಘಟಕ ಸಂಯುಕ್ತವಾಗಿ ಈ ಪ್ರತಿಭಟನೆ ಹಮ್ಮಿಕೊಂಡಿದ್ದವು.
ಈ ವೇಳೆ ಡಾ.ಮಹೇಶ್ ಮಾತನಾಡಿ, ಕಳೆದ 12 ದಿನಗಳಿಂದ ಪಶ್ಚಿಮ ಬಂಗಾಳದ ಯುವ ವೈದ್ಯರು ತಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿ ದ್ದಾರೆ. ಇತ್ತೀಚೆಗೆ ಆರ್.ಜಿ.ಕರ್ ಆಸ್ಪತ್ರೆಯಲ್ಲಿ ಬರ್ಬರ ಅತ್ಯಾಚಾರಕ್ಕೀಡಾಗಿ ಸಾವಿಗೀಡಾದ ಯುವ ವೈದ್ಯೆಗೆ ನ್ಯಾಯ ದೊರಕಿಸುವುದು ಇದರಲ್ಲಿ ಸೇರಿದೆ. ದೇಶದ ಎಲ್ಲಾ ವೈದ್ಯರು ಹಾಗೂ ರಾಜ್ಯದ ಐ.ಎಂ.ಎ ಘಟಕಗಳು ಈ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದು, ಈ ಕೂಡಲೇ ಪಶ್ಚಿಮ ಬಂಗಾಳ ಸರ್ಕಾರವು ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಡಾ.ಹರ್ಷ ಮಾತನಾಡಿ, ವೈದ್ಯರು ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ನಿರತ ವೈದ್ಯರಲ್ಲಿ ಮತ್ತಿಬ್ಬರ ಆರೋಗ್ಯ ಹದಗೆಟ್ಟಿದೆ. ಹಾಗಾಗಿ ಕೊಲೆಯಾದ ತಮ್ಮ ಸಹೋದ್ಯೋಗಿಗೆ ನ್ಯಾಯ ದೊರಕಿಸಿಕೊಡಬೇಕು ಹಾಗೂ ಆರೋಗ್ಯ ಕಾರ್ಯದರ್ಶಿ ಎನ್.ಎಸ್ ನಿಗಮ್ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಾ.ಕೆ.ಎಂ.ಖಾನ್, ಡಾ.ಕೆ.ಎಂ.ಮಂಜುನಾಥ, ಡಾ.ರಘು ಅಧಿಕಾರ್, ಡಾ.ಜಯಶ್ರೀ ಪಟೇಲ್. ಡಾ.ನಂದೀಶ, ಡಾ.ಸಂಗೀತಾ, ಡಾ.ಸೀಮಾ ಅಧಿಕಾರ್, ಡಾ.ಇಂದ್ರೇಶ್, ಡಾ.ಆನಂದಗೌಡ, ಡಾ.ಹರ್ಷ ಕಟ್ಟಿ, ಡಾ.ಅಂಬಿಕಾ, ಡಾ.ಕೊಟ್ರೇಶ, ಡಾ.ವಿಶ್ವಾರಾಧ್ಯ, ಡಾ.ಶೇಕ್ ನಪ್ತರ್, ಡಾ.ಪ್ರಶಾಂತ, ಡಾ.ಗಪೂರ್, ಡಾ.ನೂರ್ ಸೇರಿದಂತೆ ಇತರರು ಇದ್ದರು.