ಬಿಜೆಪಿ ಸರ್ಕಾರದಿಂದ ಬ್ರಿಟಿಷರ ನೀತಿ ಅನುಷ್ಠಾನ : ಬಿಳಿಮಲೆ ಕಳವಳ

ಬಿಜೆಪಿ ಸರ್ಕಾರದಿಂದ ಬ್ರಿಟಿಷರ ನೀತಿ ಅನುಷ್ಠಾನ : ಬಿಳಿಮಲೆ ಕಳವಳ

ದಾವಣಗೆರೆ, ಅ. 15- ಪ್ರಸ್ತುತ ದೇಶದಲ್ಲಿ ಬಿಜೆಪಿ ಸರ್ಕಾರ ಬ್ರಿಟಿಷರ ನೀತಿಯನ್ನು ಅನುಷ್ಠಾನಕ್ಕೆ ತರುತ್ತಿರುವುದು ದುರಂತದ ಸಂಗತಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಮತ್ತು ಹರಿಹರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪರಸ್ಪರ ಬಳಗ ಹರಿಹರ ಹಾಗೂ ಮಾನವ ಬಂಧುತ್ವ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಲೇಖಕ ಜೆ. ಕಲೀಂಬಾಷಾ ಅವರು ಅನುವಾದಿಸಿರುವ `ಕ್ರಾಂತಿಕಾರಿ ಸ್ವಾತಂತ್ರ್ಯ ಹುತಾತ್ಮ ಕವಿ ರಾಮಪ್ರಸಾದ್ ಬಿಸ್ಮಿಲ್ಲಾ (ಆತ್ಮಕಥೆ)’ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿದವರು ಮುಸ್ಲಿಮರು. ಆದರೆ ಇತಿಹಾಸದಲ್ಲಿ ಈ ಬಗ್ಗೆ ಸರಿಯಾಗಿ ದಾಖಲಾಗಿಲ್ಲ. ದೇಶದ ಸ್ವಾತಂತ್ರ್ಯಕ್ಕೆ ಮುಸ್ಲಿಮರ ಕೊಡುಗೆ ಅಪಾರವಾದುದು. ಬ್ರಿಟಿಷರು ಮತ್ತು ಇಂಗ್ಲಿಷ್ ಭಾಷೆಯನ್ನು ಏಕಕಾಲಕ್ಕೆ ವಿರೋಧಿಸಿದವರು ಮುಸ್ಲಿಮರು ಎಂದರು.

ಬಹುತೇಕ ಮುಸ್ಲಿಮರು ಆಂಗ್ಲ ಮಾಧ್ಯಮ ಶಾಲೆಗೆ ಸೇರಲೇ ಇಲ್ಲ. ಇವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಸರಿಯಾದ ನ್ಯಾಯ ದೊರಕಿಲ್ಲ. ಮೊಘಲರ ಕೊನೆಯ ದೊರೆ ಬಹದ್ದೂರ್ ಷಾ ಜಾಫರ್‌ನನ್ನು ಕೊಂದು ಹಾಕಿದರು. ಸರ್ಕಾರದ ಪ್ರಮುಖ ಹುದ್ದೆಗಳಿಗೆ ಮುಸ್ಲಿಮರು ಬಾರದಂತೆ ಬ್ರಿಟಿಷರು ಎಚ್ಚರ ವಹಿಸಿದ್ದರು. ಉರ್ದು ಭಾಷೆ ಬದಲು ಹಿಂದಿ ಭಾಷೆಗೆ ಆದ್ಯತೆ ನೀಡಲಾಯಿತು. ಮುಸ್ಲಿಂ ಸಮುದಾಯಕ್ಕೆ ಬಹುದೊಡ್ಡ ಆಘಾತವನ್ನುಂಟು ಮಾಡಿತು ಎಂದು ಹೇಳಿದರು.

ಬಿಜೆಪಿ ಸರ್ಕಾರದಲ್ಲಿ ಆಡಳಿತಾತ್ಮಕ ಸೇವೆಗೆ ಮುಸ್ಲಿಮರು ಬರದಂತೆ ನೋಡಿಕೊಳ್ಳುವ ವ್ಯವಸ್ಥಿತ ಸಂಚು ರೂಪಗೊಳ್ಳುತ್ತಿದೆ. ಸ್ವಾತಂತ್ರ್ಯ ಹೋರಾಟದ ಬಗ್ಗೆ ಸುಳ್ಳುಗಳನ್ನೇ ಸೃಷ್ಠಿಸಿ ಹೇಳಲಾಗುತ್ತಿದೆ. 75 ವರ್ಷಗಳ ಹಿಂದೆ ದೇಶದಲ್ಲಿ ಏನು ನಡೆಯಿತು ಎಂಬುದರ ಬಗ್ಗೆ ಯುವ ಜನಾಂಗಕ್ಕೆ ಅರಿವಿಲ್ಲ. ಆದರೆ ಸಾವಿರಾರು ವರ್ಷಗಳ ಹಿಂದಿನ ಅಯೋಧ್ಯೆ ಬಗ್ಗೆ ಮಾತನಾಡುತ್ತಾರೆ ಎಂದರು.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ವೇಳೆ 22 ಭಾಷೆಗಳಲ್ಲಿ ಪುಸ್ತಕಗಳನ್ನು ಹೊರ ತರುವ ಪ್ರಯತ್ನ ನಡೆಯಿತು. ತೆರೆ ಮರೆಯಲ್ಲಿರುವ ಹೋರಾಟಗಾರರ ಮೇಲೆ ಬೆಳಕು ಚೆಲ್ಲುವುದು ಇದರ ಉದ್ದೇಶವಾಗಿತ್ತು ಎಂದು ತಿಳಿಸಿದರು.

ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಕರ್ನಾಟಕದಲ್ಲಿ ಬಂಡಾಯ ಸಾಹಿತ್ಯ, ಕೃತಿಕಾರ ಹಾಗೂ ಸಾಮಾಜಿಕ ಸಂಬಂಧ ಪರಸ್ಪರವಾಗಿರಬೇಕೆಂದು ತೋರಿಸಿದೆ. ಇವತ್ತು ದೇಶಪ್ರೇಮದ ವ್ಯಾಖ್ಯಾನವೇ ಬದಲಾಗುತ್ತಿದೆ. ಸತ್ಯ ಮರೆಮಾಚಿ, ಅಸತ್ಯವೇ ಸತ್ಯ ಎಂದು ಬಿಂಬಿಸಲಾಗುತ್ತಿದೆ ಎಂದರು.

ಇಡೀ ಭಾರತದ ಸ್ವಾತಂತ್ರ್ಯದ ಹೋರಾಟದಲ್ಲಿ ಶೇ. 90 ರಷ್ಟು ಜನರು ಬ್ರಿಟಿಷರ ವಿರುದ್ಧ ನಿಂತಿದ್ದವರು ಎಂಬುದನ್ನು ಯಾರು ಮರೆಯಬಾರದು. ರಾಷ್ಟ್ರೀ ಯತೆಯ ವ್ಯಾಖ್ಯಾನವನ್ನೇ ಬದಲಾಯಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಸಾಮರಸ್ಯದ ಭಾರತವನ್ನು ಮರು ನಿರ್ಮಾಣ ಮಾಡುವ ಜವಾಬ್ದಾರಿ ಸಾಹಿತ್ಯ ವಲಯದ ಮೇಲಿದೆ ಎಂದು ಹೇಳಿದರು.

ಬಿಸ್ಮಿಲ್ಲಾ ನಂತಹ ಲಕ್ಷಾಂತರ ಹೋರಾಟಗಾರರು ದೇಶದಲ್ಲಿದ್ದಾರೆ. ಒಂದು ದೇಶ, ಒಂದು ಸಂಸ್ಕೃತಿಯಂತಹ ಪರಿಕಲ್ಪನೆ ಪ್ರತಿಪಾದಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಇಂತಹ ಕೃತಿಗಳ ಅವಶ್ಯವಿದೆ ಎಂದರು.

ವಿಶ್ರಾಂತ ಪ್ರಾಚಾರ್ಯ ಡಾ. ದಾದಾಪೀರ್ ನವಿಲೇಹಾಳ್ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಪ್ರವೇಶದ ಬಳಿಕ ಸ್ವಾತಂತ್ರ್ಯ  ಹೋರಾಟಕ್ಕೆ ನೈತಿಕ ತಳಹದಿ ಹಾಗೂ ಆಯಾಮ ದೊರೆಯಿತು. ಸ್ವಾತಂತ್ರ್ಯ ಹೋರಾಟದ ಕಥೆ ಮಹಾಕಾವ್ಯವನ್ನು ಮೀರಿಸುತ್ತದೆ ಎಂದರು.

30 ವರ್ಷಕ್ಕೆ ಬಲಿದಾನವಾದ ರಾಮಪ್ರಸಾದ್ ಬಿಸ್ಮಿಲ್ಲಾ ಯುವ ಪೀಳಿಗೆಗೆ ಮಾದರಿ. ಆದರೆ ಇಂದಿನ ಪೀಳಿಗೆಗೆ ಮಾದರಿಗಳೇ ಇಲ್ಲ. ಅವರಿಗೆ ಇಂತಹ ಆದರ್ಶಗಳು ತಲುಪಬೇಕಾಗಿದೆ ಎಂದು ಹೇಳಿದರು.

ರಾಷ್ಟ್ರೀಯತೆಗೆ ಬಹುಮುಖ ಆಯಾಮವಿದೆ. ಪ್ರಸ್ತುತ ಸಾಮಾಜಿಕ ಸಂದರ್ಭದಲ್ಲಿ ಎಲ್ಲರನ್ನೂ ಒಳಗೊಳ್ಳಬೇಕು. ಆದರೆ ರಾಷ್ಟ್ರೀಯತೆ ಎಂಬ ಹುಸಿ ಪ್ರಜ್ಞೆ ಬೆಳೆಯುತ್ತಿರುವುದು ಅಪಾಯಕಾರಿ. ರಾಷ್ಟ್ರಭಕ್ತಿ ಸಾಬೀತು ಮಾಡಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ. ದೇಶಭಕ್ತಿ ರಾಜಕೀಯ ಬಂಡವಾಳ ಆಗಿದೆ. ಬಸವಣ್ಣನ ದೃಷ್ಟಿಯಲ್ಲಿ ನಾವು ಬದುಕು ಕಟ್ಟಿಕೊಳ್ಳಬೇಕಿದೆ. ಎಲ್ಲರೂ ಭಾರತೀಯರಾಗಬೇಕಿದೆ ಎಂದರು.

ಇಂದಿನ ಯುವಜನತೆ ಸೃಜನಶೀಲತೆ ನಾಶಪಡಿಸಿಕೊಂಡು, ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಸತ್ಯದ ಪರ ಯುದ್ಧ ಸಾರುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾಗರಿಕತೆ, ಪ್ರಜಾಪ್ರಭುತ್ವ, ವಿಜ್ಞಾನ, ಮಾನವೀಯ ಗುಣಗಳ ವಿರುದ್ಧ ಸರ್ಕಾರ ಪ್ರೇರಿತ ಸಮರ ನಡೆಯುತ್ತಿದೆ. ಇಂತಹ ಸಂದರ್ಭಗಳಲ್ಲಿ ಹಲವರು ಮೌನಕ್ಕೆ ಶರಣಾಗಿರುವುದು ವಿಷಾದದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಮಂಜಣ್ಣ, ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್, ವಿಶ್ರಾಂತ ಪ್ರಾಚಾರ್ಯರಾದ ಪ್ರೊ. ಹೆಚ್.ಎ. ಭಿಕ್ಷಾವರ್ತಿಮಠ, ಪ್ರೊ.ಸಿ.ವಿ.ಪಾಟೀಲ್, ಕಾರ್ಮಿಕ ಮುಖಂಡ ಹರಿಹರದ ಹೆಚ್.ಕೆ. ಕೊಟ್ರಪ್ಪ, ರಾಷ್ಟ್ರೀಯ ಕ್ರೀಡಾಪಟು ಹೆಚ್. ನಿಜಗುಣ, ಕೊಪ್ಪಳದ ಮಹೇಶ್ ಬಳ್ಳಾರಿ, ಕಸಾಪ ಪದಾಧಿಕಾರಿಗಳಾದ ರೇವಣಸಿದ್ಧಪ್ಪ ಅಂಗಡಿ, ಜಿಗಳಿ ಪ್ರಕಾಶ್, ವಿವೇಕಾನಂದಸ್ವಾಮಿ, ಜಗದೀಶ್ ಕೂಲಂಬಿ, ರಾಘವೇಂದ್ರ ನಾಯರಿ ಮತ್ತಿತರರು ಭಾಗವಹಿಸಿದ್ದರು.

ದಲಿತ ಸಂಘರ್ಷ ಸಮಿತಿ ಸಂಚಾಲಕ ಹೆಗ್ಗೆರೆ ರಂಗಪ್ಪ, ಬಿ.ಟಿ. ಪ್ರಕಾಶ್, ಕತ್ತಿಗೆ ಪರಮೇಶ್ವರಪ್ಪ ಜಾಗೃತಿ ಗೀತೆಗಳನ್ನಾಡಿದರು. ಹರಿಹರ ಕಸಾಪ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ ಸ್ವಾಗತಿಸಿದರು. ಬಿ.ಬಿ. ರೇವಣನಾಯ್ಕ ನಿರೂಪಿಸಿದರು. 

error: Content is protected !!