ಯುರೋಪ್ ಮಾದರಿಯಲ್ಲಿ ಪ್ರಮುಖ ವೃತ್ತಗಳ ಅಭಿವೃದ್ಧಿ

ಯುರೋಪ್ ಮಾದರಿಯಲ್ಲಿ  ಪ್ರಮುಖ ವೃತ್ತಗಳ ಅಭಿವೃದ್ಧಿ

ದಾವಣಗೆರೆ, ಅ.15- ನಗರದ ಪ್ರಮುಖ ವೃತ್ತಗಳನ್ನು ಯುರೋಪ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದರು.

ಎಂಸಿಸಿ `ಬಿ’ ಬ್ಲಾಕ್‌ನ ಗುಂಡಿ ಶಾಲೆಯಿಂದ 6 ನೇ ಮೇನ್‌ವರೆಗೂ 3, 4, 5, 6 ನೇ ಕ್ರಾಸ್ ರಸ್ತೆ ಮತ್ತು ಪೇವರ್ಸ್ ಅಳವಡಿಕೆ ಕಾಮಗಾರಿ, ವಿವಿಧ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿ, 11ನೇ ಮೇನ್ 8, 9, 10ನೇ ಕ್ರಾಸ್‌ನಲ್ಲಿರುವ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 

ಡಾ. ಎಂ.ಸಿ. ಮೋದಿ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ವಿದ್ಯಾರ್ಥಿ ಭವನ, ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತಗಳನ್ನು  ಯುರೋಪ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಸಲುವಾಗಿ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ಕಳೆದ ಹದಿನೈದು ದಿನಗಳ ಹಿಂದೆ ಬಂದು ಇಲ್ಲಿ ಗುದ್ದಲಿ ಪೂಜೆ ನೆರವೇರಿಸಿದ್ದೆ. ಈಗ ಮತ್ತೆ ಬಂದಿದ್ದೇನೆ. ಕಾಂಗ್ರೆಸ್ ಅಧಿಕಾರವಧಿಯಲ್ಲಿ ಅನೇಕ ಕೆಲಸಗಳು ಆಗಿವೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ನಿಮ್ಮ ಸಹಕಾರ, ಪ್ರೋತ್ಸಾಹ ಎಂದಿನಂತೆ ಇರಲಿ ಎಂದು ಹೇಳಿದರು. 

ಈ ಭಾಗದ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ಎಂಸಿಸಿ `ಬಿ’ ಬ್ಲಾಕ್‌ಗೆ ಹೆಚ್ಚಿನ ಅನುದಾನವನ್ನು ಎಸ್.ಎಸ್. ಮಲ್ಲಿಕಾರ್ಜುನ್ ಅವರು ನೀಡಿದ್ದಾರೆ. ಮುಂದೆಯೂ ನೀಡುವ ವಿಶ್ವಾಸ ಇದೆ. ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ವಾರ್ಡ್‌ಗಳಿಗಿಂತ ಸುಂದರ ಬಡಾವಣೆಯನ್ನಾಗಿಸಲು ಎಲ್ಲಾ ರೀತಿಯ ಸಹಕಾರವನ್ನು ಎಸ್ಸೆಸ್ಸೆಂ ನೀಡಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು. 

ಕುಂದುವಾಡ ಕೆರೆ ಆಗುವ ಮುನ್ನ ಎಂಸಿಸಿ `ಬಿ’ ಬ್ಲಾಕ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು. ಇದನ್ನು ಮನಗಂಡ ಮಲ್ಲಿಕಾರ್ಜುನ್ ಅವರು, ಕೆರೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಅನುದಾನ ತಂದರು. ಹಾಗಾಗಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿದೆ. ಜೊತೆಗೆ ಬೋರ್‌ವೆಲ್‌ಗಳಲ್ಲಿ ನೀರು ಬರುತ್ತಿದ್ದು, ಜನರಿಗೆ ತುಂಬಾನೇ ಅನುಕೂಲವಾಗಿದೆ ಎಂದು ತಿಳಿಸಿದರು. 

ಕಾಸಲ್ ವಿಠ್ಠಲ್ ಪಾರ್ಕ್ ಅಭಿವೃದ್ಧಿಗೆ 1 ಕೋಟಿ ರೂ., ಸ್ವಿಮ್ಮಿಂಗ್ ಪೂಲ್ ಅಗಲೀಕರಣ ಉದ್ಘಾಟನೆ, ಮಿನಿ ಸ್ವಿಮ್ಮಿಂಗ್ ಪೂಲ್‌ಗೆ ಅನುದಾನ ನೀಡಲಾಗಿದೆ. ಡಿಜಿಟಲ್ ಗ್ರಂಥಾಲಯಕ್ಕೂ ಹಣ ಬಿಡುಗಡೆ ಮಾಡಲಾಗುತ್ತಿದ್ದು, ಅಭಿವೃದ್ಧಿಯ ಮಹಾಪೂರವೇ ವಾರ್ಡ್‌ನಲ್ಲಿ ಹರಿದು ಬರುತ್ತಿದೆ. ಇದಕ್ಕೆ ಮಲ್ಲಿಕಾರ್ಜುನ್ ಅವರ ದೂರದೃಷ್ಟಿತ್ವದ ನಾಯಕತ್ವ, ಅಭಿವೃದ್ಧಿ ಪರ ಚಿಂತನೆಯೇ ಕಾರಣ ಎಂದು ಹೇಳಿದರು. 

ಎಸ್. ಎಸ್. ಮಲ್ಲಿಕಾರ್ಜುನ್ ಅವರು ನಮಗೆಲ್ಲರಿಗೂ ಮಾರ್ಗದರ್ಶಕರು. ಅಭಿವೃದ್ಧಿ ವಿಚಾರ ಬಂದಾಗ ಎಂದಿಗೂ ರಾಜೀ ಆದವರಲ್ಲ. ಹಾಗಾಗಿ, ದಾವಣಗೆರೆಯಲ್ಲಿ ಮತ್ತೆ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗುತ್ತಿದ್ದು, ಮುಂದೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಾಗಲಿವೆ. ಜನರು ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡಿದರೆ ಹೆಚ್ಚಿನ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. 

ಮಹಾನಗರ ಪಾಲಿಕೆ ಮೇಯರ್ ಕೆ. ಚಮನ್ ಸಾಬ್, ಉಪಮೇಯರ್ ಸೋಗಿ ಶಾಂತಕುಮಾರ್, ಆಯುಕ್ತರಾದ ರೇಣುಕಾ, ಅಂದನೂರು ಮುಪ್ಪಣ್ಣ, ಗುರುಮೂರ್ತಿ, ಇಂದೂಧರ್ ನಿಶಾನಿಮಠ್, ವಿಜಯಣ್ಣ ಆಲೂರು, ವೀರಣ್ಣ ಬೆಳ್ಳೂಡಿ, ಜ್ಯೋತಿರ್ಲಿಂಗ, ಮುರುಗೇಶ್, ಗುರು, ಕಬ್ಬೂರು ಶಿವಕುಮಾರ್, ಸಿದ್ದೇಶ್ವರ ಗೌಡ, ಯಶೋಧ, ಸರೋಜಮ್ಮ, ಪರಶುರಾಮ್ ಭರಣಿ, ಮಲ್ಲಿಕಾರ್ಜುನ್, ಭರತ್, ಜಾವಿದ್ ಸಾಬ್, ಮಲ್ಲಿಕಾರ್ಜುನ್ ಸ್ವಾಮಿ, ಬೆಳ್ಳೂಡಿ ಉಮೇಶ್, ಆರ್.ಟಿ. ಒ ರಾಜು, ಜಬ್ಬಾರ್ ಸಾಬ್, ನಿಖಿಲ್, ನೀಲಕಂಠಪ್ಪ, ರೆಡ್ಡಿ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!