ಯುಜಿಡಿ ದುರಸ್ತಿ, ಬೀದಿ ನಾಯಿಗಳ ನಿಯಂತ್ರಿಸಲು ಅಗತ್ಯ ಕ್ರಮಕ್ಕೆ ಆಗ್ರಹ

ಯುಜಿಡಿ ದುರಸ್ತಿ, ಬೀದಿ ನಾಯಿಗಳ ನಿಯಂತ್ರಿಸಲು ಅಗತ್ಯ ಕ್ರಮಕ್ಕೆ ಆಗ್ರಹ

ದಾವಣಗೆರೆ, ಅ.14- ಯುಜಿಡಿ ದುರಸ್ತಿ, ನಗರದಲ್ಲಿನ ರಸ್ತೆ ಮಧ್ಯದ ಗುಂಡಿಗಳನ್ನು ಮುಚ್ಚಲು ಮತ್ತು ಬೀದಿ ನಾಯಿಗಳನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಗಂಭೀರ ಸಮಸ್ಯೆಗಳ  ಬಗ್ಗೆ  ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಕೆ. ಚಮನ್ ಸಾಬ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ನಗರದ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿದರು.

ನಗರದ ಎಲ್ಲಾ ವಾರ್ಡ್‌ಗಳಲ್ಲೂ ಬೀದಿ ನಾಯಿಗಳ ಉಪಟಳ ಹೆಚ್ಚಾಗುತ್ತಿದ್ದು, ಮಕ್ಕಳು, ವೃದ್ದರು ಸೇರಿದಂತೆ ಸಾರ್ವಜನಿಕರು ತೀವ್ರ ತೊಂದರೆಗಳಾಗುತ್ತಿದ್ದು, ಕೆಲವರಿಗೆ ನಾಯಿಗಳು ಕಚ್ಚಿದ್ದರಿಂದ ತೀವ್ರ ಸ್ವರೂಪದ ಗಾಯಗಳು ಆಗಿದ್ದುಂಟು. ಕೂಡಲೇ ಮಹಾನಗರ ಪಾಲಿಕೆ ಹೆಬ್ಬಾಳು ಬಳಿ ಮಾಡಿರುವ ಹಂದಿಗಳನ್ನು ಕೂಡಿ ಹಾಕುವ ಶಾಲೆ ಮಾದರಿಯಲ್ಲಿ ನಾಯಿಗಳ ಕಡಿವಾಣಕ್ಕೂ ಸೂಕ್ತ ಕ್ರಮ ಕೈಗೊಳ್ಳುವಂತೆ ಬಹುತೇಕ ಸದಸ್ಯರ ಒತ್ತಾಯವಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತೆ ರೇಣುಕ ಅವರು, ಕಳೆದ ಐದಾರು ವರ್ಷಗಳ ಹಿಂದೆ ಮಾಡಲಾಗಿದ್ದ ಸರ್ವೆ ಪ್ರಕಾರ 20 ಸಾವಿರ ನಾಯಿ ಗಳಿದ್ದು, ಇದೀಗ ಇನ್ನೂ ಹೆಚ್ಚಾಗಿದ್ದು, ಆರೋಗ್ಯ ವಾಗಿರುವ ಯಾವ ನಾಯಿ ಗಳನ್ನು ಕೊಲ್ಲಲು  ಪಾಲಿಕೆ ನಿಯಮದ ಪ್ರಕಾರ ಅವಕಾಶವಿಲ್ಲ. ಆದರೆ ನಿಯಂತ್ರಣಕ್ಕಾಗಿ ಸಂತಾನ ಹರಣಕ್ಕಾಗಿ ಇಂಜೆಕ್ಷನ್ ಕೊಡಿಸಲಾಗಿದೆ. ಹೆಬ್ಬಾಳು ಬಳಿ ನಾಯಿಗಳ ಶಾಲೆ ತೆರೆಯಲಾಗುವುದು ಎಂದು ತಿಳಿಸಿದರು.

ವಿರೋಧ ಪಕ್ಷದ ನಾಯಕ ಕೆ. ಪ್ರಸನ್ನಕುಮಾರ್ ಅವರು, ಮಹಾನಗರ ಪಾಲಿಕೆಯಿಂದ ಪಡೆಯುವ ಇ-ಆಸ್ತಿ ಪತ್ರವನ್ನು 48 ಗಂಟೆಗಳೊಳಗಾಗಿ ವಿತರಣೆ ಮಾಡುವಂತೆ ಆಯುಕ್ತರು ಮತ್ತು ಮೇಯರ್ ಕ್ರಮ ಜರುಗಿಸಬೇಕೆಂಬ ಮನವಿಗೆ ಕಾಂಗ್ರೆಸ್ ಪಕ್ಷದ ಸದಸ್ಯರಾದ ಎ. ನಾಗರಾಜ್ ಕೂಡ ಧ್ವನಿಗೂಡಿಸಿದರು.

ಆಯುಕ್ತೆ ರೇಣುಕ ಅವರು, ಸಕಾಲದಲ್ಲಿ ಏಳು ದಿನಗಳ ಅವಧಿ ಇರುತ್ತದೆ. ಕೇವಲ 48 ಗಂಟೆಗಳಲ್ಲಿ ಇ-ಸತ್ತು ಪತ್ರ ನೀಡಲು ಕಷ್ಟವಾಗಲಿದೆ ಎನ್ನುತ್ತಿದ್ದಂತೆಯೇ ತಕ್ಷಣ ಎ. ನಾಗರಾಜ್ ಅವರು, ಮಧ್ಯವರ್ತಿಗಳಿಗೆ ಹಣ ನೀಡಿದರೆ ಕೇವಲ ಒಂದು ಗಂಟೆಯಲ್ಲಿಯೇ ಕೊಡಿಸುತ್ತಾರೆ. 48 ಗಂಟೆಗಳಲ್ಲಿ ಕೊಡಲು ಯಾಕೆ ಸಾಧ್ಯವಿಲ್ಲ. ಇ-ಆಸ್ತಿ ಸರಳೀಕರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಿ ಎಂದು ಮನವಿ ಮಾಡಿದರು.

ಮಾಜಿ ಮೇಯರ್, ಹಾಲಿ ಸದಸ್ಯ ಎಸ್.ಟಿ. ವೀರೇಶ್ ಮಾತನಾಡಿ,  ಖಾತೆ ಎಕ್ಸ್ಟ್ರಾಕ್ಟ್ ಮಾಡಿಕೊಡಲು ಕೇವಲ 20 ರಿಂದ 30 ರೂ. ಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಅದರೀಗ ಸುಮಾರು ಮೂವತ್ತು ಸಾವಿರ ರೂ.ಬೇಡಿಕೆ ಇಡುತ್ತಿದ್ದಾರೆ. ಈ ಬಗ್ಗೆ ಆಯುಕ್ತರು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳಬೇಕು. ಯಾರೋ ಮಾಡಿದ ಪಾಪದ ಕೆಲಸದಲ್ಲಿ ನಾವ್ಯಾಕೆ ಭಾಗಿಯಾಗಬೇಕು ಎಂದು ಪ್ರಶ್ನಿಸಿದರು.

ಲಂಚ ಪಡೆದ ಅಧಿಕಾರಿಗಳನ್ನು ಅಮಾ ನತ್ತು ಮಾಡಿದ್ದರೂ, ಹಳೆಯ ಚಾಳಿ ಮತ್ತೆ ಮುಂದುವರೆದಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು, ಅಮಾನತ್ತು ಬದಲು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಸದಸ್ಯರಾದ ಶಿವಾನಂದ, ಎ. ನಾಗರಾಜ್ ಆಗ್ರಹಿಸಿದರು. ಇಂತಹ ಅಧಿಕಾರಿಗಳನ್ನು ಕೂಡಲೇ ಬೇರೆಡೆಗೆ ವರ್ಗಾವಣೆ ಮಾಡಿ ಇಲ್ಲವೇ ವಜಾಗೊಳಿಸಿ ಎಂದು ಮೇಯರ್ ಕೆ. ಚಮನ್ ಸಾಬ್ ಅವರು ಅಯುಕ್ತರಿಗೆ ಸೂಚನೆ ನೀಡಿದರು.

ಆಯುಕ್ತೆ ರೇಣುಕ ಅವರು, ನಾನು ಇಲ್ಲಿಗೆ ಬಂದಾಗಿನಿಂದಲೂ 40 ಸಾವಿರ ಇ-ಸ್ವತ್ತು ಮಾಡಿಕೊಡಲಾಗಿದೆ. ಈ ಸಂಬಂಧ ಅಕ್ರಮ ಎಸಗಿದ 13 ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ ಎಂದು ಪ್ರತಿಕ್ರಿಯೆ ನೀಡಿದರು.

ಸದಸ್ಯ ಆರ್.ಎಲ್. ಶಿವಪ್ರಕಾಶ್ ಅವರು, ಉದ್ಯಾನವನಕ್ಕೆ ಜಾಗ ಬಿಡದೇ ಯಾವುದೇ ಡೋರ್ ನಂಬರ್ ಕೊಟ್ಟು ಸಕ್ರಮಗೊಳಿಸುವಂತಿಲ್ಲ ಎಂಬ ನಿಯಮವಿದ್ದರೂ ಸಹ ಬಿ.ಟಿ.ಲೇಔಟ್‌ನಲ್ಲಿ ಉದ್ಯಾನವನಕ್ಕೆ ಸ್ವಲ್ಪವೂ ಜಾಗ ಬಿಡದೇ ಅಕ್ರಮವಾಗಿ ಡೋರ್ ನಂಬರ್ ನೀಡಲಾಗಿದೆ. ಅದರಂತೆ ಗಣೇಶ್ ಲೇಔಟ್‌ನಲ್ಲೂ ಸಹ ಈ ರೀತಿ ಅಕ್ರಮ ನಡೆದಿದ್ದು, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಉಪ ಆಯುಕ್ತೆ ಲಕ್ಷ್ಮೀ ಅವರು, 76 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಬಡಾವಣೆಗಳಿಗೆ ಖಾತೆ ಮಾಡಿಕೊಡಲು ಅವಕಾಶವಿದೆ. ಇದಕ್ಕೆ ಕಾನೂನಿನ ತೊಡಲಿಲ್ಲ ಎಂದರು.

ಸ್ಮಶಾನದಲ್ಲಿ ಹೆಣ ಹೂಳಲು ಸುಮಾರು ನಾಲ್ಕೈದು ಸಾವಿರ ಕೇಳುತ್ತಾರೆ. ಬಡವರು ತಕ್ಷಣ ಹಣ ಎಲ್ಲಿಂದ ತರಬೇಕು. ಉಚಿತವಾಗಿ ಹೆಣ ಹೂಳಲು ಪಾಲಿಕೆಯಿಂದ ಆದೇಶ ಮಾಡುವ ಮೂಲಕ ಬಡವರಿಗೆ ಅನುಕೂಲ ಮಾಡಿಕೊಡಬೇಕೆಂದು ಕೆಲವು ಸದಸ್ಯರು ಆಯುಕ್ತರನ್ನು ಒತ್ತಾಯಿಸಿದರು.

ಸಭೆಯಲ್ಲಿ ಉಪ ಮೇಯರ್ ಸೋಗಿ ಶಾಂತಕುಮಾರ್, ಅಯಕ್ತರಾದ ರೇಣುಕಾ, ಮಾಜಿ ಮೇಯರ್ ಬಿ.ಹೆಚ್. ವಿನಾಯಕ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಉದಯಕುಮಾರ್, ಅಬ್ದುಲ್ ಲತೀಫ್, ಮೀನಾಕ್ಷಿ ಜಗದೀಶ್, ಕಬೀರ್‌ಖಾನ್, ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಮಂಜಾನಾಯ್ಕ, ಎ.ಬಿ. ರಹೀಂ, ಎಲ್.ಡಿ. ಗೋಣೆಪ್ಪ, ಆಶಾ ಉಮೇಶ್, ಸುಧಾ ಇಟ್ಟಿಗುಡಿ ಮಂಜುನಾಥ್, ಉಮಾ ಪ್ರಕಾಶ್, ಎಂ.ಕೆ. ಶಿವಲೀಲಾ , ಯಶೋಧ ಹೆಗ್ಗಪ್ಪ, ಕೆ.ಎಂ. ವೀರೇಶ್, ಸವಿತಾ ಗಣೇಶ್,  ವೀಣಾ ನಂಜಪ್ಪ ಸೇರಿದಂತೆ ಪಾಲಿಕೆ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಪಾಲಿಕೆ ಸಿಬ್ಬಂದಿ ಇದ್ದರು.

error: Content is protected !!