ಬಗರ್ ಹುಕ್ಕುಂ ಹಕ್ಕುಪತ್ರಕ್ಕಾಗಿ ಆಗ್ರಹ

ಬಗರ್ ಹುಕ್ಕುಂ ಹಕ್ಕುಪತ್ರಕ್ಕಾಗಿ ಆಗ್ರಹ

ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯಿಂದ ನಗರದಲ್ಲಿ ಧರಣಿ

ದಾವಣಗೆರೆ, ಅ.14- ಜಿಲ್ಲೆಯ ಬಗರ್ ಹುಕುಂ ಸಾಗುವಳಿದಾರರಿಗೆ ಹುಕ್ಕುಂ ಪತ್ರ‌ ನೀಡಬೇಕೆಂದು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಸೋಮವಾರ ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಲಾಯಿತು.

ಸಂಘಟನೆಯ ಮುಖಂಡರು, ಕಾರ್ಯಕರ್ತರು ಹಾಗೂ ಜಿಲ್ಲೆಯ ರೈತರು ನಗರದ ಜಯದೇವ ವೃತ್ತಕ್ಕೆ ಜಮಾಯಿಸಿ, ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಎಸಿ ಕಚೇರಿ ತಲುಪಿದರು.

ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಸಂಘಟನೆಯ ರಾಜ್ಯ ಕಾರ್ಯ ದರ್ಶಿ ನಾಗಮ್ಮ ಅವರು, ಒಂದು ಜಮೀನನ್ನು 5 ವರ್ಷಗಳ ಕಾಲ ಉಳುಮೆ ಮಾಡಿದರೆ ಅವನೇ ಭೂಮಿಯ ಮಾಲೀಕನಾಗುತ್ತಾನೆ. ಆದರೆ 50-60 ವರ್ಷಗಳಿಂದ ಜಮೀನು ಉಳುಮೆ ಮಾಡುತ್ತಿದ್ದರೂ ಕೆಲವು ರೈತರಿಗೆ ಸರ್ಕಾರ ಹಕ್ಕು ಪತ್ರ ನೀಡುತ್ತಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಕಳೆದರೂ ನಮ್ಮ ಮನವಿಗೆ ಸ್ಪಂದಿಸಿಲ್ಲ. ಸರ್ಕಾರಗಳು ಕುಂಟು ನೆಪ ಹೇಳುತ್ತಾ ಕಾಲ ಕಳೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳು ತಕ್ಷಣವೇ ಲ್ಯಾಂಡ್ ಗ್ರ್ಯಾಂಟ್ ಸಮಿತಿ ರಚನೆಗೆ ಲಿಖಿತ ಭರವಸೆ ನೀಡಬೇಕು ಮತ್ತು ರೈತರೊಂದಿಗೆ ಸಭೆ ನಡೆಸಲು ದಿನ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ದೇಹಲಿ ರೈತರ ಹೋರಾಟ ನಮಗೆ ಪ್ರೇರಣೆ. ಅವರು ನಡೆಸಿದ 13 ತಿಂಗಳ ರೈತರ ಹೋರಾಟವೇ ಧರಣಿಗೆ ಸ್ಫೂರ್ತಿ. ಹಾಗಾಗಿ ಎಲ್ಲರೂ ಶಾಂತಿ ಹಾಗೂ ಶಿಸ್ತಿನಿಂದ ನ್ಯಾಯ ಸಿಗುವವರೆಗೂ ಧರಣಿ ನಡೆಸೋಣ ಎಂದು ಹೇಳಿದರು.

ಜಿಲ್ಲೆಯಾದ್ಯಂತ ಸುಮಾರು 15 ಸಾವಿರಕ್ಕೂ ಅಧಿಕ ಬಗರ್‌ ಹುಕುಂ ಸಾಗುವಳಿದಾರರಿದ್ದು, ಇವರಿಗೆ ನ್ಯಾಯ ಒದಗಿಸಲು ಸರ್ಕಾರ ಹಾಗೂ ಜಿಲ್ಲಾಡಳಿತ ಮುಂದಾಗಬೇಕೆಂದು ರೈತರು ಒತ್ತಾಯಿಸಿದರು.

ಧರಣಿಯಲ್ಲಿ ಸಂಘಟನೆಯ ಅಖಿಲ ಭಾರತ ಉಪಾಧ್ಯಕ್ಷ ಡಾ. ಸುನೀತ್ ಕುಮಾರ್, ರಾಜ್ಯಕಾ ರ್ಯದರ್ಶಿ ಭಗವಾನ್ ರೆಡ್ಡಿ, ಜಿಲ್ಲಾಧ್ಯಕ್ಷ ಮಧು ತೊಗಲೇರಿ, ಕಾರ್ಯದರ್ಶಿ ನಾಗಸ್ಮಿತ, ಉಪಾಧ್ಯ ಕ್ಷರಾದ ಬಸವರಾಜಪ್ಪ ನೀರ್ಥಡಿ, ಭೀಮಣ್ಣ ಮಾಯಕೊಂಡ, ಸಹ ಕಾರ್ಯದರ್ಶಿಗಳಾದ ನಾಗರಾಜ ರಾಮಗೊಂಡನಹಳ್ಳಿ, ಮಂಜುನಾಥ್ ರೆಡ್ಡಿ, ಸತೀಶ್‌ ಕೈದಾಳೆ ಮತ್ತಿತರರಿದ್ದರು.

error: Content is protected !!