ಜಗಳೂರು ಕೆರೆ ವೀಕ್ಷಿಸಿ ಬಾಗಿನ ಅರ್ಪಿಸಿದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಜಗಳೂರು, ಅ.13- ಈ ವರ್ಷದಂತೆ ಪ್ರತಿ ವರ್ಷವೂ ಕೆರೆ ಕೋಡಿ ಬಿದ್ದು, ಬರದ ನಾಡು ಜಗಳೂರು ಶಾಶ್ವತವಾಗಿ ಬಂಗಾರದ ನಾಡಾಗುವುದು ನಿಶ್ಚಿತ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ಪಟ್ಟಣದ ಕೆರೆ ಕೋಡಿ ಬಳಿ ಆಯೋಜಿಸಲಾಗಿದ್ದ ಕೆರೆ ವೀಕ್ಷಣೆ ಹಾಗೂ ಬಾಗಿನ ಅರ್ಪಣಾ ಕಾರ್ಯಕ್ರಮದಲ್ಲಿ ಬಾಗಿನ ಅರ್ಪಿಸಿ, ನಂತರ ದಿವ್ಯ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.
ಯಾವುದೇ ಯಂತ್ರೋಪಕರಣಗಳಿಲ್ಲದ ಕಾಲಘಟ್ಟದಲ್ಲಿ ರಾಜ ಮಹಾರಾಜರುಗಳು ಜನಪರ ಕಾಳಜಿಯಿಂದ ದೂರದೃಷ್ಠಿಯಿಂದ ನಿರ್ಮಿಸಿದ ಕೆರೆಗಳು ಮಧ್ಯ ಕರ್ನಾಟಕದಲ್ಲಿ ನೀರಾವರಿ ಜಾಲದಂತಿದ್ದು ಒಂದು ಕೆರೆ ಮತ್ತೊಂದು ಕೆರೆಯನ್ನು ಸಂಪರ್ಕ ಹೊಂದಲು ಶ್ರಮಿಸಿದ ಪೂರ್ವಜರ ಸತ್ಕಾರ್ಯದ ಫಲವಾಗಿ ಇಂದು ನೀರಾವರಿ ಸಂಪನ್ಮೂಲ ಬಳಕೆ ನಮ್ಮದಾಗಿದೆ ಎಂದು ಸ್ಮರಿಸಿದರು.
ಪಟ್ಟಣದಲ್ಲಿ 2019ರಲ್ಲಿ ನಡೆದ ತರಳಬಾಳು ಹುಣ್ಣಿಮೆಯಲ್ಲಿನ ಸಂಕಲ್ಪದಂತೆ ಎಚ್.ಪಿ.ರಾಜೇಶ್ ಸಹಕಾರದಿಂದ ಹಾಲಿ ಮುಖ್ಯಮಂತ್ರಿಯೂ ಆಗಿರುವ ಸಿದ್ದರಾಮಯ್ಯ ಜಗಳೂರು- ಮತ್ತು ಭರಮಸಾಗರ ನೀರಾವರಿ ಯೋಜನೆಗಳಿಗೆ 500 ಕೋಟಿ ರೂ. ಬಜೆಟ್ ನಲ್ಲಿ ಘೋಷಿಸಿದ್ದರು.
ನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಮಾಜಿ ಶಾಸಕ ಎಸ್.ವಿ.ರಾಮಚಂದ್ರಗೆ ರಾಜೀನಾಮೆ ಸಲ್ಲಿಸಲು ಸೂಚಿಸಿದಾಗ, 5 ಜನ ಸಚಿವರುಗಳಿಗೆ ವಿರೋಧ ವ್ಯಕ್ತಪಡಿಸಿದ ವೇಳೆ ನಮ್ಮ ಬೇಡಿಕೆಯಂತೆ ವಾರದಲ್ಲಿಯೇ 1200ಕೋಟಿ ರೂ. ಅನುದಾನದ ಐತಿಹಾಸಿಕ ಮರು ಆದೇಶದ ಫಲವಾಗಿ ಹಲವಾರು ಕೆರೆಗಳು ನೀರು ತುಂಬಿ ಕೆರೆ ಕೋಡಿ ಬೀಳುತ್ತಿವೆ ಎಂದರು.
ಧರ್ಮ ಮತ್ತು ಕಾನೂನು ಒಗ್ಗೂಡಿದಾಗ ಯಶಸ್ವಿ ಸಾಧ್ಯ. ಧರ್ಮ ಗುರುಗಳ ಸಲಹೆಗಳನ್ನು ಪಕ್ಷಾತೀತವಾಗಿ ಸ್ವೀಕರಿಸಿದ ಎಲ್ಲಾ ಪಕ್ಷದ ರಾಜಕಾರಣಿಗಳು, ರೈತರು,ಅಧಿಕಾರಿಗಳಿಗೆ ಅಭಿನಂದನೆಗಳು ಎಂದರು.
ಬಾಕಿ ಇರುವ 11 ಕೆರೆಗಳ ಪೈಪ್ ಲೈನ್ ಕಾಮಗಾರಿಯನ್ನು ಒಂದು ತಿಂಗಳೊಳಗಾಗಿ ಪೂರ್ಣಗೊಳಿಸಿ, ದೀಟೂರು ಬಳಿ 8 ಪಂಪ್ ಗಳೂ ಚಾಲನೆಗೊಂಡು ಕಾರ್ಯರೂಪ ಗೊಳ್ಳಲು ಶಾಸಕರು, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಏತ ನೀರಾವರಿ ಸಾಮಾಜಿಕ ಜಾಲತಾಣ ಗ್ರೂಪ್ ರಚಿಸಿಲಾಗಿದ್ದು. ರೈತರಿಂದ ಪ್ರತಿನಿತ್ಯ ಕೆರೆಗಳ ಸ್ಥಿತಿಗತಿಗಳನ್ನು ಮಾಹಿತಿ ಪಡೆಯಲಾಗುತ್ತಿದೆ ಎಂದು ಶ್ರೀಗಳು ಮಾಹಿತಿ ನೀಡಿದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಕೆರೆ ಉಂಬಿಸುವ ಯೋಜನೆಯನ್ನು ಸಾಕಾರಗೊಳಿ ಸುವ ಮೂಲಕ ಸಿರಿಗೆರೆ ಶ್ರೀಗಳು ಕಲಿಯುಗದ ಶ್ರೀಕೃಷ್ಣರಾಗಿ ಕ್ಷೇತ್ರದ ಜನತೆಗೆ ಜಲಾಮೃತ ಉಣಬಡಿಸುತ್ತಿದ್ದಾರೆ ಎಂದು ಬಣ್ಣಿಸಿದರು.
5 ದಶಕಗಳ ನಂತರ ಜಗಳೂರು ಕೆರೆ ಕೋಡಿ ಬಿದ್ದಿರುವ ಸಂತಸಕ್ಕೆ ಶ್ರೀಗಳ ಸಲಹೆ ಪಡೆದು ಅದ್ದೂರಿಯಾಗಿ ಪಕ್ಷಾತೀತವಾಗಿ `ಜಗಳೂರು ಉತ್ಸವ’ ಆಚರಿಸಲಾಗುವುದು. ಗಂಡನ ಮನೆಯಲ್ಲಿರುವ ಮಹಿಳೆಯರು ಉತ್ಸವಕ್ಕೆ ಆಗಮಿಸಿ ತವರಿನ ಜಲಸಿರಿಯನ್ನು ವೀಕ್ಷಿಸಿ ಸಂತಸಪಡಬೇಕು ಎಂದರು.
ನೀರಾವರಿ ಇಲಾಖೆ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಮಾತನಾಡಿ ,ನೀರಾವರಿ ಯೋಜನೆ ರೈತರಿಗೆ ಆರ್ಥಿಕ, ಸಾಮಾಜಿಕ ಬದಲಾವಣೆಗೆ ಕಾರಣವಾಗುತ್ತವೆ. ಕೆರೆಗಳಲ್ಲಿನ ಜಾಲಿಗಿಡಗಳನ್ನು ತೆರವುಗೊಳಿಸಲು ರೈತರು ಕೈಜೋಡಿಸಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ನನ್ನ ಆಡಳಿತಾವಧಿಯಲ್ಲಿ ರೂಪುಗೊಂಡ 57 ಕೆರೆತುಂಬಿಸುವ ಯೋಜನೆ ಸರ್ವರ ಸಹಕಾರದಿಂದ ಯಶಸ್ವಿಯಾಗಿ ಕೆರೆಕೋಡಿಬಿದ್ದಿವೆ. ಆಡಳಿತರೂಢ ಸರ್ಕಾರದ ಶಾಸಕರು ಬಹುಗ್ರಾಮ ಕುಡಿಯುವ ನೀರು, ಭದ್ರಾಮೇಲ್ದಂಡೆ ಯೋಜನೆ ಸಕಾರಗೊಳಿಸಿ ಬರದನಾಡನ್ನು ಅಭಿವೃದ್ದಿ ನಾಡನ್ನಾಗಿಸಲು ಕಾಳಜಿವಹಿಸಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ನನ್ನ ಆಡಳಿತಾವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಸಹಕಾರದಿಂದ ಎರಡೂ ನೀರಾವರಿ ಯೋಜನೆಗಳಿಗೆ ಚಾಲನೆ ಸಿಕ್ಕಿತ್ತು. ಯೋಜನೆ ಸಾಕಾರಗೊಳ್ಳಲು ಸಿರಿಗೆರೆ ಶ್ರೀಗಳ ಆದೇಶ ದಂತೆನಾನು ಶಾಸಕ ಸ್ಥಾನಕ್ಕೆ ರಾಜಿನಾಮೆಗೂ ಸಿದ್ದನಾಗಿದ್ದೆ. ಇಂದು ಕೆರೆಗಳು ಕೋಡಿಬಿದ್ದಿವೆ. ಸಿರಿಗೆರೆ ಶ್ರೀಗಳು ಗುಡುಗಿದರೆ ವಿಧಾನಸೌಧವೂ ನಡುಗುತ್ತದೆ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ ಎಂದರು.
ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಪಿ.ಪಾಲಯ್ಯ, ಎಂ.ಡಿ.ಕೀರ್ತಿಕುಮಾರ್, ಪ.ಪಂ.ಅಧ್ಯಕ್ಷ ನವೀನ್, ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ, ತಾ.ಪಂ ಇಓ ಕೆಂಚಪ್ಪ, ಡಾ.ರವಿಕುಮಾರ್, ಶಿವನಗೌಡ, ಪಿ.ಎಸ್.ಸುರೇಶ್ ಗೌಡ, ಎನ್.ಎಸ್.ರಾಜು, ಗುತ್ತಿಗೆದಾರ ಶಂಕರ್ ಮುಂತಾದವರು ಇದ್ದರು.