ಘನತೆಗೆ ಧಕ್ಕೆ ಆಗಿರುವ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು

ಘನತೆಗೆ ಧಕ್ಕೆ ಆಗಿರುವ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು

ನಮ್ಮ ಪಕ್ಷದವರೇ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡುತ್ತಿರುವಾಗ, ಜಾರಕಿಹೊಳಿ-ಮಹಾದೇವಪ್ಪ ಮಾತಾಡಿದರೆ ತಪ್ಪೇನಿದೆ ? 

– ಜಿ.ಎಂ. ಸಿದ್ದೇಶ್ವರ 

ಹರಿಹರ, ಅ.8- ನಮ್ಮ ಪಕ್ಷದ ಮುಖಂಡರೇ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಭೇಟಿ ಮಾಡುತ್ತಿರುವಾಗ, ಅವರ ಪಕ್ಷದ ಮುಖಂಡರು, ಅವರದೇ ಪಕ್ಷದ ಮುಖಂಡರನ್ನು  ಭೇಟಿ ಮಾಡಿ ಮಾತನಾಡುವುದರಲ್ಲಿ  ತಪ್ಪೇನಿದೆ ಎಂದು ಮಾಜಿ  ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ನಗರದ ಶಿವಮೊಗ್ಗ ರಸ್ತೆಯ ಹರ ವಿವಿಧೋದ್ದೇಶ ಸಹಕಾರ ಸಂಘದ  ಆವರಣದಲ್ಲಿ ಬಿಜೆಪಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು.  

ನಮ್ಮ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ,  ಕಾಂಗ್ರೆಸ್ ಪಕ್ಷದ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ನಿನ್ನೆ   ಭೇಟಿ ಮಾಡಿ ಮಾತನಾಡಿರುವಾಗ,  ಸತೀಶ್ ಜಾರಕಿಹೊಳಿ,  ತಮ್ಮದೇ ಪಕ್ಷದ ಸಚಿವ  ಮಹಾದೇವಪ್ಪನವರನ್ನು ಭೇಟಿ ಮಾಡಿ ಮಾತನಾಡಿರುವುದರಲ್ಲಿ  ತಪ್ಪು ಏನಿದೆ ? ಎಂದು ಹೇಳಿದರು. 

ಮುಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಘನತೆಗೆ ಧಕ್ಕೆ ತಂದುಕೊಂಡಿದ್ದು, ಈ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ  ಹೆಚ್ಚು ಸದಸ್ಯತ್ವವನ್ನು ಮಾಡಬೇಕೆಂಬ ಗುರಿ ಹೊಂದಲಾಗಿದೆ ಎಂದು ಹೇಳಿದರು

ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಈಗಾಗಲೇ ತಾಲ್ಲೂಕಿನ ಚಿಕ್ಕಬಿದರಿ, ಸಾರಥಿ, ದೀಟೂರು, ಕೊಂಡಜ್ಜಿ, ದೇವರಬೆಳಕೇರೆ, ಹರಳಹಳ್ಳಿ, ಹಾಲಿವಾಣ ಕುಂಬಳೂರು ಸೇರಿದಂತೆ ಇತರೆ ಗ್ರಾಮೀಣ ಪ್ರದೇಶಗಳಲ್ಲಿ ಸದಸ್ಯತ್ವ ಅಭಿಯಾನ ಮಾಡಲಾಗಿದ್ದು, ಹರಿಹರ ನಗರದಲ್ಲಿಯೂ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರ ಜಾತಿ ಗಣತಿ ಕಾರ್ಯವನ್ನು ಮತ್ತೆ ಮುನ್ನೆಡೆಗೆ ತರುವುದಕ್ಕೆ ಮುಂದಾಗಿದ್ದು, ಈ ಸಮಯದಲ್ಲಿ ಉಪ ಜಾತಿ ಜನಸಂಖ್ಯೆ ಹೆಚ್ಚು ಇರುವ ಕಡೆಗಳಲ್ಲಿ ಜಾತಿ ಗಣತಿ ಮಾಡಿ, ಮುಖ್ಯ ಜಾತಿ ಜನಾಂಗದ ಜನಸಂಖ್ಯೆ ಹೆಚ್ಚು ಇರುವ ಕಡೆಗಳಲ್ಲಿ ಸರ್ವೆ ಮಾಡದೇ  ತಮಗೆ ಇಷ್ಟ ಬಂದಂತೆ ಸರ್ವೆ ಮಾಡಿದ್ದಾರೆ.  ಹಾಗಾಗಿ ಇದನ್ನು  ನಾನು ಸಂಪೂ ರ್ಣವಾಗಿ ವಿರೋಧಿಸುವುದಾಗಿ ಹೇಳಿದರು.

ಜಿಪಂ ಮಾಜಿ ಅಧ್ಯಕ್ಷ ಎಸ್ ಎಂ. ವೀರೇಶ್ ಹನಗವಾಡಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಡಾ ಹಗರಣವನ್ನು ಮುಚ್ಚಿ ಹಾಕುವ ದೃಷ್ಟಿಯಿಂದ, ಜನರಿಗೆ ದಿಕ್ಕು ಬದಲಿಸಲು ಜಾತಿಗಣತಿ ವಿಚಾರವನ್ನು ಮುಂದೆ ತರುವುದಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು. 

 ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಅಣ್ಣಪ್ಪ ಐರಣಿ ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ 62410 ಜನರು ಸದಸ್ಯತ್ವವನ್ನು ಹೊಂದಿದ್ದು, ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಲ್ಲಿ 50 ಸಾವಿರ ಸದಸ್ಯತ್ವದ ಗುರಿಯನ್ನು ಹೊಂದಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಪ್ರಧಾನ ಕಾರ್ಯದರ್ಶಿ ತುಳಜಪ್ಪ ಭೂತೆ, ಗ್ರಾಮೀಣ ಘಟಕದ ಅಧ್ಯಕ್ಷ ಲಿಂಗರಾಜ್ ಹಿಂಡಸಗಟ್ಟ, ಕಾರ್ಯದರ್ಶಿ ಮಹಾಂತೇಶ್, ಮುಖಂಡರಾದ ನಂದಿಗಾವಿ ರಮೇಶ್, ಕೆಂಚನಹಳ್ಳಿ ಮಹಾಂತೇಶ್, ಸಾಕ್ಷಿ,  ರವಿರಾಯ್ಕರ್, ವಿನಾಯಕ ಆರಾಧ್ಯಮಠ, ಗಣೇಶ, ಶಶಿಧರ್ ಮತ್ತು ಇತರರು ಹಾಜರಿದ್ದರು.

error: Content is protected !!