ಕೃಷಿ ಚಟುವಟಿಕೆಗೆ ಅಡ್ಡಿ : ಹರಿಹರದಲ್ಲಿ ರೈತರ ಪ್ರತಿಭಟನೆ

ಕೃಷಿ ಚಟುವಟಿಕೆಗೆ ಅಡ್ಡಿ : ಹರಿಹರದಲ್ಲಿ ರೈತರ ಪ್ರತಿಭಟನೆ

ಹರಿಹರ, ಅ.9- ಕರ್ನಾಟಕ ರಾಜ್ಯ ರೈತ ಸಂಘ,  ವಾಸುದೇವ ಮೇಟಿ ಬಣದ ವತಿಯಿಂದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿ,  ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. 

ಈ ವೇಳೆ ರೈತ ಸಂಘದ ಜಿಲ್ಲಾ ಅಧ್ಯಕ್ಷ ಗುಮ್ಮನೂರು ಬಸವರಾಜ್ ಮಾತನಾಡಿ, ಹರಿಹರ – ಕೊಟ್ಟೂರು ರೈಲು ಮಾರ್ಗದ ಅಕ್ಕ ಪಕ್ಕದ ಜಮೀನುಗಳಿಗೆ ಓಡಾಡುವುದಕ್ಕೆ ರಸ್ತೆ ಇಲ್ಲದ ಕಾರಣ ಕೃಷಿ ಚಟುವಟಿಕೆಗಳನ್ನು ಸುಲಲಿತವಾಗಿ ನಡೆಸಿಕೊಂಡು ಹೋಗುವುದಕ್ಕೆ ಆಗುತ್ತಿಲ್ಲ. ಹಾಗಾಗಿ  ರಸ್ತೆ ನಿರ್ಮಾಣ ಮಾಡಬೇಕು. ಸಾರಥಿ, ಕುರುಬರಹಳ್ಳಿ ಗ್ರಾಮದಲ್ಲಿ ರೈತರ 600 ಎಕರೆ ಜಮೀನನ್ನು ಕೆ.ಐ.ಎ.ಡಿ.ಬಿ. ಯೋಜನೆಗೆ ಭೂಸ್ವಾಧೀನ ಮಾಡಿ, ಇದುವರೆಗೂ ಕಾರ್ಖಾನೆಗಳನ್ನು ಅನುಷ್ಠಾನಗೊಳಿಸಿಲ್ಲ. ಆದಷ್ಟು ಬೇಗ ಕಾರ್ಖಾನೆ ಸ್ಥಾಪಿಸಿ, ಕೂಲಿ ಕಾರ್ಮಿಕರ ಮಕ್ಕಳಿಗೆ ಉದ್ಯೋಗ  ಒದಗಿಸಬೇಕು ಎಂದು ಒತ್ತಾಯಿಸಿದರು.  

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹೊಟ್ಟೆಗೇನಹಳ್ಳಿ ಸುನಿಲ್ ಮಾತನಾಡಿ, ತಾಲ್ಲೂಕು ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯಿಂದ ಕೃಷಿ ಉಪಕರಣಗಳಿಗೆ ರೈತರು ಸಲ್ಲಿಸಿದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ರೈತರ  ಪಂಪ್ ಸೆಟ್ ಗಳಿಗೆ ಮೊದಲಿನಂತೆ ಉಚಿತ ವಿದ್ಯುತ್ ಪರಿಕರಗಳನ್ನು ವಿತರಣೆ ಮಾಡಬೇಕು. ರೈತರು ಬೆಳೆದ ಬೆಳೆಗಳಿಗೆ ಕಾನೂನಾತ್ಮಕ ಬೆಲೆ ನಿಗದಿಪಡಿಸಬೇಕು. ರಾಜ್ಯ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು, ದುಗ್ಗಾವತಿಯಿಂದ ಹೊಟ್ಟೆಗೇನಹಳ್ಳಿ ಸಂಪರ್ಕಿಸುವ ರಸ್ತೆಯನ್ನು ದುರಸ್ತಿ ಪಡಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಮುಖಂಡರಾದ ಸಿ. ಹನುಮಂತಪ್ಪ, ಸುನಿಲ್ ಬುಳ್ಳಾಪುರ, ಕೆ.ಎಸ್. ಹನುಮಂತಪ್ಪ, ಮಲ್ಲಿಕಾರ್ಜುನ, ಪರಶುರಾಮಪ್ಪ, ಹುಚ್ಚೆಂಗಪ್ಪ, ಕಿರಣ್, ಜಿ.ಎಂ. ಕುಬೇಂದ್ರಪ್ಪ, ರಾಮಜ್ಜ, ನಾಗರಾಜ್, ಕುಬೇರಪ್ಪ, ಚಂದ್ರಪ್ಪ,‌ ಗಿರಿಜಮ್ಮ, ಗಾಯತ್ರಿ, ಯಶೋಧಮ್ಮ, ಪದ್ಮಮ್ಮ, ಕೆಂಚಮ್ಮ ಇತರರು ಹಾಜರಿದ್ದರು.

error: Content is protected !!