ಸರ್ಕಾರದಿಂದ ‘ಖಾಜಿ ನ್ಯಾಯ’

ಸರ್ಕಾರದಿಂದ ‘ಖಾಜಿ ನ್ಯಾಯ’

ಗಣಪತಿ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಬಂಧನದಲ್ಲಿರುವವರ ಭೇಟಿ ಮಾಡಿದ ಬಿಜೆಪಿ ನಾಯಕ

ದಾವಣಗೆರೆ, ಅ. 9 – ಗಣಪತಿ ಪ್ರತಿಷ್ಠಾಪನೆ ಮಾಡಿದವರ ಮೇಲೆ ಪ್ರಕರಣ ದಾಖಲಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರ ‘ಖಾಜಿ ನ್ಯಾಯ’ ಮಾಡುತ್ತಿದೆ ಎಂದು ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ಕಿಡಿ ಕಾರಿದ್ದಾರೆ.

ನಗರದಲ್ಲಿ ಗಣಪತಿ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಬಂಧಿತರಾಗಿ ರುವವರನ್ನು ವಸಂತ ರಸ್ತೆಯ ಬಂದಿಖಾನೆ ಯಲ್ಲಿ ಭೇಟಿ ಮಾಡಿದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ದಾವಣಗೆರೆಯಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ನಡೆಸುತ್ತಿರುವಾಗ, ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರ ಮುಸಲ್ಮಾನರು ಹಾಗೂ ಹಿಂದೂಗಳಿಬ್ಬರ ಮೇಲೂ ಪ್ರಕರಣ ದಾಖಲಿಸುವ ಖಾಜಿ ನ್ಯಾಯ ಮಾಡುತ್ತಿದೆ ಎಂದವರು ಕಿಡಿ ಕಾರಿದರು.

ನಾಗಮಂಗಲದಲ್ಲೂ ಸಹ ಮುಖ್ಯ ರಸ್ತೆಯಲ್ಲಿ ಗಣಪತಿ ತೆಗೆದು ಕೊಂಡು ಹೋಗಬಾರದು ಎಂಬ ಬೆದರಿಕೆ ಹಾಕಲಾಗಿ ತ್ತು. ಅಲ್ಲಿಯೂ ಸಹ ಗಣಪತಿ ಪ್ರತಿಷ್ಠಾಪನೆ ಮಾಡಿದವರನ್ನೇ ಮೊದಲ ಆರೋಪಿ ಮಾಡ ಲಾಗಿದೆ ಎಂದು ಸಿ.ಟಿ. ರವಿ ಆಕ್ಷೇಪಿಸಿದರು. ಅದು ಹಾಗೆ ಆಗಬಾರದು. ಗಣಪತಿ ಮೆರ ವಣಿಗೆ ಮಾಡಬಾರದು ಎನ್ನುವ ಮತಾಂಧರ ಹೆಡೆಮುರಿ ಕಟ್ಟುವ ಕೆಲಸ ಮಾಡಬೇಕು. ಆದರೆ, ಕಾಂಗ್ರೆಸ್ ಪಕ್ಷ ಮತಾಂಧರನ್ನೇ ವೋಟ್ ಬ್ಯಾಂಕ್ ಎಂದು ಪರಿಗಣಿಸಿ ರಾಜಕಾರಣ ಮಾಡುತ್ತಿದೆ. ಇದರಿಂದ ದೊಡ್ಡ ಅಪಾಯ ಬರುತ್ತಿದೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಮನಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ. ಕೋಮು ಶಕ್ತಿಗಳು ವಿಜೃಂಭಿಸುತ್ತಿವೆ ಎಂದವರು ಹೇಳಿದರು.

ನಾವು ಬಂಧಿತರಿಗೆ ಧೈರ್ಯ ತುಂಬಿಸುವ ಕೆಲಸ ಮಾಡಿದ್ದೇವೆ. ನೀವೇನೂ ಅಪರಾಧ ಮಾಡಿ ಬಂದವರಲ್ಲ, ಸದುದ್ದೇಶದಿಂದ ಕೆಲಸ ಮಾಡಿದ್ದೀರಿ ಎಂದು ತಿಳಿಸಿದ್ದೇವೆ. ಈ ಕಾರಣಕ್ಕಾಗಿ ಹೆದರಬಾರದು ಎಂದು ಹೇಳಿದ್ದೇವೆ ಎಂದು ತಿಳಿಸಿದರು.

ಬಂಧಿತರ ಪರವಾಗಿ ವಕೀಲರ ತಂಡ ಈಗಾಗಲೇ ವಕಾಲತ್ತು ಮಾಡಿದೆ. ಬರುವ ಅ. 14ರಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಜಾಮೀನು ಸಿಗುವ ವಿಶ್ವಾಸವಿದೆ. ಬಂಧಿತರಲ್ಲಿ ಕೆಲವರು ವಿದ್ಯಾರ್ಥಿಗಳೂ ಇದ್ದಾರೆ, ಈ ಬಗ್ಗೆ ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ ಎಂದು ರವಿ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್.ಶಿವಯೋಗಿ ಸ್ವಾಮಿ, ಬಿಜೆಪಿ ಮುಖಂಡರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಧನಂಜಯ ಕಡ್ಲೇಬಾಳು, ಐರಣಿ ಅಣ್ಣೇಶ್, ಅನಿಲ್ ಕುಮಾರ್, ಕೊಳೇನಹಳ್ಳಿ ಸತೀಶ್, ವೈ. ಮಲ್ಲೇಶ್, ಶಿವನಗೌಡ ಪಾಟೀಲ್, ಕೆ.ಎಂ. ಸುರೇಶ್, ಹೆಚ್.ಎಂ. ಶಿವಕುಮಾರ್, ಟಿಂಕರ್ ಮಂಜಣ್ಣ, ಆವರಗೊಳ್ಳ ಷಣ್ಮುಖಯ್ಯ, ಕೃಷ್ಣಮೂರ್ತಿ ಪವಾರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!