ಧೂಮಕೇತು ಅಪಶಕುನವಲ್ಲ

ಧೂಮಕೇತು ಅಪಶಕುನವಲ್ಲ

ಬಾಹ್ಯಾಕಾಶ ಕೌತುಕಗಳ ಜಾಗೃತಿ ಅಗತ್ಯ: ಖಗೋಳ ತಜ್ಞ ಶರಣಪ್ಪ

ಎ.ವಿ. ಕಮಲಮ್ಮ ಕಾಲೇಜಿನಲ್ಲಿ `ಆಕಾಶ ಕೌತುಕ’ ಕಾರ್ಯಕ್ರಮ

ದಾವಣಗೆರೆ, ಅ.8- ಬಹುತೇಕರು ಗ್ರಹಣದ ಸಮಯದಲ್ಲಿ ಮೌಢ್ಯಾಚರಣೆ ಗಳಿಗೆ ಒಳಗಾಗುತ್ತಿದ್ದು, ಬಾಹ್ಯಾಕಾಶ ದಲ್ಲಿ ವಿಸ್ಮಯಗಳನ್ನು ವೀಕ್ಷಿಸುವ ಅದ್ಭುತ ಅವಕಾಶಗಳಿಂದ ವಂಚಿತರಾಗುತ್ತಿದ್ದೇವೆ. ಜನಸಾಮಾನ್ಯರಲ್ಲಿ ಬಾಹ್ಯಾಕಾಶ ಕೌತುಕಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲೆಯ ಖಗೋಳ ತಜ್ಞ ಎಂ.ಟಿ. ಶರಣಪ್ಪ ಹೇಳಿದರು.

ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ, ಜಿಲ್ಲಾ ಬಾಲಭವನ ಸಮಿತಿ ಹಾಗೂ ಎವಿಕೆ ಕಾಲೇಜು ಸಹ ಯೋಗದಲ್ಲಿ ಇಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ `ಆಕಾಶ ಕೌತುಕ’ ಕುರಿತು ಉಪನ್ಯಾಸ ನೀಡಿದರು.

ಇದೇ ದಿನಾಂಕ 12 ರ ಶನಿವಾರ ಧೂಮಕೇತು ಭೂಮಿಗೆ ತುಂಬಾ ಹತ್ತಿರಕ್ಕೆ ಬರಲಿದ್ದು, ಅಂದು ಸಂಜೆ 6.46  ನಿಮಿಷದಿಂದ ಬರಿಗಣ್ಣಿನಿಂದ ನೋಡಬಹು ದಾಗಿದೆ. ಇದು ಮತ್ತೆ ಭೂಮಿಗೆ ಬರುವುದು 80 ವರ್ಷಗಳ ನಂತರ ಎಂದರು.

ಧೂಮಕೇತುವನ್ನು ಬರಿಗಣ್ಣಿನಿಂದ ನೋಡುವುದು ಅಪಶಕುನವಲ್ಲ. ಬದಲಿಗೆ ಅದೊಂದು ಕೌತುಕ. ಆದ್ದರಿಂದ ಆಕಾಶಕಾಯಗಳು, ಸೌರವ್ಯೂಹ ಮತ್ತು ಧೂಮಕೇತುಗಳ ಬಗ್ಗೆ ಪರಿಚಯ ಮಾಡಿಕೊಳ್ಳಬೇಕಾಗಿದೆ. ಮೌಢ್ಯವನ್ನು ಬಿಟ್ಟು ಧೂಮಕೇತು ನೋಡಿ ಎಂದು ಕರೆ ನೀಡಿದರು.

ಗ್ರಹಣ, ಸಂಕ್ರಮಣ ಹಾಗೂ ಅಚ್ಛಾದನೆಗಳನ್ನು ವಿವರಿಸಿದ ಅವರು, ನಮ್ಮಲ್ಲಿ ಬಹುತೇಕರು ಗ್ರಹಣದ ಸಮಯದಲ್ಲಿ ತುಂಬಾ ಮೌಢ್ಯಗಳ ಆಚರಣೆ ಮಾಡು ತ್ತೇವೆ. ಆದರೆ ಗ್ರಹಣಗಳು ಬಾಹ್ಯಾಕಾಶದಲ್ಲಿ ನಡೆಯುವ ಸಾಮಾನ್ಯ ಚಟುವಟಿಕೆಗಳು ಎಂದು ತಿಳಿಸಿದರು.

ಕೆಲವು ಜ್ಯೋತಿಷಿಗಳು ಮೌಢ್ಯವನ್ನೇ ಬಂಡವಾಳವನ್ನಾಗಿಸಿಕೊಂಡು ಇಲ್ಲಸಲ್ಲದ ಆಚರಣೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಆದರೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ದಾವಣಗೆರೆ ಜಿಲ್ಲಾ ಘಟಕ ಗ್ರಹಣದ ಸಮಯದಲ್ಲಿಯೇ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬರುತ್ತಿರುವುದರಿಂದ ಜಿಲ್ಲೆಯಲ್ಲಿ ಮೌಢ್ಯಗಳ ಹಾಗೂ ಮೌಢ್ಯ ಬಿತ್ತುವವರ ಕುರಿತು ಜನಸಾಮಾನ್ಯರು ಜಾಗೃತರಾಗಿದ್ದಾರೆ ಎಂದರು.

ಬಾಹ್ಯಾಕಾಶದಲ್ಲಿ ನಡೆಯುವ ಕೌತುಕಭರಿತ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸು ವಂತಹ ಕಾರ್ಯಕ್ರಮಗಳು ಕಡಿಮೆಯಾಗಿವೆ.  ಆದ್ದರಿಂದಲೇ ಬಹುತೇಕರು ಬಾಹ್ಯಾಕಾಶ ವಿಸ್ಮಯಗಳನ್ನು ವೀಕ್ಷಿಸುವ ಅದ್ಭುತ ಅವಕಾಶಗಳಿಂದ ವಂಚಿತರಾಗಿದ್ದಾರೆಂದರು.

ಇದೇ ದಿನಾಂಕ 14 ರಂದು ಆಕಾಶದಲ್ಲಿ ಶನಿಗ್ರಹ ಕಾಣಲಿದ್ದು, ಅದರೊಂದಿಗೆ ಚಂದ್ರನ ಪಕ್ಕದಲ್ಲಿರುವ ಗ್ರಹವೊಂದು ಶನಿ ಗ್ರಹವನ್ನು ಹಿಂದಿನಿಂದ ಸುತ್ತಿ ಹೊರಗೆ ಬರಲಿದೆ. ಇದರೊಂದಿಗೆ ಧೂಮಕೇತು ಸಹ ಗೋಚರಿಸಲಿದ್ದು, ಈ ತಿಂಗಳಲ್ಲಿ ಮೂರು ಕೌತುಕಗಳು ಆಕಾಶದಲ್ಲಿ ನಡೆಯಲಿವೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ದಾವಣಗೆರೆ ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಾ.ಜೆ.ಬಿ. ರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಗತ್ತಿನಲ್ಲಿ ನಡೆಯುವ ಕೌತುಕಗಳನ್ನು ನೋಡುವ ಅವಕಾಶಗಳಿಂದ ಯಾರೂ ಕೂಡ ವಂಚಿತರಾಗಬಾರದು ಎಂದು ಸಲಹೆ ನೀಡಿದರು.

ಇಂದಿನ ವಿದ್ಯಾವಂತ ಜನರಲ್ಲಿಯೇ ಅತಿಹೆಚ್ಚು ಮೌಢ್ಯಗಳ ಆಚರಣೆಗಳನ್ನು ಕಾಣುತ್ತೇವೆ. ಬೆಕ್ಕು ದಾರಿಗೆ ಅಡ್ಡ ಬಂದರೆ ಸ್ವಲ್ಪ ಸಮಯ ನಿಂತು ಮುಂದೆ ಸಾಗುತ್ತೇವೆ. ಇಂತಹ ಮೌಢ್ಯಗಳಿಂದ ದೂರ ಇರುವ ಮೂಲಕ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಂಡು ಇತರರಿಗೆ ಮಾದರಿಯಾಗಬೇಕಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯ ಕ್ರಮ ನಿರೂಪಣಾಧಿಕಾರಿ ಗುರುಪ್ರಸಾದ್ ಮಾತನಾಡಿ, ನಾವು ನಿತ್ಯ  ಆಕಾಶ ನೋಡುತ್ತೇವೆ. ಆದರೆ ಕೌತುಕಭರಿತ ಅಂಶಗಳ ಕುರಿತು ಯೋಚಿಸುವುದು ಕಡಿಮೆ. ಆಗಸ ಎಷ್ಟು  ವಿಶಾಲವಾಗಿದೆಯೋ ಅಷ್ಟೇ ಕೌತುಕವಾಗಿದೆ. ಅದನ್ನು ನೋಡುವ ನಮ್ಮ ಒಳದೃಷ್ಟಿ ಕುತೂಹಲಭರಿತ ವಾಗಿರಬೇಕು. ಆಗ ಮಾತ್ರ ನಿತ್ಯ ಹೊಸ ವಿದ್ಯಮಾನಗಳನ್ನು ಗುರುತಿಸಬಹುದಾಗಿದೆ ಎಂದು ಹೇಳಿದರು. 

 ಎ.ವಿ. ಕಮಲಮ್ಮ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಈ ತಿಂಗಳ ಎಲ್ಲಾ ಬಾಹ್ಯಾಕಾಶ ಕೌತುಕಗಳನ್ನು ವೀಕ್ಷಿಸಿ ವರದಿ ತಯಾರಿಸಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 

ಕರಾವಿಪ ಕಾರ್ಯದರ್ಶಿ ಎಂ. ಗುರುಸಿದ್ದಸ್ವಾಮಿ, ಕರಾವಿಪ ಜಿಲ್ಲಾ ಸಮಿತಿ ಸದಸ್ಯರಾದ ಸಿದ್ದೇಶ್ ಕತ್ತಲಗೆರೆ, ಎಂ.ನಾಗರಾಜ್ ಕಕ್ಕರಗೊಳ್ಳ, ಬಾಲಭವನದ ಸಂಯೋಜಕಿ ಶಿಲ್ಪ ಮತ್ತಿತರರು ಭಾಗವಹಿಸಿದ್ದರು. 

error: Content is protected !!