ಖಾಸಗಿ ಬಸ್ ನಿಲ್ದಾಣ ಕಾರ್ಯಾರಂಭ

ಖಾಸಗಿ ಬಸ್ ನಿಲ್ದಾಣ ಕಾರ್ಯಾರಂಭ

ಸ್ವಚ್ಛತೆ ಕಾಯ್ದುಕೊಳ್ಳುವಂತೆ ಶಾಸಕ ಶಿವಶಂಕರಪ್ಪ ಕಿವಿಮಾತು

ದಾವಣಗೆರೆ, ಅ. 6 – ಖಾಸಗಿ ಬಸ್ ನಿಲ್ದಾಣವನ್ನು ಸುಂದರವಾಗಿ ರೂಪಿಸಲು ಕಾಂಗ್ರೆಸ್ ಸರ್ಕಾರ ಇದ್ದಾಗ ಯೋಜನೆ ರೂಪಿಸಲಾಗಿತ್ತು. ಆದರೆ, ನಂತರದ ಬಿಜೆಪಿ ಸರ್ಕಾರದಲ್ಲಿ ಇದರ ಅಂದಗೆಡಿಸಲಾ ಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ದುಡ್ಡು ಹೊಡೆಯಲಾಗಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಟೀಕಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ನವೀಕೃತಗೊಂಡ ಡಾ. ಶಾಮನೂರು ಶಿವಶಂಕರಪ್ಪ ಖಾಸಗಿ ಬಸ್ ನಿಲ್ದಾಣದ ಬಸ್‌ಗಳ ಕಾರ್ಯಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

2019ರಲ್ಲೇ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಕೆಲಸ ನೆನೆಗುದಿಗೆ ಬಿದ್ದು ವಿಪರೀತ ತೊಂದರೆ ಆಯಿತು. ಜೊತೆಗೆ, ಆಗ ಅಧಿಕಾರದಲ್ಲಿದ್ದ ಬಿಜೆಪಿ ಸಚಿವರು (ಭೈರತಿ ಬಸವರಾಜ್) ಭ್ರಷ್ಟಾಚಾರ ನಡೆಸಲು ಇಲ್ಲಿನ ಬಿಜೆಪಿ ನಾಯಕರೂ ಸಹಕಾರ ನೀಡಿದರು ಎಂದು ಆರೋಪಿಸಿದರು.

ಇದುವರೆಗೂ ಹೈಸ್ಕೂಲ್ ಮೈದಾನದಲ್ಲಿದ್ದ ತಾತ್ಕಾಲಿಕ ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣಗಳು ಸ್ಥಳಾಂತರಗೊಡಿವೆ. ಇದರಿಂದ ಅಲ್ಲಿ ಜನಸಂದಣಿ ಕಡಿಮೆಯಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಶಿವಶಂಕರಪ್ಪ ಹೇಳಿದರು.

ನವೀಕರಿಸಲಾದ ಖಾಸಗಿ ಬಸ್ ನಿಲ್ದಾಣದಲ್ಲಿ ಲಗೇಜ್ ರೂಂ, ರೆಸ್ಟ್ ರೂಂ ಮತ್ತಿತರೆ ಸೌಕರ್ಯಗಳಿವೆ. ನಗರದ ಮಧ್ಯ ಭಾಗದಲ್ಲಿ ನಿಲ್ದಾಣ ಇರುವುದರಿಂದ ಜನರಿಗೆ ಅನುಕೂಲವಾಗಲಿದೆ. ಪಾಲಿಕೆಯವರು ಈ ನಿಲ್ದಾಣದ ಸ್ವಚ್ಛತೆ ಕಾಯ್ದುಕೊಳ್ಳಬೇಕು ಎಂದು ಶಾಸಕರು ಕಿವಿಮಾತು ಹೇಳಿದರು.

ಪಾಲಿಕೆ ಮೇಯರ್ ಚಮನ್ ಸಾಬ್ ಮಾತನಾಡಿ, ಎಸ್.ಎಸ್. ಮಲ್ಲಿಕಾರ್ಜುನ್ ಅವರು ಈ ಹಿಂದೆ ಸಚಿವರಾಗಿದ್ದಾಗ ಬಸ್ ನಿಲ್ದಾಣದ ಬೇರೆಯೇ ಕಲ್ಪನೆ ರೂಪಿಸಿದ್ದರು. ನಂತರ ಬಂದ ಬಿಜೆಪಿ ಸರ್ಕಾರ, ತನಗೆ ತೋಚಿದ ರೀತಿ ನಿಲ್ದಾಣದ ವಿನ್ಯಾಸ ಬದಲಿಸಿತ್ತು. ಈಗಲೂ ಬಸ್ ನಿಲ್ಲಲು ಅವ್ಯವಸ್ಥೆ ಇದೆ ಎಂದು ಕೆಲ ಬಸ್ ಮಾಲೀಕರು ಹೇಳುತ್ತಿದ್ದಾರೆ. ಮುಂದೆ ಯಾವ ರೀತಿ ಸರಿ ಮಾಡುತ್ತಾರೋ ಗೊತ್ತಿಲ್ಲ ಎಂದರು.

ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಸಚಿವ ಮಲ್ಲಿಕಾರ್ಜುನ್ ಅವರ ಆಶಯಕ್ಕೆ ಅನುಗುಣವಾಗಿ ಸರಿಯಾದ ರೀತಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಆಗಿಲ್ಲ. ಇನ್ನಷ್ಟು ಜಾಗ ಬಳಸಿಕೊಂಡು ಹೆಚ್ಚು ಬಸ್ ನಿಲುಗಡೆಗೆ ಅವಕಾಶ ಕಲ್ಪಿಸಬಹುದಿತ್ತು. ಮುಂದಿನ ದಿನಗಳಲ್ಲಿ ಹೆಚ್ಚಿನ ವ್ಯವಸ್ಥೆ ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ಕುಮಾರ್ ಮಾತನಾಡಿ, ಮೊದಲು 14 ಬಸ್‌ಗಳ ನಿಲುಗಡೆಗೆ ವ್ಯವಸ್ಥೆ ರೂಪಿಸಲಾಗಿತ್ತು. ನಂತರ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಸೂಚನೆಯಂತೆ 16 ಬಸ್‌ಗಳಿಗೆ ಜಾಗ ವಿಸ್ತರಿಸಲಾಗಿದೆ. ಶೌಚಾಲಯ, ಕ್ಯಾಂಟೀನ್, 84 ಮಳಿಗೆ, 3 ಲಿಫ್ಟ್, ಎರಡು ಎಸ್ಕಲೇಟರ್, 18 ಕಾರು ಹಾಗೂ 200 ದ್ವಿಚಕ್ರ ವಾಹನಗಳ ನಿಲುಗಡೆಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

ವೇದಿಕೆಯ ಮೇಲೆ ಉಪ ಮೇಯರ್ ಸೋಗಿ ಶಾಂತಕುಮಾರ್, ಪಾಲಿಕೆ ಆಯುಕ್ತೆ ರೇಣುಕ, ಆರ್.ಟಿ.ಒ. ಪ್ರಮುತೇಶ್,  ಸ್ಮಾರ್ಟ್ ಸಿಟಿ ಜನರಲ್ ಮ್ಯಾನೇಜರ್ ಕೃಷ್ಣ ಪ್ರಸಾದ್, ಖಾಸಗಿ ಬಸ್ ಮಾಲೀಕರ ಸಂಘದ ಗೌರವಾಧ್ಯಕ್ಷ ಕಮ್ಮತ್ತಹಳ್ಳಿ ಎಸ್. ಮಂಜುನಾಥ್, ಅಧ್ಯಕ್ಷ ಕೆ.ಎಸ್. ಮಲ್ಲೇಶಪ್ಪ, ಏಜೆಂಟರ ಸಂಘದ ಅಧ್ಯಕ್ಷ ಉಮೇಶ್ ರಾವ್ ಸಾಳಂಕಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!