ಭಾರತ್ ಕಮ್ಯುನಿಸ್ಟ್ ಪಕ್ಷದ ರಾಜ್ಯ ಮಂಡಳಿ ಸಹ ಕಾರ್ಯದರ್ಶಿ ಅಮ್ಜದ್ ವಿಷಾದ
ದಾವಣಗೆರೆ, ಅ. 6- ಇಂದಿನ ರಾಜಕೀಯ ವ್ಯವಸ್ಥೆ ಸಂಪೂರ್ಣವಾಗಿ ಕಲುಷಿತಗೊಂಡಿದ್ದು, ರಾಜಕಾರಣಿಗಳಲ್ಲಿ ಶಿಸ್ತು, ಬದ್ಧತೆ, ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ರಾಜಕೀಯ ಶುದ್ಧೀಕರಣದ ಸಂಕಲ್ಪ ಮಾಡಬೇಕಾಗಿದೆ ಎಂದು ಭಾರತ್ ಕಮ್ಯುನಿಸ್ಟ್ ಪಕ್ಷದ ರಾಜ್ಯ ಮಂಡಳಿ ಸಹ ಕಾರ್ಯದರ್ಶಿ ಅಮ್ಜದ್ ಹೇಳಿದರು.
ನಗರದ ರೋಟರಿ ಬಾಲಭವನದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಹಾಗೂ ಎಐಟಿಯುಸಿ ಜಿಲ್ಲಾ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಕಾರ್ಮಿಕ ಮುಖಂಡರೂ, ಸಿಪಿಐ ಮತ್ತು ಎಐಟಿಯುಸಿ ಜಿಲ್ಲಾ ಮಂಡಳಿ ಖಜಾಂಚಿಗಳೂ ಆಗಿದ್ದ ದಿ. ಕಾಂ. ಆನಂದ್‌ರಾಜ್ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೈಚಾರಿಕ ಬದ್ಧತೆ, ಸಾಮಾಜಿಕ ಶಿಸ್ತು ಕಾಪಾಡುವ ಮತ್ತು ಉನ್ನತ ಗುರಿ ಇರುವ ನಾಯಕತ್ವದ ಅಗತ್ಯತೆ ಇದೆ. ಹಸಿದ ಹೊಟ್ಟೆಗೆ ಅನ್ನ ಕೊಡುವ, ದುಡಿಯುವ ಕೈಗಳಿಗೆ ಕೆಲಸ ಕೊಡುವ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರ ಬೇಕಾಗಿದೆ. ಉತ್ತಮ ವ್ಯಕ್ತಿತ್ವ, ಜನರ ಧ್ವನಿಗೆ ಧ್ವನಿಯಾಗುವ ಮತ್ತು ದೂರದೃಷ್ಟಿಯುಳ್ಳ ರಾಜಕಾರಣಿಗಳು ರಾಜಕೀಯಕ್ಕೆ ಬರುವುದು ಅವಶ್ಯವಿದೆ ಎಂದರು.
ಇಂದಿನ ರಾಜಕಾರಣಿಗಳಿಗೆ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಥಿತಿ ಇಲ್ಲದಂತಾಗಿದೆ. ಕೇವಲ ಜಾತಿ, ಧರ್ಮದ ಆಧಾರದಲ್ಲಿ ಜನರನ್ನು ಒಡೆದಾಳುವ ರಾಜಕೀಯ ಹೆಚ್ಚಾಗುತ್ತಿದೆ. ಸಂಘಟನಾತ್ಮಕ ಗುಣ ಇರುವ, ಸೈದ್ಧಾಂತಿಕ ನೆಲೆಗಟ್ಟಿನ ರಾಜಕೀಯ ನಾಯಕರು ಇಲ್ಲದಿರುವುದರಿಂದ ಇಂದಿನ ಯುವ ಜನಾಂಗ ಅಪಾಯದ ಕಡೆ ಹೆಜ್ಜೆ ಹಾಕುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿದರು.
ಕಾರ್ಮಿಕ ಮುಖಂಡ ಆನಂದರಾಜ್ ಅವರು ಪಂಪಾಪತಿಯವರ ಆಪ್ತ ಒಡನಾಡಿಯಾಗಿದ್ದು, ನಿಷ್ಠೂರವಾದಿಗಳು, ಶಿಸ್ತಿನ ಸಿಪಾಯಿಗಳು ಹಾಗೂ ಕಾರ್ಮಿಕ ಚಳವಳಿಗೆ ಸ್ಫೂರ್ತಿಯಾಗಿದ್ದರು. ಹಿರಿಯ ನಾಯಕರಿಗೂ ಬುದ್ಧಿವಾದ ಹೇಳುವ ಧೀಮಂತ ನಾಯಕರಾಗಿದ್ದರು ಎಂದು ಹೇಳಿದರು.
ಹುಟ್ಟು-ಸಾವು ಸಹಜವಾದ ಕ್ರಿಯೆಗಳು, ಈ ಮಧ್ಯೆ ಇರುವ ಬದುಕಿನ ನಡುವೆ ಬಿಟ್ಟು ಹೋಗುವ ಹೆಜ್ಜೆ ಗುರುತುಗಳು ನಮ್ಮನ್ನು ಸದಾ ನೆನಪಿನಲ್ಲಿ ಇಡುತ್ತವೆ. ಯಾರೇ ತಪ್ಪು ಮಾಡಿದರೂ ಅದನ್ನು ನೇರವಾಗಿ ಖಂಡಿಸುವ ಗುಣ ಆನಂದರಾಜ್ ಅವರಲ್ಲಿತ್ತು. ಅಪರೂಪದ ವ್ಯಕ್ತಿತ್ವ, ಶಿಸ್ತುಬದ್ಧ ಜೀವನ ಅವರದ್ದಾಗಿತ್ತು ಎಂದು ಸ್ಮರಿಸಿದರು.
ಸಿಪಿಐ ಜಿಿಲ್ಲಾ ಮಂಡಳಿ ಕಾರ್ಯದರ್ಶಿ ಆವರಗೆರೆ ಚಂದ್ರು ಅಧ್ಯಕ್ಷತೆ ವಹಿಸಿ ಆನಂದರಾಜ್ ಜೀವಿತಾವಧಿಯ ಸೇವಾ ಕಾರ್ಯಗಳನ್ನು ಕೊಂಡಾಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್, ಸಿಪಿಐ ಜಿಲ್ಲಾ ಮಂಡಳಿ ಸಹ ಕಾರ್ಯದರ್ಶಿ ಆವರಗೆರೆ ಹೆಚ್.ಜಿ. ಉಮೇಶ್, ಎಐಟಿಯುಸಿ ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ರಾಘವೇಂದ್ರ ನಾಯರಿ, ಸಿಪಿಐ ವಿವಿಧ ಶಾಖೆಗಳ ಮುಖಂಡರಾದ ಟಿ.ಎಸ್. ನಾಗರಾಜ್, ವಿ.ಲಕ್ಷ್ಮಣ್, ಎಂ.ಬಿ. ಶಾರದಮ್ಮ, ಆವರಗೆರೆ ವಾಸು, ಮಹಮ್ಮದ್ ರಫೀಕ್, ನಿಟುವಳ್ಳಿ ಬಸವರಾಜ್, ಮಹಮದ್ ಬಾಷಾ, ಟಿ.ಹೆಚ್. ನಾಗರಾಜ್, ಹರಿಹರದ ಹೆಚ್.ಕೆ. ಕೊಟ್ರಪ್ಪ, ಜಿ. ಯಲ್ಲಪ್ಪ, ದಿ. ಆನಂದರಾಜ್ ಪುತ್ರ ಕಾರ್ತಿಕ್, ಕೆ.ಜಿ. ಶಿವಮೂರ್ತಿ, ಐರಣಿ ಚಂದ್ರು, ಸುರೇಶ್ ಯರಗುಂಟೆ, ಕೆ. ಗದಿಗೆಪ್ಪ, ಜಯಪ್ಪ, ಮಂಜುನಾಥ ಕೈದಾಳೆ, ಸತೀಶ್ ಅರವಿಂದ್, ಜೈನುಲ್ಲಾ ಖಾನ್, ಎಸ್.ಎಸ್. ಮಲ್ಲಮ್ಮ, ಶ್ಯಾಗಲೆ ಶರಣಪ್ಪ, ಲೋಕಿಕೆರೆ ರುದ್ರೇಶ್, ಜಿಗಳಿ ರಂಗನಾಥ್, ಸರೋಜ, ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.
ಭಾರತೀಯ ಜನಕಲಾ ಸಮಿತಿ (ಇಪ್ಟಾ) ಕಲಾವಿದರು ಜಾಗೃತಿ ಗೀತೆಗಳನ್ನು ಹಾಡಿದರು. ರಮೇಶ್ ಸ್ವಾಗತಿಸಿದರು, ಕೆ. ಬಾನಪ್ಪ ನಿರೂಪಿಸಿದರು. ನರೇಗಾ ರಂಗನಾಥ್ ವಂದಿಸಿದರು.