ಪಂಚಮಸಾಲಿ ಸಮಾಜ ಸಂಘಟನೆಗೆ ಮನೆ ಭೇಟಿ

ಪಂಚಮಸಾಲಿ ಸಮಾಜ ಸಂಘಟನೆಗೆ ಮನೆ ಭೇಟಿ

ನೂತನ ರಾಜ್ಯಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಪದಗ್ರಹಣ ಸಮಾರಂಭದಲ್ಲಿ ವಚನಾನಂದ ಶ್ರೀ

ಪೀಠಗಳು ಹತ್ತಾದರೂ ನಾವೆಲ್ಲಾ ಒಂದೇ : ಸಚಿವ ಶಿವಾನಂದ

ರಾಜ್ಯದಲ್ಲಿ ಪಂಚಮಸಾಲಿ ಗುರುಪೀಠ ಸ್ಥಾಪನೆ ಸಮಯದಲ್ಲಿ ಒಂದು ಪೀಠ ಆಯಿತು, ತದನಂತರ ಮತ್ತೊಂದು, ಮೊಗದೊಂದು ಆಯಿತು. ಆದರೆ ಪೀಠಗಳು ಹತ್ತು ಸ್ಥಾಪನೆ ಆದರೂ ಸಹ ನಾವೆಲ್ಲರೂ ಪಂಚಮಸಾಲಿ ಜನಾಂಗದವರು ಒಂದೇ ಎಂದು ಒಗ್ಗೂಡಿಕೊಂಡು ಹೋದಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ ಎಂದು ರಾಜ್ಯ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಿವಾನಂದ ಹೇಳಿದರು.

ಹರಿಹರ, ಅ. 6- ಪಂಚಮಸಾಲಿ ಸಮಾಜವನ್ನು ಆರ್ಥಿಕ, ಶೈಕ್ಷಣಿಕ, ಅಧ್ಯಾತ್ಮಿಕ ಮತ್ತು, ಧಾರ್ಮಿಕವಾಗಿ ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯುವ ಹಿರಿಯರ ಆಶಯದಂತೆ ಕಿತ್ತೂರು ರಾಣಿ ಚೆನ್ನಮ್ಮ ಅವರ 200ನೇ ಜಯಂತ್ಯುತ್ಸವದ ಅಂಗವಾಗಿ ಇದೇ ದಿನಾಂಕ 23 ರಿಂದ ರಾಜ್ಯದ 25 ಸಾವಿರ ಮನೆಗಳನ್ನು ಭೇಟಿ ಮಾಡುವ ಸಂಕಲ್ಪದೊಂದಿಗೆ ಸಮಾಜ ಸಂಘಟನೆ ಬಲಿಷ್ಠಗೊಳಿಸಲು ಮುಂದಾಗುವುದಾಗಿ ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.

ನಗರದ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ನಡೆದ ನೂತನ ರಾಜ್ಯಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಪ್ರಮಾಣ ವಚನ ಮತ್ತು ಪದಗ್ರಹಣ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು. 

ಸಮಾಜವನ್ನು ಸದೃಢವಾಗಿ ಕಟ್ಟಬೇಕು. ಸಮಾಜದಲ್ಲಿನ ಬಡವರಿಗೆ ಆರ್ಥಿಕವಾಗಿ ಪ್ರೋತ್ಸಾಹ ನೀಡಬೇಕು ಎಂಬ ಹಿತದೃಷ್ಟಿಯಿಂದ ರಾಜ್ಯದಾದ್ಯಂತ ಪಂಚಮಸಾಲಿ ಸಮಾಜದ ಪತ್ರಿಯೊಬ್ಬರ ಮನೆಗಳಿಗೆ ಭೇಟಿ ನೀಡುವ ಮೂಲಕ ಸಮಾಜವನ್ನು ಬಲಿಷ್ಠವಾಗಿ ಕಟ್ಟುವ ಸಂಕಲ್ಪ ಮಾಡಿರುವುದಾಗಿ ಹೇಳಿದರು.

ಸಮಾಜವನ್ನು ಮತ್ತಷ್ಟು ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಮುನ್ನೆಲೆಗೆ ತರುವಂತಹ ಕೆಲಸವನ್ನು ಮಾಡುವೆ. ನಾವು ಪೀಠಕ್ಕೆ ಶಾಶ್ವತವಲ್ಲ. ಪೀಠ ಶಾಶ್ವತವಾಗಿ ಇರುತ್ತದೆ ಎಂಬುದನ್ನು ಮನಗಂಡು ಪೀಠದ ಅಭಿವೃದ್ಧಿಗೆ ಹೆಚ್ಚು ಒತ್ತನ್ನು ನೀಡುವುದಾಗಿ ತಿಳಿಸಿದರು.

ರಾಜ್ಯ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಿವಾನಂದ ಮಾತನಾಡಿ, ಪಂಚಮಸಾಲಿ ಪೀಠ ನಿರ್ದಿಷ್ಟ ಗುರಿ ಮತ್ತು ಉದ್ದೇಶ ಇಟ್ಟುಕೊಂಡು ಸಂಘಟನೆಗೆ ಮುಂದಾಗಬೇಕಿದೆ. ಸಮಾಜದಲ್ಲಿ ಬಹಳಷ್ಟು ಬಡವರಿದ್ದಾರೆ, ಪ್ರತಿಭಾವಂತ ವ್ಯಕ್ತಿಗಳಿದ್ದಾರೆ. ಅವರನ್ನು ಸನ್ಮಾನಿಸಿ, ಗೌರವ ನೀಡುವುದರ ಜೊತೆಗೆ ಗುರುತಿಸುವಂತಹ ಕೆಲಸ ಆಗಬೇಕು. ರಾಜಕೀಯವಾಗಿ ಬೆಳೆಯುವಂತಹ ಯುವಕರಿಗೆ ಪ್ರೋತ್ಸಾಹ ನೀಡಬೇಕು. 

ಸಮಾಜದ ವತಿಯಿಂದ ರಾಜ್ಯಮಟ್ಟದಲ್ಲಿ ಅರ್ಬನ್ ಬ್ಯಾಂಕ್ ತೆರೆದು ಆ ಮೂಲಕ ಸಮಾಜದವರಿಗೆ ಆರ್ಥಿಕ ಶಕ್ತಿಯನ್ನು ತುಂಬುವ ಕೆಲಸವು ಶ್ರೀ ಪೀಠದ ವತಿಯಿಂದ ಆಗುಬೇಕು. ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.

ಮಾಜಿ ಸಚಿವ ಮುರುಗೇಶ್‌ ನಿರಾಣಿ ಮಾತನಾಡಿ, ಅನ್ನ ದಾಸೋಹಕ್ಕೆ ಪೀಠದ ವತಿಯಿಂದ ಎಷ್ಟು ಸಾಧ್ಯವೋ ಅಷ್ಟೊಂದು ಹಣವನ್ನು ಭರಿಸಲಿ, ಕಡಿಮೆ ಬಿದ್ದರೆ ನಾನೇ ಪೂರಾ ಹಣವನ್ನು ನೀಡುವುದಾಗಿ ಮತ್ತು ಪಂಚಮಸಾಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಉದ್ಯೋಗ ಮತ್ತು ಶೈಕ್ಷಣಿಕವಾಗಿ ಅರ್ಥಿಕ ನೆರವನ್ನು ನೀಡುವುದಾಗಿ ಹೇಳಿದರು.

ಮಾಜಿ ಸಚಿವ ಶಂಕ್ರಣ್ಣ ಮುನೇನಕೊಪ್ಪ ಮಾತನಾಡಿ, ಸಮಾಜವು ದಿನ ಕಳೆದಂತೆ ಪ್ರಗತಿ ಕಾಣುತ್ತಾ ಸಾಗಿದೆ. ಇದಕ್ಕೆ ಕಾರಣ ಸಮಾಜ ರಾಣಿ ಚೆನ್ನಮ್ಮ ಆದರ್ಶವನ್ನು ಇಟ್ಕೊಂಡು ಸಮಾಜವನ್ನು ಕಟ್ಟಿದ್ದರ ಪರಿಣಾಮ ಇಷ್ಟೊಂದು ಪ್ರಗತಿ ಸಾಧಿಸಲಾಗಿದೆ. ಪಂಚಮಸಾಲಿ ಸಮಾಜದವರು ಇನ್ನೊಂದು ಸಮಾಜದ ಬಗ್ಗೆ ಮಾತನಾಡದೆ ನಮ್ಮ ಸಮಾಜವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಗಡಿನಾಡು ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ನಡೆಯುವ ಸನ್ನಿವೇಶ ನೋಡುತ್ತಾ ಹೋದಂತೆ ನಮ್ಮ ಸಮಾಜದವರ ಸಂಘಟನೆ ಬಹಳ ಅವಶ್ಯಕತೆ ಇದ್ದು, ಸಂಘಟನೆ ಇದ್ದರೆ ಸಮಾಜದಲ್ಲಿ ಮುನ್ನಲೆಗೆ ಬರಬಹುದು. ಪಂಚಮಸಾಲಿ ಸಮಾಜದ ಸ್ಥಾಪನೆ ಆದ ನಂತರ ಬೇರೆ ಸಮಾಜದವರು ನಮ್ಮನ್ನು ಅಸ್ಪೃಶ್ಯತೆ ಯಿಂದ ನೋಡುವುದು ಕಡಿಮೆ ಆಗಿದೆ. ಇದಕ್ಕೆ ಕಾರಣ ಹಿಂದೆ ಸಮಾಜಕ್ಕೆ ದುಡಿದವರ ಶ್ರಮ ಕಾರಣವಾಗಿದೆ ಎಂದರು.

ಪಂಚಮಸಾಲಿ ಸಮಾಜದ ನೂತನ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿ, ಸಮಾಜ ಸಂಘಟನೆ ಮಾಡಬೇಕು ಎಂದು ಟ್ರಸ್ಟ್ ಮತ್ತು ಪಂಚಮಸಾಲಿ ರಾಜ್ಯ ಸಂಘದ  44 ಸದಸ್ಯರು, ಜಿಲ್ಲಾ, ತಾಲ್ಲೂಕು ಅಧ್ಯಕ್ಷರು ನನಗೆ ಅವಿರೋಧವಾಗಿ ಅಯ್ಕೆ ಮಾಡಿದ್ದಾರೆ. ಸಮಾಜದ ಹಿಂದೆ ಇದ್ದ 6 ಅಧ್ಯಕ್ಷರ ಜೊತೆಯಲ್ಲಿ ಸಂಘಟನೆ ಮಾಡಿರುವ ಅನುಭವ ಇರುವುದರಿಂದ, ಸಮಾಜದವರ ಏಳಿಗೆಗಾಗಿ ರಾಜ್ಯದಾದ್ಯಂತ ಸುತ್ತಾಡಿ ಸಮಾಜವನ್ನು ಮತ್ತಷ್ಟು ಬಲಿಷ್ಠಗೊಳಿಸಿ ನಮಗೆ ಅಧಿಕಾರ ನೀಡಿರುವ ಆಶಯಗಳನ್ನು ಸಾರ್ಥಕಗೊಳಿಸುವ ಕೆಲಸ ಮಾಡುವುದಾಗಿ ತಿಳಿಸಿದರು.

ಇಲ್ಲಿಯವರೆಗೂ 13 ಸಾವಿರದ 300 ಸಂಘದ ಸದಸ್ಯರು ಇದ್ದಾರೆ, ಮುಂದಿನ ದಿನಗಳಲ್ಲಿ 1 ಲಕ್ಷ ಸದಸ್ಯರನ್ನು ಮಾಡುವುದಲ್ಲದೇ ಹರಿಹರ ಪಂಚಮಸಾಲಿ ಗುರುಪೀಠದ ಮಠಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿ, ಮೀಸಲಾತಿ ಹೋರಾಟದ ಮನವಿ ನೀಡಲಾಗುತ್ತದೆ. 3 ಬಿ ಮೀಸಲಾತಿ ಗಟ್ಟಿತನ ತರುವ ನಿಟ್ಟಿನಲ್ಲಿ ಹೋರಾಟ ಮಾಡಿ. ಓಬಿಸಿ  ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲಾ ಶಾಸಕರ ಗಮನ ಸೆಳೆದು ಹೋರಾಟ ಮುಂದುವರೆಸುವೆ ಎಂದು ಹೇಳಿದರು.

ಅನ್ನದಾಸೋಹ ಸಮಿತಿಯ ಅಧ್ಯಕ್ಷ ಪ್ರಕಾಶ್ ಪಾಟೀಲ್ ಮಾತನಾಡಿ, ಪಂಚಮಸಾಲಿ ಗುರುಪೀಠದ ಆವರಣದಲ್ಲಿ ನಿತ್ಯ ಅನ್ನದಾಸೋಹ ನಡೆಸಲು ಈಗಾಗಲೇ 1 ಕೋಟಿ 64 ಲಕ್ಷ ರೂ. ಠೇವಣಿ ಇದ್ದು, ಮುರುಗೇಶ ನಿರಾಣಿ ಟ್ರಸ್ಟ್ ವತಿಯಿಂದ,  ಪೀಠದ ಧರ್ಮದರ್ಶಿ ಬಿ.ಸಿ. ಉಮಾಪತಿ ಹಾಗೂ ಸಂಡೂರು ನಾಗನಗೌಡ್ರು 3 ಕೋಟಿ ಹಣ ಠೇವಣಿ ಮಾಡಿ ಅನ್ನದಾಸೋಹ ನಿರಂತರವಾಗಿ ನಡೆಯುವುದಕ್ಕೆ ಸಹಕಾರಕ್ಕೆ ಮುಂದಾಗುವಂತೆ  ಹೇಳಿದರು.

ಈ ವೇಳೆ ಉಮೇಶ್ ಗೌಡ ಪಾಟೀಲ್, ಮಾಜಿ ಅಧ್ಯಕ್ಷ ಬಸವರಾಜ್ ದಿಂಡೂರು ಮಾತನಾಡಿದರು. ಗುರುಪೀಠದ ಆಡಳಿತ ಅಧಿಕಾರಿ ರಾಜಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಅಲಗೂರು ಪಂಚಮಸಾಲಿ ಗುರುಪೀಠದ ಶ್ರಿಮಹಾದೇವ ಶ್ರೀಗಳು, ಮಲ್ಲಿಕಾರ್ಜುನ ದೇವರು ಮೈಸೂರು, ಶಿವಾನಂದ ಶಿವಾಚಾರ್ಯ ಶ್ರೀಗಳು, ಪಂಚಮಸಾಲಿ ಸಮಾಜದ ರಾಜ್ಯ  ಕಾರ್ಯದರ್ಶಿ ಪರಮೇಶ್ವರಪ್ಪ ಪಟ್ಟಣ್ಣಶೇಟ್ಟಿ, ಧರ್ಮದರ್ಶಿ ಬಿ.ಸಿ. ಉಮಾಪತಿ, ದಾವಣಗೆರೆ ಉಪಮೇಯರ್ ಶಾಂತಕುಮಾರ್ ಸೋಗಿ, ಧರ್ಮದರ್ಶಿ ಚಂದ್ರಶೇಖರ್ ಪೂಜಾರ್,  ಎಸ್‌ಎಸ್ ಪಾಟೀಲ್, ರಶ್ಮಿ ಕುಕೊಂದು, ವಸಂತ್ ಉಲ್ಲತ್ತಿ ಇತರರು ಹಾಜರಿದ್ದರು.  

error: Content is protected !!