ಹಳೇ ಪಿಂಚಣಿಗೆ ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜು

ಹಳೇ ಪಿಂಚಣಿಗೆ ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜು

ಕಾರ್ಯಕಾರಿಣಿ ಸಭೆಯಲ್ಲಿ 3 ನಿರ್ಣಯ ಕೈಗೊಂಡ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ

ದಾವಣಗೆರೆ, ಅ.6- ಹಳೇ ಪಿಂಚಣಿ ಯೋಜನೆ ಮರು ಜಾರಿಗೆ ಒತ್ತಾಯಿಸಿ ಬರುವ ಜನವರಿಯಲ್ಲಿ ರಾಜ್ಯಾದ್ಯಂತ ಹೋರಾಟ ಆರಂಭಿಸುವುದು ಸೇರಿದಂತೆ 3 ಪ್ರಮುಖ ನಿರ್ಣಯಗಳನ್ನು ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಲಾಯಿತು.

ನಗರದ ಕುವೆಂಪು ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ, ಬೆಂಗಳೂರು ಮತ್ತು ಜಿಲ್ಲಾ ಘಟಕದ ಸಹಯೋಗದಲ್ಲಿ ಭಾನುವಾರ ನಡೆದ ಸಂಘದ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 500ಕ್ಕೂ ಅಧಿಕ ಪದಾಧಿಕಾರಿಗಳೊಂದಿಗೆ ನಡೆಸಿದ ಚರ್ಚೆ, ಸಲಹೆ ಮತ್ತು ಅಭಿಪ್ರಾಯ ಆಲಿಸಿದ ನಂತರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ್ ತೇಜ್ ಅವರು ಮಂಡಿಸಿದ ನಿರ್ಣಯಗಳನ್ನು ಸಭೆ ಸರ್ವಾನುಮತದಿಂದ ಅಂಗೀಕರಿಸಿತು. 

ರಾಜ್ಯ ಸರ್ಕಾರವು ಎನ್‌ಪಿಎಸ್ ಬದಲಿಗೆ ಒಪಿಎಸ್ ಜಾರಿ ಸಾಧ್ಯತೆಗಳ ಕುರಿತು ಪರಿಶೀಲಿಸಲು ರಚಿಸಿರುವ ಸಮಿತಿಯನ್ನು ವಿರೋಧಿಸುವುದು. ಎನ್‌ಪಿಎಸ್ ಯೋಜನೆಯನ್ನು ರದ್ಧತಿ ಮಾಡಿ ಒಪಿಎಸ್ ಮರು ಜಾರಿಗೊಳಿಸಲು ಸರ್ಕಾರವನ್ನು ಒತ್ತಾಯಿಸಿ ಸರ್ಕಾರಕ್ಕೆ ಸಂಘಟನೆಯಿಂದ ಕಾಲಾವಧಿ ನೀಡಿ, ಸರ್ಕಾರ ಇದಕ್ಕೆ ಸ್ಪಂದಿಸದಿದ್ದರೆ ಬರುವ ಜನವರಿ 15 ರಿಂದ ಹೋರಾಟವನ್ನು ಪ್ರಾರಂಭಿಸಲು ನಿರ್ಣಯ ಕೈಗೊಳ್ಳಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ, ನಮ್ಮ ಸಂಘಟನೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಸದಸ್ಯತ್ವ ಹಾಗೂ ಮತದಾರರ ಪಟ್ಟಿಯಿಂದ ತೆಗೆದಿರುವುದನ್ನು, ರಾಜ್ಯಾದ್ಯಂತ ಸಂಘದ ಪದಾಧಿಕಾರಿಗಳನ್ನು ಕೈ ಬಿಡಲು ಉದ್ದೇಶಿ ಸುವ ಮೂಲಕ ಎನ್‌ಪಿಎಸ್ ರದ್ಧತಿ ಹೋರಾಟವನ್ನು ಹತ್ತಿಕ್ಕುವ ಹಾಗೂ ಸಂಘಟನೆಯ ಆತ್ಮಬಲ ಕುಗ್ಗಿಸುವ ಕ್ರಮವನ್ನು ವಿರೋಧಿಸುವ ನಿರ್ಣಯ ಕೈಗೊಳ್ಳ ಲಾಗಿದೆ ಎಂದು ಶಾಂತಾರಾಮ್ ತೇಜ್ ಹೇಳಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಸಂಗಣ್ಣನವರ ಪ್ರಾಸ್ತಾವಿಕ ಮಾತನಾಡಿ, ಅಧಿಕಾರಕ್ಕೆ ಬಂದ ಕಾಂಗ್ರೆಸ್ ಚುನಾವಣೆಗೂ ಮುನ್ನ 6ನೇ ಗ್ಯಾರಂಟಿಯಾಗಿ ಎನ್‌ಪಿಎಸ್ ರದ್ದು ಮಾಡಿ, ಒಪಿಎಸ್ ಜಾರಿ ಮಾಡುವ ಭರವಸೆ ನೀಡಿತ್ತು. ಆದರೆ ಇದೀಗ ಒಪಿಎಸ್ ಜಾರಿ ಸಾಧ್ಯತೆಗಳ ಬಗ್ಗೆ ಸಮಿತಿ ರಚಿಸುವ ಮೂಲಕ ಕೊಟ್ಟ ಮಾತಿಗೆ ತಪ್ಪಿದೆ ಎಂದರು. 

ಕೆಲವರು ರಾಜ್ಯ ಸರ್ಕಾರಿ ನೌಕರರ ಸಂಘದ ಹೋರಾಟವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿ ದ್ದಾರೆ. ಆದರೆ ನಮ್ಮ ಹೋರಾಟದ ಗುರಿ ಎಂದಿಗೂ ನೇರವಾಗಿದೆ. ಯಾವುದೇ ಕಾರಣಕ್ಕೂ ಈ ಹೋರಾಟ ದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.

ಎನ್‌ಪಿಎಸ್, ಯುಪಿಎಸ್ ಸೇರಿದಂತೆ ಯಾವುದೇ ಪಿಂಚಣಿ ಪದ್ಧತಿ ಜಾರಿಯಾದರೂ ಸರಿಯೇ ನಮ್ಮ ಹೋರಾಟ ಮಾತ್ರ ಹಳೆ ಪಿಂಚಣಿ ಪದ್ಧತಿ ಮರುಜಾರಿ ಆಗುವವರೆಗೂ ನಿಲ್ಲುವುದಿಲ್ಲ ಎಂದು ಹೇಳಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ ತಳವಾರ, ದಯಾನಂದ, ಖಜಾಂಚಿ ವಿಜಯ, ರಾಜ್ಯ ಮಾಧ್ಯಮ ಪ್ರತಿನಿಧಿ ಹೆಚ್.ಜಿ.ಎಂ. ಬಸವರಾಜ, ಎಂ. ರಮೇಶ, ಪ್ರಕಾಶನಾಯ್ಕ, ದೇವರಾಜು, ಸದಾಶಿವ ಕಂಬಾಳೆ, ಸಂತೋಷ, ಮಾದೇಶ ವರ್ಮಾ ಮತ್ತು ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರುಗಳು ಇದ್ದರು. ದಾವಣಗೆರೆ ಜಿಲ್ಲಾಧ್ಯಕ್ಷ ಜಿ.ಬಿ. ಶಿವಕುಮಾರ್ ಸ್ವಾಗತಿಸಿದರು.

error: Content is protected !!