ಜನವಿರೋಧಿ ಸರ್ಕಾರದ ವಿರುದ್ಧ ಚಳವಳಿ ನಡೆಸಲು ನಿರ್ಧಾರ.
-ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯಾಧ್ಯಕ್ಷ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
ದಾವಣಗೆರೆ, ಅ. 7- ವಿದ್ಯುಚ್ಛಕ್ತಿ ಖಾಸಗೀಕರಣ ವಿರೋಧಿಸಿ, ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿ ಜನವಿರೋಧಿ ಸರ್ಕಾರದ ವಿರುದ್ಧ ಚಳವಳಿ ಆರಂಭ ಮಾಡಲಾ ಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿ ಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ವಿದ್ಯುಚ್ಛಕ್ತಿ ಖಾಸಗೀಕರಣ ಪ್ರಕ್ರಿಯೆ 2000 ನೇ ಸಾಲಿನಿಂದ ಪ್ರಾರಂಭಿಸಿ, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಜೋಡಣೆ ಮಾಡಿ ಖಾಸಗೀಕರಣ ಮಾಡುವ ಅಂದಿನ ಸಿಎಂ ಎಸ್.ಎಂ. ಕೃಷ್ಣ ಅವರ ಪ್ರಯತ್ನವನ್ನು ತಡೆ ಹಿಡಿಯಲಾಯಿತು ಎಂದರು.
ಆದರೆ 2020 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯ್ದೆಗಳ ಜೊತೆ ವಿದ್ಯುತ್ ಖಾಸಗೀಕರಣ ಸುಗ್ರಿವಾಜ್ಞೆಯ ಮೂಲಕ ಜಾರಿಗೆ ತರಲಾಗಿತ್ತು. ಇದನ್ನು ದೇಶದ ರೈತರ ಪ್ರತಿರೋಧದ ಕಾರಣದಿಂದಾಗಿ ಸಂಪೂರ್ಣವಾಗಿ ಕೈಬಿಡಲಾಯಿತು. ಈಗ ಕರ್ನಾಟಕ ಸರ್ಕಾರ ಮತ್ತೆ ಅಂತಹ ಕೆಟ್ಟ ಪ್ರಯತ್ನಕ್ಕೆ ಮುಂದಾಗಿದೆ ಎಂದು ಹೇಳಿದರು.
ಕೃಷಿ ಪಂಪ್‌ಸೆಟ್ ಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಕೈಬಿಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಗ್ರಿಡ್ ಮತ್ತು ಗ್ರಿಡ್ ಮಾರ್ಗಗಳಿಂದ ಸಂಪೂರ್ಣ ಬೇರ್ಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಪಂಪ್‌ಸೆಟ್‌ಗಳಿಗೆ ಸೋಲಾರ್ ಅಳವಡಿಸಿಕೊಳ್ಳಲು ಶೇ. 50 ರಷ್ಟು ಸಬ್ಸಿಡಿ ನೀಡುತ್ತೇವೆ. ನೀವು ಖಾಸಗಿಯಾಗಿ ಅಳವಡಿಸಿಕೊಳ್ಳಬೇಕೆಂದು ರೈತರನ್ನು ಪ್ರಚೋದಿಸಿ ಬೇರ್ಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಗುಡುಗಿದರು.
ಎಲ್ಲಾ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸುವುದನ್ನು ನಿಲ್ಲಿಸಬೇಕು. ಸರ್ಕಾರದಿಂದ ವಿದ್ಯುಚ್ಛಕ್ತಿ ಪಡೆಯುತ್ತಿದ್ದ ವಿದ್ಯುತ್ ಸಂಪೂರ್ಣವಾಗಿ ಕಡಿತಗೊಳಿಸಿ ರೈತರು ನೀರಾವರಿಗೋಸ್ಕರ ಪಂಪ್‌ಸೆಟ್ ಮಾಲಕ ಸೋಲಾರ್ ವಿದ್ಯುಚ್ಛಕ್ತಿ ಬಳಕೆ ಮಾಡಿಕೊಳ್ಳುವಂತೆ ತಿಳಿಸಿದ್ದು, ಸೋಲಾರ್ ಪಂಪ್‌ಸೆಟ್‌ಗಳನ್ನು 10 ಹೆಚ್‌ಪಿ ಬದಲಿಗೆ 75 ಹೆಚ್‌ಪಿಗೆ ಸೀಮಿತವಾಗಿ ಅಳವಡಿಸಿಕೊಳ್ಳಬೇಕೆಂದು ಸರ್ಕಾರ ಆದೇಶವನ್ನು ತರಲಿದೆ. ಈ ಆದೇಶ ರೈತರಿಗೆ ಮಾರಕವಾಗಲಿದೆ ಎಂದರು.
ಸರ್ಕಾರ ಐದು ವಿದ್ಯುಚ್ಛಕ್ತಿ ಕಂಪನಿಗಳನ್ನು ಖಾಸಗೀ ಮಾಲಿಕತ್ವದ ಕಂಪನಿಗಳಿಗೆ ಕೊಡುವ ತೀರ್ಮಾನವೇ ಈ ಎಲ್ಲಾ ಉದ್ದೇಶಗಳಿಗೆ ಕಾರಣವಾಗಿದೆ. ಆದ್ದರಿಂದ ರೈತರು ಯಾವುದೇ ಕಾರಣಕ್ಕೆ ಸೋಲಾರ್ ಪಂಪ್‌ಸೆಟ್ ಅಳವಡಿಕೆಗೆ ಹೋಗುವುದು ಬೇಡ ಎಂದು ಹೇಳಿದರು .
ಸರ್ಕಾರ ರೈತರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದ್ದರೆ ರಾಜ್ಯದ ಸಿ ಮತ್ತು ಡಿ ವರ್ಗದ ಕೃಷಿ ಭೂಮಿಯನ್ನು ಸೋಲಾರ್ ವಿದ್ಯುಚ್ಛಕ್ತಿ ಉತ್ಪಾದನೆಗೆ ಅತ್ಯುತ್ತಮವಾದ ದರ ನೀಡುವ ಮೂಲಕ ರೈತರನ್ನು ವಿದ್ಯುತ್ ಉತ್ಪಾದಕರೆಂದು ಪರಿಗಣಿಸಿ ಹೆಚ್ಚಿನ ಸಹಾಯ ಧನ ಮತ್ತು ಉತ್ತೇಜನ ನೀಡಬೇಕೆಂದು ಆಗ್ರಹಿಸಿದರು
ಪತ್ರಿಕಾಗೋಷ್ಠಿಯಲ್ಲಿ ಭಕ್ತರಹಳ್ಳಿ ಭೈರೇಗೌಡ, ಪಾಟೀಲ್ ವೀರನಗೌಡ, ಶತಕೋಟಿ ಬಸಪ್ಪ, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಎನ್. ಬಸವರಾಜ್ ದಾಗಿನಕಟ್ಟೆ, ಕೆ. ಬಾಬುರಾವ್ ಕೆರೆಬಿಳಚಿ ಉಪಸ್ಥಿತರಿದ್ದರು.