ಹೆತ್ತವರು ಬದುಕಿದ್ದಾಗಲೇ ಪ್ರೀತಿಯಿಂದ ನೋಡಿ

ಹೆತ್ತವರು ಬದುಕಿದ್ದಾಗಲೇ ಪ್ರೀತಿಯಿಂದ ನೋಡಿ

ಹೊನ್ನಾಳಿ: ಶರನ್ನವರಾತ್ರಿ ಧರ್ಮಸಭೆಯಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ

ಹೊನ್ನಾಳಿ, ಅ.7- ಹೆತ್ತವರು ಮೃತಪಟ್ಟಾಗ ಅದ್ಧೂರಿಯಾಗಿ ಕೈಲಾಸ ಸಮಾರಾಧನೆ ಮಾಡುವ ಬದಲು ಬದುಕಿದ್ದಾಗಲೇ ಅವರನ್ನು ಪ್ರೀತಿಯಿಂದ ಚನ್ನಾಗಿ ನೋಡಿಕೊಳ್ಳಿ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ 4ನೇ ದಿನದ ದಸರಾ ಮತ್ತು ಶರನ್ನವರಾತ್ರಿ ಕಾರ್ಯಕ್ರಮದ ಧರ್ಮಸಭೆಯನ್ನು ದ್ದೇಶಿಸಿ ಅವರು ಮಾತನಾಡಿದರು.

ಇತ್ತೀಚೆಗೆ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರು ವುದಕ್ಕೆ ಕಳವಳ ವ್ಯಕ್ತಪಡಿಸಿದ ರಾಘವೇಂದ್ರ, ಮಠ – ಮಾನ್ಯಗಳಲ್ಲಿ ನಡೆಯುವ ಧಾರ್ಮಿಕ ಸಭೆಗಳಲ್ಲಿ ಸಿಗುವ ಮಾರ್ಗದರ್ಶನ ಪಡೆದು ಯುವಕರು ಸನ್ಮಾರ್ಗದಲ್ಲಿ ಸಾಗಲಿ ಎಂದು ಆಶಿಸಿದರು.

ನಮ್ಮ ಕುಟುಂಬ ರಾಜಕೀಯ ಕ್ಷೇತ್ರದಲ್ಲಿದ್ದು ಸಾಮಾಜಿಕ ಸೇವೆ ಮಾಡುವ ಶಕ್ತಿ ಬಂದಿರುವುದು  ಹೊನ್ನಾಳಿಯ ಹಿರೇಕಲ್ಮಠದ ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳ ಆಶೀರ್ವಾದದ ಫಲದಿಂದ ಎಂದು ಹೇಳಿದರು. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ರೈತ ದೇಶದ ಬೆನ್ನೆಲುಬು ಎಂಬ ನಾಣ್ಣುಡಿಯಂತೆ ರೈತನ ಬದುಕು ಹಸನಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. 

ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಈ ಭಾಗದ ಭಕ್ತರು ಹಿರೇಕಲ್ಮಠದಲ್ಲಿ ನಡೆಯುವ ಧಾರ್ಮಿಕ ಸಭೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಜೀವನ ಸಾರ್ಥಕವನ್ನಾಗಿಸಿಕೊಳ್ಳುವಂತೆ ಸಲಹೆ ನೀಡಿದರು.

ಶಿಕ್ಷಕಿ ಶಾಂತಾ ಮಹಿಳೆಯರ ಸ್ವಾವಲಂಬನೆ ಕುರಿತಾಗಿ ಉಪನ್ಯಾಸ ನೀಡಿದರು. ಬಿಇಡಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜಯಪ್ಪ ಮಾತನಾಡಿದರು. ಹಾವೇರಿಯ ಕರ್ಜಗಿ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸಮಾರಂಭದಲ್ಲಿ ಟಿ.ಎ.ಪಿ.ಸಿ.ಎಂ.ಎಸ್.ಅಧ್ಯಕ್ಷ ಎಚ್.ಬಸವರಾಜ್, ಬಿಜೆಪಿ ಮಂಡಲದ
ತಾಲ್ಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಪುರಸಭಾ ಸದಸ್ಯರಾದ ಕೆ.ವಿ.ಶ್ರೀಧರ್, ರಂಗನಾಥ್, ಸುರೇಶ್ ಹೊಸಕೇರಿ, ಶಿಕಾರಿಪುರದ ಅಖಿಲ ಭಾರತ ವೀರಶೈವ ಸಮಾಜದ ಅಧ್ಯಕ್ಷ ಸುಧೀರ್, ಮೆಸ್ಕಾಂ ಮಾಜಿ ನಿರ್ದೇಶಕ ರುದ್ರೇಶ್ ಹೊಸೂರು, ಕರವೇ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಪೇಟೆ ಪ್ರಶಾಂತ್, ಸರಳಿನಮನೆ ಮಂಜಪ್ಪ, ಎಚ್.ಬಿ.ಸಿದ್ದಪ್ಪ, ಟಿ.ಎಂ.ಬಸವರಾಜಯ್ಯ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.

ಸುರಹೊನ್ನೆಯ ಶ್ರೀ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.

error: Content is protected !!