ಮಕ್ಕಳಲ್ಲಿ ಕಲಾಭಿರುಚಿ ಬೆಳೆಸಲು ಕಲಾ ಪ್ರದರ್ಶನ ಸಹಕಾರಿ

ಮಕ್ಕಳಲ್ಲಿ ಕಲಾಭಿರುಚಿ ಬೆಳೆಸಲು ಕಲಾ ಪ್ರದರ್ಶನ ಸಹಕಾರಿ

ಅರವತ್ತು ವರ್ಷಗಳ ಕಲಾ ಪಯಣ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ್‌

ದಾವಣಗೆರೆ, ಅ.4- ಮಕ್ಕಳಲ್ಲಿ ಕಲಾಭಿರುಚಿ ಬೆಳೆಸಲು ನಗರದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳು ದೃಶ್ಯಕಲಾ ವಿವಿಯಲ್ಲಿ ನಡೆಯುವ ಕಲಾ ಪ್ರದರ್ಶನ ವೀಕ್ಷಿಸಬೇಕಿದೆ ಎಂದು ದಾವಣಗೆರೆ ವಿವಿಯ ಕುಲಪತಿ ಪ್ರೊ.ಬಿ.ಡಿ. ಕುಂಬಾರ್‌ ಹೇಳಿದರು.

ನಗರದ ದೃಶ್ಯಕಲಾ ಮಹಾವಿದ್ಯಾಲಯದ ವಜ್ರ ಮಹೋತ್ಸವದ ಅಂಗವಾಗಿ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ `ಅರವತ್ತು ವರ್ಷಗಳ ಕಲಾ ಪಯಣ, ಅನ್ವೇಷಣೆಯ ಪಥದಲ್ಲಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದ ಕಲಾವಿದರನ್ನು ಕಾಲೇಜಿಗೆ ಕರೆಸಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಇದಕ್ಕೆ ಹಿರಿಯ ಪ್ರಾಧ್ಯಾಪಕರು ಹಾಗೂ ದಾವಣಗೆರೆ ವಿವಿಯ ಸಹಕಾರ ಇರಲಿದೆ ಎಂದು ತಿಳಿಸಿದರು.

ಕಳೆದ 60 ವರ್ಷಗಳಲ್ಲಿ ಸಾಧಿಸಲಾಗದ ಸಾಧನೆಯನ್ನು 60ನೇ ವರ್ಷದಲ್ಲಿ ಮಾಡಬೇಕು. ಈ ನಿಟ್ಟಿನಲ್ಲಿ ಕಾಲೇಜಿನಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ ಕಾಲೇಜಿನ ಕೀರ್ತಿ ಹೆಚ್ಚಿಸಬೇಕು ಎಂದು ಹೇಳಿದರು.

ಹಿರಿಯ ಚಿತ್ರಕಲಾವಿದ ಶ್ರೀನಾಥ್‌ ಬಿದರೆ ಅವರು, ತಮ್ಮ ತಂದೆ ಬಿದರೆ ನಾರಾಯಣ ಅವರ ಹೆಸರಿನಲ್ಲಿ `ಶ್ರೇಷ್ಠ ಕಲಾ ಪ್ರಶಸ್ತಿ’ ನೀಡಿರುವುದು ಕಾಲೇಜಿಗೆ ಹರ್ಷ ತಂದಿದೆ ಎಂದು ಶ್ಲ್ಯಾಘಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ, ದಾವಣಗೆರೆ ವಿವಿ ಹಾಗೂ ದೃಶ್ಯ ಕಲಾ ಕಾಲೇಜಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಹಕಾರ ನೀಡಲಿದೆ ಎಂದರು.

ಹಿರಿಯ ಕಲಾವಿದ ಮಹಾಲಿಂಗಪ್ಪ ಮಾತನಾಡಿ, ದೃಶ್ಯ ಕಲಾ ಕಾಲೇಜು ದೇವನಗರಿಯಲ್ಲೇ ಜನ್ಮ ತಾಳಲು ಶ್ರಮಿಸಿದ ಡಾ. ಮಿಣಜಗಿ ಅವರ ಹೆಸರನ್ನು ಯಾರು ಮರೆಯಬಾರದು. ಹಾಗಾಗಿ ಅವರಿಗೆ ಗೌರವ ಸಮರ್ಪಣೆ ಸಲ್ಲಿಸುವ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಕಾರ್ಯಕ್ರಮ ಮಾಡಬೇಕಿದೆ ಎಂದು ಹೇಳಿದರು.

ಕಲಾ ಶಾಲೆಯ ಚಟುವಟಿಕೆಗಳನ್ನು ಸಾರ್ವಜನಿಕರು ವೀಕ್ಷಿಸಬೇಕು ಮತ್ತು ನಗರದ ವಿವಿಧೆಡೆ ಕಲಾ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಮನವಿ ಮಾಡಿದರು.

ಕಾಲೇಜಿನ ಪ್ರಾಚಾರ್ಯ ಡಾ. ಜೈರಾಜ್‌ ಚಿಕ್ಕಪಾಟೀಲ್‌ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಕಲಾವಿದ ಶ್ರೀನಾಥ್‌ ಸ್ವಾಗತಿಸಿದರು.

ಈ ವೇಳೆ ಲಲಿತ ಕಲಾ ಅಕಾಡೆಮಿಯ ಆಶಾರಾಣಿ ನಡೋಣಿ, ಮೈಸೂರು ಕಲಾನಿಕೇತನ ಕಲಾ ಶಾಲೆಯ ಡಾ. ವಿಠ್ಠಲ ರೆಡ್ಡಿ ಎಫ್‌. ಚುಳಕಿ, ಕಲಾವಿದರಾದ ಪಿ. ಅಬೂಬಕರ್, ಡಿ. ಕುಬೇರಪ್ಪ ಮತ್ತು ಇತರರಿದ್ದರು.

error: Content is protected !!