ಸರಳತೆಯ ಮೇಲ್ಪಂಕ್ತಿ, ಸುಸಂಸ್ಕೃತ ದೇಶ ಮಹಾತ್ಮ ಗಾಂಧೀಜಿ ತತ್ವ ಪಾಲಿಸಲು ಕರೆ

ಸರಳತೆಯ ಮೇಲ್ಪಂಕ್ತಿ, ಸುಸಂಸ್ಕೃತ ದೇಶ ಮಹಾತ್ಮ ಗಾಂಧೀಜಿ ತತ್ವ ಪಾಲಿಸಲು ಕರೆ

ದಾವಣಗೆರೆ, ಅ. 2 – ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ತಮ್ಮ ಸರಳತೆಯಿಂದಲೇ ಇತರರಿಗೆ ಮೇಲ್ಪಂಕ್ತಿಯಾಗಿದ್ದು, ಶಾಂತಿ ಮತ್ತು ಅಹಿಂಸಾ ಮಂತ್ರದಿಂದಲೇ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು. ಅವರ ಈ ನಡೆ ಇಡೀ ಪ್ರಪಂಚಕ್ಕೇ ಮಾದರಿ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು. 

ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ರಾಮನಗರದಲ್ಲಿನ ಗಾಂಧಿ ಭವನದಲ್ಲಿ ಏರ್ಪಡಿಸಲಾದ ಸ್ವಚ್ಛತಾ ನಡಿಗೆ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜನ್ಮ ದಿನಾಚರಣೆ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರೀಜಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ, ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದರು.  

ಗಾಂಧೀಜಿಯವರ ಸರಳತೆ ಹಾಗೂ ಸ್ವಚ್ಛತೆ ಸಂದೇಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ನಮ್ಮ ಮನೆ ಹಾಗೂ ಸುತ್ತಮುತ್ತಲಿನ ವಾತಾವರಣದಲ್ಲಿ ಸ್ವಚ್ಛತಾ ಕಾರ್ಯ ನಿತ್ಯ ನಡೆಯಬೇಕು ಎಂದವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ,  ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಕಲ್ಪನೆಯಂತೆ ದೇಶವನ್ನು ಸುಶಿಕ್ಷಿತ, ಸುಸಂಸ್ಕೃತ ದೇಶವನ್ನಾಗಿಸಬೇಕಿದೆ. ಗಾಂಧಿಜೀಯವರ ತತ್ವ, ಆದರ್ಶ, ಸರಳತೆಯನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಗಾಂಧಿ ಭವನದಲ್ಲಿ ನಿರಂತರವಾಗಿ ಚಟುವಟಿಕೆಗಳು ನಡೆಯಬೇಕಿದೆ. ಈಗಾಗಲೇ ವಿವಿಧ 12 ಇಲಾಖೆಗಳಿಂದ ಕಾರ್ಯಕ್ರಮ ಆಯೋಜಿಸಲು ಮತ್ತು ಸರ್ಕಾರದಿಂದ ಆಚರಿಸಲಾಗುವ ಬಹುತೇಕ ಜಯಂತಿಗಳನ್ನು ಇಲ್ಲಿಯೇ ಆಚರಣೆ ಮಾಡಲು ಆದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಸ್ವ ಸಹಾಯ ಸಂಘದಿಂದ ತಯಾರಿಸುವ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಗಾಂಧಿ ಭವನ ನಿರ್ವಹಣೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಶಾಸಕರ ಸಹಯೋಗದೊಂದಿಗೆ ನಿರ್ವಹಣಾ ಸಮಿತಿ ರಚನೆ ಮಾಡಿ ಚಟುವಟಿಕೆಗಳಿಗೆ ಇನ್ನಷ್ಟು ಮಹತ್ವ ಕಲ್ಪಿಸಲಾಗುತ್ತದೆ ಎಂದರು. 

ಮಹಾನಗರ ಪಾಲಿಕೆಯ ಮೇಯರ್ ಕೆ.ಚಮನ್ ಸಾಬ್ ಮಾತನಾಡಿ, ಹಿಂದೂ, ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ಶಾಂತಿ ಮತ್ತು ಅಹಿಂಸೆಯನ್ನೇ ಬೋಧಿಸಿವೆ. ಆದರೆ, ಇಂದಿನ ದಿನಮಾನಗಳಲ್ಲಿ ಯುವಕರು ಧರ್ಮ, ದೇವರ ಕಲ್ಪನೆಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಸಂಘರ್ಷದ ಹಾದಿ ತುಳಿಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾವು ಶಾಂತಿ ಮತ್ತು ಅಹಿಂಸೆ ಪಾಲಿಸದಿದ್ದರೆ ದೇಶಕ್ಕೆ ಗಂಡಾಂತರ ಎದುರಾಗಲಿದೆ ಎಂದು ಎಚ್ಚರಿಸಿದರು. 

ದಾವಣಗೆರೆ ಹರಿಹರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಸದಾ ಶಾಂತಿ ಮತ್ತು ಅಹಿಂಸೆಯನ್ನು ಪಾಲನೆ ಮಾಡುತ್ತಿದ್ದ ಗಾಂಧೀಜಿ ಚಳುವಳಿಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎಂದು ಹೇಳಿದರು.

ಇದಕ್ಕೂ ಮುನ್ನ ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ನಡಿಗೆಯ ನಂತರ ಸ್ವಚ್ಛತೆಯ ಶ್ರಮದಾನ ನಡೆಯಿತು. ನಂತರ ಗಾಂಧಿ ಭವನದ ಸಭಾಂಗಣದಲ್ಲಿ ಸರ್ವಧರ್ಮ ಪ್ರಾರ್ಥನೆ, ಭಜನ್ ಗೀತಗಾಯನ ನಡೆಯಿತು. 

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಪಾಲಿಕೆಯ ಉಪ ಮೇಯರ್ ಸೋಗಿ ಶಾಂತಕುಮಾರ್, ಪಾಲಿಕೆ ಸದಸ್ಯರಾದ ಎ.ನಾಗರಾಜ್, ಆಶಾ ಉಮೇಶ್, ಉಪ ವಿಭಾಗಾಧಿಕಾರಿ ಸಂತೋಷ್ ಪಾಟೀಲ್, ದೂಡಾ ಆಯುಕ್ತ ಹುಲ್ಲುಮನಿ ತಿಮ್ಮಣ್ಣ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೊಟ್ರೇಶ್, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ, ಆವರಗೆರೆ ರುದ್ರಮುನಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಧನಂಜಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ನಜ್ಮಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!