ಜಿಲ್ಲಾಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗಾಗಿ ವಿಶೇಷ ಕೌಂಟರ್ ತೆರೆಯಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು.
– ಕೆ.ಎಸ್. ಬಸವಂತಪ್ಪ, ಶಾಸಕ
ದಾವಣಗೆರೆ, ಅ.1- ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಹಿರಿಯ ನಾಗರಿಕರಿಗಾಗಿ ಇರುವ ಶೇ.25ರ ರಿಯಾಯ್ತಿ ಪ್ರಯಾಣ ದರವನ್ನು ಶೇ.40ಕ್ಕೆ ಏರಿಸಲು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಬಳಿ ಚರ್ಚಿಸಿ, ಬೇಡಿಕೆ ಈಡೇರಿಸುವುದಾಗಿ ಶಾಸಕ ಕೆ.ಎಸ್. ಬಸವಂತಪ್ಪ ಭರವಸೆ ನೀಡಿದರು.
ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ನಗರದ ಶ್ರೀ ಸದ್ಯೋಜಾತ ಶಿವಾಚಾ ರ್ಯರ ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ `ವಿಶ್ವ ಹಿರಿಯ ನಾಗರಿಕರ ದಿನಾಚರಣೆ’ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ಜೀವಿಗಳ ನಿವೇಶನ ಬೇಡಿಕೆ ಬಗ್ಗೆಯೂ ದೂಡಾ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ನಿವೇಶನ ಒದಗಿಸುವಂತೆ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರ ಬಳಿ ಮಾತನಾಡಲಿದ್ದೇನೆ ಎಂದು ತಿಳಿಸಿದರು.
ಸರ್ಕಾರವು ಹಿರಿಯ ನಾಗರಿಕರ ಕಾಳಜಿ ಮತ್ತು ಹಿತ ದೃಷ್ಟಿಯಿಂದ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ಸರಿಯಾಗಿ ಬಳಸಿಕೊಂಡು ಸದುಪಯೋಗ ಪಡೆಯುವಂತೆ ಕಿವಿಮಾತು ಹೇಳಿದರು.
ಅಜ್ಞಾನ ಮತ್ತು ರೈತಾಪಿ ವರ್ಗದ ಜನರಲ್ಲಿ ವೃದ್ಧರನ್ನು ಗೌರವಿಸುವ ಸಂಸ್ಕಾರ ಇಂದಿಗೂ ಜೀವಂತವಾಗಿದೆ. ಆದರೆ ವಿದ್ಯಾವಂತರೇ ವಯೋ ವೃದ್ಧರನ್ನು ಅಗೌರವದಿಂದ ಕಾಣುತ್ತಿರುವುದು ಬೇಸರದ ಸಂಗತಿ ಎಂದರು.
ಪಾಲಕರು ಮಕ್ಕಳ ಭವಿಷ್ಯಕ್ಕಾಗಿ ಸಾಕಷ್ಟು ತ್ಯಾಗ ಮಾಡುತ್ತಾರೆ. ಆದರೆ ಅದೇ ಮಕ್ಕಳು ಉತ್ತಮ ಜೀವನ ನಡೆಸುತ್ತಾ ತಂದೆ-ತಾಯಿಯರನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಾರೆ ಎಂದು ಕೊರಗಿದರು.
ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಯುವ ಪೀಳಿಗೆಯು ವೃದ್ಧಾಪ್ಯದ ಜನರಿಗೆ ಸಹಾಯ ಮಾಡುವ ಹಾಗೂ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಮೇಯರ್ ಚಮನ್ ಸಾಬ್ ಮಾತನಾಡಿ, ಪಾಲಿಕೆಗೆ ಸಂಬಂಧಿಸಿದ ಕಾರ್ಯನಿಮಿತ್ತ್ಯ ಪಾಲಿಕೆಗೆ ಬರುವ ಹಿರಿಯ ನಾಗರಿಕರಿಗೆ ಬಹುಬೇಗ ಸ್ಪಂದಿಸುವುದಾಗಿ ಹೇಳಿದರು.
ಮಾತಾ-ಪಿತೃವಿನ ಪಾದಗಳಲ್ಲಿ ಸ್ವರ್ಗವೇ ಅಡಗಿದೆ. ಹಾಗಾಗಿ ಯುವಕರು ತಂದೆ-ತಾಯಿಯರನ್ನು ಪೂಜ್ಯ ಭಾವದಿಂದ ಕಾಣುವಂತೆ ಹೇಳಿದರು.
ಇದೇ ವೇಳೆ ಆಯುಷ್ ಇಲಾಖೆಯ ಡಾ. ಸುಧಾ ಅವರ ತಂಡ 110 ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಗೈದು, ಅವಶ್ಯವಿರುವ ವೃದ್ಧರಿಗೆ ಔಷಧಿ ವಿತರಿಸಿದರು.
ಈ ವೇಳೆ ಹಿರಿಯ ನಾಗರಿಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಟಿ. ಕುಸುಮ ಶ್ರೇಷ್ಠಿ, ಕಾರ್ಯದರ್ಶಿ ಎಸ್. ಗುರುಮೂರ್ತಿ, ಕೆ.ಜಿ. ಭರತ್‌ರಾಜ್, ಡಾ.ಕೆ.ಕೆ. ಪ್ರಕಾಶ್, ಕೆ.ಎಸ್. ರಾಜಾನಾಯ್ಕ, ಪಾಲಿಕೆ ಸದಸ್ಯ ಜಿ.ಎಸ್. ಗಡಿಗುಡಾಳ್ ಮಂಜುನಾಥ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಯು. ಯೋಗೇಂದ್ರ ಕುಮಾರ್ ಮತ್ತಿತರರಿದ್ದರು.