ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರಗೆ ರವೀಂದ್ರನಾಥ್ ತಿರುಗೇಟು
ದಾವಣಗೆರೆ, ಅ. 1 – ಲೋಕಸಭಾ ಚುನಾವಣೆಗಳಲ್ಲಿ ಐದು ಬಾರಿ ಮಲ್ಲಿಕಾರ್ಜುನಪ್ಪ ಹಾಗೂ ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ ಗೆದ್ದಿದ್ದಾರೆ. ಹೀಗಿರುವಾಗ §ಒಂದು ಬಾರಿ ಸೋತಿದ್ದಕ್ಕೆ ಇಷ್ಟೊಂದು ಏನೋ ಆಗೈತಿ ಅನ್ನಂಗೆ ಹೊಯ್ಕಳದು ಒಳ್ಳೆಯದಲ್ಲ’ ಎಂದು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದ್ದಾರೆ.
ಬಿಜೆಪಿಯ ಒಂದು ಬಣ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಗ್ಗಟ್ಟಾಗಿ ಕೆಲಸ ಮಾಡಿದಾಗ ಗೆದ್ದಿದ್ದೇವೆ. ಸರಿಯಾಗಿ ಕೆಲಸ ಮಾಡಿಲ್ಲದಿದ್ದಾಗ ಸೋತಿದ್ದೇವೆ. ನಾವೂ ಬಹಳ ಸಲ ಸೋತಿದ್ದೇವೆ. ಹೀಗಿರುವಾಗ ಒಂದು ಬಾರಿ ಸೋತಿದ್ದಕ್ಕೆ ಏನೇನೋ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಅರ್ಥವಿಲ್ಲ ಎಂದರು.
ಈ ರೀತಿಯ ಮಾತುಗಳನ್ನು ಬಿಟ್ಟು ಪಕ್ಷದ ಸಂಘಟನೆಗಾಗಿ ಕೆಲಸ ಮಾಡಬೇಕಿದೆ. ಹೋರಾಟ ಮಾಡಿ ಮತ್ತೆ ಜಿಲ್ಲೆಯಲ್ಲಿ ಬಿಜೆಪಿ ಎಲ್ಲಾ ಸೀಟುಗಳನ್ನು ಗೆಲ್ಲುವಂತೆ ಮಾಡಲು ಪ್ರಯತ್ನಿಸಬೇಕಿದೆ ಎಂದು ತಿಳಿಸಿದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಸಿದ್ದೇಶ್ವರ ಸೋಲು ಸ್ವಯಂ ಕೃತಾಪರಾಧ. ಅವರು ತಮ್ಮ ಪತ್ನಿ ಗಾಯತ್ರಿ ಸಿದ್ದೇಶ್ವರ ಜೊತೆ ಎಷ್ಟು ಹಳ್ಳಿಗಳಿಗೆ ಭೇಟಿ ಕೊಟ್ಟರು? ಸಂಸದರಾಗಿ ಎಷ್ಟು ಕೆಲಸ ಮಾಡಿದರು? ಜಿಲ್ಲೆಗೆ ಅವರ ಕೊಡುಗೆ ಏನು? ಎಂದು ಪ್ರಶ್ನಿಸಿದರು. ಕಾರ್ಯಕರ್ತರನ್ನು ದನಗಳ ರೀತಿ ಬೆದರಿಸುತ್ತಿದ್ದರು. ಸೋತ ತಕ್ಷಣ, ಅದಕ್ಕೆಲ್ಲ ಜಿಲ್ಲೆಯ ಮುಖಂಡರು ಕಾರಣ ಎಂದು ದೂರುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಟಿಕೆಟ್ ಕೊಡಿಸಿದರು. ರೆಸಾರ್ಟ್‌ನಲ್ಲಿ ನಡೆದ ಸಭೆಯಲ್ಲಿ ಸಿದ್ದೇಶ್ವರ ಗೆಲುವಿಗೆ ಶ್ರಮಿಸುವಂತೆ ಯಡಿಯೂರಪ್ಪನವರು ನಮ್ಮನ್ನು ಕೈ ಮುಗಿದು ಬೇಡಿಕೊಂಡಿದ್ದರು ಎಂದೂ ರೇಣುಕಾಚಾರ್ಯ ಹೇಳಿದರು.
ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ ಮಾತನಾಡಿ, ಬಿಜೆಪಿ ಎಂದೂ ಸೋಲಿನಿಂದ ಧೃತಿಗೆಟ್ಟಿಲ್ಲ. ಸೋಲು ಎಂದೂ ಗೊಂದಲಕ್ಕೆ ಕಾರಣ ಆಗಿಲ್ಲ. ಏನೇ ವಿಷಯಗಳಿದ್ದರೂ ನಾಲ್ಕು ಗೋಡೆ ಮಧ್ಯೆ ಮುಕ್ತ ಚರ್ಚೆ ಮಾಡಿ ಬಗೆಹರಿಸಿಕೊಳ್ಳಲು ಪಕ್ಷದಲ್ಲಿ ಅವಕಾಶವಿದೆ ಎಂದರು.
ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಬಿಜೆಪಿ ಕಾರ್ಯಕರ್ತರನ್ನು ಗೆಲ್ಲಿಸಲು ಒಂದಾಗಬೇಕಿದೆ. ಪಕ್ಷವನ್ನು ಒಗ್ಗಟ್ಟಿನಿಂದ ಬಲಪಡಿಸಬೇಕಿದೆ ಎಂದರು.
ಬಿಜೆಪಿ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಮಾತನಾಡಿ, ಬಿ.ಎಸ್. ಯಡಿಯೂರಪ್ಪನವರ ಆಶೀರ್ವಾದದಿಂದ ಮಾಜಿ ಸಂಸದ ಸಿದ್ದೇಶ್ವರ ಅವರಿಗೆ 20 ವರ್ಷ ಆಡಳಿತ ದೊರೆತಿತ್ತು. ಈ ಬಗ್ಗೆ ಅವರಿಗೆ ಕನಿಷ್ಠ ಸೌಜನ್ಯವೂ ಇಲ್ಲ ಎಂದು ಆಕ್ಷೇಪಿಸಿದರು.
ಸಿದ್ದೇಶ್ವರ ಈಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರೀತಿಯ ಬಾಯಿಬಡುಕರ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಮರ್ಯಾದೆ ತೆಗೆಯಬೇಕು ಎಂದಿದ್ದಾರಾ? ನಮ್ಮ ಜಿಲ್ಲೆಯಲ್ಲಿ ಯತ್ನಾಳ್ ಏನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು.