ದೇವರ ಬೆಳಕೆರೆ ಪಿಕಪ್ ಡ್ಯಾಂ, ಕೊಂಡಜ್ಜಿ ಕೆರೆ ಮತ್ತು ಅಗಸನಕಟ್ಟೆ ಕೆರೆಗೆ ತುಂಗಭದ್ರಾ ನದಿಯಿಂದ ನೀರನ್ನು ಲಿಫ್ಟ್ ಮಾಡಿ ಹರಿಹರ ನಗರಕ್ಕೆ ನೀರು ಪೂರೈಸುವ ಚಿಂತನೆ ಇದೆ.
-ಬಿ.ಪಿ. ಹರೀಶ್, ಶಾಸಕರು
ಮಲೇಬೆನ್ನೂರು, ಅ. 2- ತುಂಗಭದ್ರಾ ನದಿಯಿಂದ ಮಲೇಬೆನ್ನೂರು ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷೆಯ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಗೆ ಗಾಂಧಿ ಜಯಂತಿ ದಿನದಂದು ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಲ್ಲಿ ಚಾಲನೆ ನೀಡಿದರು.
ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗೆ ಪುರಸಭೆ ಕಛೇರಿ ಆವರಣದಲ್ಲಿ ಎಲ್ಇಡಿ ವ್ಯವಸ್ಥೆ ಮಾಡಲಾಗಿತ್ತು.
ಶಾಸಕ ಬಿ.ಪಿ. ಹರೀಶ್, ಪುರಸಭೆ ಪ್ರಭಾರಿ ಅಧ್ಯಕ್ಷೆ ಶ್ರೀಮತಿ ನಪ್ಸಿಯಾ ಬಾನು ಚಮನ್ ಷಾ ಸೇರಿದಂತೆ ಪುರಸಭೆಯ ಸರ್ವ ಸದಸ್ಯರು, ಗ್ರಾಮಸ್ಥರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಯೋಜನೆಯ ಜವಾಬ್ದಾರಿ ಹೊತ್ತಿರುವ ಕರ್ನಾ ಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪುರಸಭೆ ವತಿಯಿಂದ ಹಮ್ಮಿಕೊಂ ಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಪುರಸಭೆ ಅಧ್ಯಕ್ಷೆ ಶ್ರೀಮತಿ ನಪ್ಸೀಯಾ ಬಾನು ಅವರು, ಈ ಯೋಜನೆ ನಮ್ಮ ಪಟ್ಟಣಕ್ಕೆ ತುಂಬಾ ಅವಶ್ಯವಿತ್ತು. ಯೋಜನೆ ಮಂಜೂರು ಮಾಡಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪಟ್ಟಣದ ಜನತೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಇಂಜಿನಿಯರ್ ಅನಿಲ್‌ಕುಮಾರ್ ಅವರು, ದಾವಣಗೆರೆ ಜಿಲ್ಲೆಯಲ್ಲೇ ಇದೊಂದು ಮಾದರಿ ಯೋಜನೆ ಆಗಲಿದ್ದು, ದಿನದ 24 ಗಂಟೆಯೂ ನಲ್ಲಿಯಲ್ಲಿ ನೀರು ಬರಲಿದೆ. ಪ್ರತಿನಿತ್ಯ ಒಬ್ಬ ವ್ಯಕ್ತಿಗೆ 135 ಲೀಟರ್ ನೀರನ್ನು ಪೂರೈಸುತ್ತೇವೆ.
66.64 ಕೋಟಿ ರೂ. ವೆಚ್ಚದ ಈ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ಶೇ. 50, ರಾಜ್ಯ ಸರ್ಕಾರದ ಅನುದಾನ ಶೇ. 40 ಮತ್ತು ಸ್ಥಳೀಯ ಸಂಸ್ಥೆ ವಂತಿಗೆ ಶೇ. 10ರಷ್ಟು ಇರುತ್ತದೆ.
2055ಕ್ಕೆ ಪಟ್ಟಣದ ಜನಸಂಖ್ಯೆ 44 ಸಾವಿರ ಆಗಬಹುದೆಂದು ಪರಿಗಣಿಸಿ ಈ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಖಾಸಗಿ ಕಂಪನಿಗೆ ಟೆಂಡರ್ ಆಗಿದ್ದು, ಕಾಮಗಾರಿ ಆರಂಭಿಸಲು ಕಾರ್ಯಾದೇಶವನ್ನು ನೀಡಲಾಗಿದೆ. 2 ವರ್ಷದೊಳಗೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ಅನಿಲ್‌ಕುಮಾರ್ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ದೇಶದ 148 ನಗರ, ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ ಅಮೃತ 2.0 ಯೋಜನೆಯ ಆರಂಭಕ್ಕೆ ನಾವು ಸಾಕ್ಷಿಯಾಗಿರುವುದಕ್ಕೆ ಖುಷಿ ತಂದಿದೆ. ಇಂತಹ ಉತ್ತಮ ಯೋಜನೆ ಪಡೆದ ಮಲೇಬೆನ್ನೂರಿನ ಜನತೆ ಪುಣ್ಯವಂತರು ಎಂದ ಹರೀಶ್ ಅವರು, ಹರಿಹರ ನಗರಕ್ಕೂ ನೀರು ಪೂರೈಸುವ ಇಂತಹ ಸಮಗ್ರ ಯೋಜನೆ ಅತಿ ಅವಶ್ಯವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಮನ ಹರಿಸಬೇಕೆಂದು ಮನವಿ ಮಾಡಿದರು.
ಗೋವಿನಹಾಳ್ ಬಳಿಯ ತುಂಗಭದ್ರಾ ನದಿಯಿಂದ ನೀರು ಪೂರೈಸುವ ಈ ಯೋಜನೆ ಯಶಸ್ವಿಯಾಗಬೇಕಾದರೆ ನದಿಯಲ್ಲಿ ನೀರು ಬತ್ತಿದಾಗ ನೀರಿನ ಸಮಸ್ಯೆ ಆಗದಂತೆ ನೀರು ಸಂಗ್ರಹ ಕೆರೆಯನ್ನು ನಿರ್ಮಿಸುವುದು ಸೂಕ್ತ ಎಂಬ ಸಲಹೆ ಯನ್ನು ಶಾಸಕ ಹರೀಶ್ ಅಧಿಕಾರಿಗಳಿಗೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಭಜಕ್ಕನವರ್, ಪುರಸಭೆ ಸದಸ್ಯರಾದ ಖಲೀಲ್, ಗೌಡ್ರ ಮಂಜಣ್ಣ, ಕೆ.ಜಿ. ಲೋಕೇಶ್, ನಯಾಜ್, ಸಾಬೀರ್ ಅಲಿ, ಷಾ ಅಬ್ರಾರ್, ಬೆಣ್ಣೆಹಳ್ಳಿ ಸಿದ್ದೇಶ್, ದಾದಾಪೀರ್, ಬಿ. ಮಂಜುನಾಥ್, ಶಬ್ಬೀರ್ ಖಾನ್, ಬೋವಿ ಶಿವು, ಟಿ. ಹನುಮಂತಪ್ಪ, ವಿಜಯಲಕ್ಷ್ಮಿ ಗಂಗಾಧರ್, ಸುಧಾರಾಜು, ಅಕ್ಕಮ್ಮ ಸುರೇಶ್, ಮಂಜುಳಾ ಕುಮಾರ್, ಸುಮಯ್ಯ ರುಸ್ತುಂ, ಮೀನಾಕ್ಷಮ್ಮ ಹಾಲೇಶಪ್ಪ, ಸುಲೋಚನಮ್ಮ ಕುಮಾರ್,ನಗಿನಾ ಅನ್ವರ್, ನಾಜೀಮಾ ಜಮೀರ್, ತಹಸೀನಾ ಯುಸೂಫ್, ನಾಮಿನಿ ಸದಸ್ಯರಾದ ಬಿ. ವೀರಯ್ಯ, ಎ. ಆರೀಫ್ ಅಲಿ, ಬುಡ್ಡನವರ್ ರಫೀಕ್ ಸಾಬ್, ಬಸವರಾಜ್ ದೊಡ್ಡಮನಿ, ಎಕ್ಕೆಗೊಂದಿ ಕರಿಯಪ್ಪ, ಪುರಸಭೆ ಅಧಿಕಾರಿಗಳಾದ ದಿನಕರ್, ಉಮೇಶ್, ನವೀನ್, ಜಯಲಕ್ಷ್ಮಿ, ಚಿತ್ರಾ ಶಿವರಾಜ್, ಅವಿನಾಶ್, ರಾಘವೇಂದ್ರ, ಧನಂಜಯ, ಇಮ್ರಾನ್ ಮತ್ತಿತರರು ಭಾಗವಹಿಸಿದ್ದರು.
ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಇಇ ಎಂ.ಬಿ. ರವಿ ಸ್ವಾಗತಿಸಿದರು. ಪುರಸಭೆ ಸದಸ್ಯ ಸಾಬೀರ್ ಅಲಿ ನಿರೂಪಿಸಿದರೆ, ಮಂಡಳಿಯ ಎಇ ಪ್ರಕಾಶ್ ಸಜ್ಜನ್ ವಂದಿಸಿದರು.