66 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಅಮೃತ ಯೋಜನೆಗೆ ಪ್ರಧಾನಿಯಿಂದ ಶಂಕುಸ್ಥಾಪನೆ
ಮಲೇಬೆನ್ನೂರು ಪುರಸಭೆ ಸಾಮಾನ್ಯ ಸಭೆಯಲ್ಲಿ ಶಾಲೆ ಜಾಗದಲ್ಲೇ ನಿರ್ಮಿಸುವಂತೆ ಕಾಂಗ್ರೆಸ್ ಸದಸ್ಯರ ಪಟ್ಟು
ಮಲೇಬೆನ್ನೂರು, ಅ.1- ಸಾರ್ವಜನಿಕರ ಹಿತದೃಷ್ಟಿಯಿಂದ ಪಟ್ಟಣದ ಜಿಬಿಎಂಎಸ್ ಶಾಲೆ ಜಾಗದಲ್ಲೇ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಸಹಕಾರ ನೀಡುವಂತೆ ಪುರಸಭೆಯ ಬಹುತೇಕ ಸದಸ್ಯರು ಶಾಸಕ ಬಿ.ಪಿ.ಹರೀಶ್ ಅವರಿಗೆ ಮಂಗಳವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮನವಿ ಮಾಡಿದರು.
ಶಾಲೆಯ ಆವರಣದಲ್ಲಿರುವ ಹಳೆಯ ಕೊಠಡಿಗಳು ಬಳಕೆಯಾಗದ ಕಾರಣ ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗಿರುವುದರಿಂದ ಆ ಕೊಠಡಿಗಳನ್ನು ತೆರವು ಮಾಡಿ, ಆ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸುವುದು ಸೂಕ್ತ ಎಂದು ಸದಸ್ಯರಾದ ಕೆ.ಜಿ.ಲೋಕೇಶ್, ನಯಾಜ್, ಬಿ.ಮಂಜುನಾಥ್, ಖಲೀಲ್, ಗೌಡ್ರ ಮಂಜಣ್ಣ, ಸಾಬೀರ್, ಭೋವಿ ಶಿವು, ದಾದಾಪೀರ್, ಎ.ಆರೀಫ್ ಅಲಿ, ಬಿ.ವೀರಯ್ಯ, ಬಿ.ರಫೀಕ್ ಸಾಬ್ ಮತ್ತಿತರೆ ಸದಸ್ಯರು ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದರು.
ನಿಟ್ಟೂರು ರಸ್ತೆಯಲ್ಲಿ ಗ್ಯಾರೇಜ್ಗಳು ಇರುವುದರಿಂದ ಹಳ್ಳಿಗಳ ಜನರು ಟ್ರ್ಯಾಕ್ಟರ್ ರಿಪೇರಿಗಾಗಿ ಬರುತ್ತಾರೆ. ಸಮುದಾಯ ಆರೋಗ್ಯ ಕೇಂದ್ರ, ನಾಡಕಚೇರಿ, ಪುರಸಭೆ, ರೈತ ಸಂಪರ್ಕ ಕೇಂದ್ರಗಳಿಗೆ ಬರುವ ಜನರಿಗೂ ಈ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಿದರೆ, ತುಂಬಾ ಅನುಕೂಲವಾಗುತ್ತದೆ. ಈ ವಿಚಾರದಲ್ಲಿ ಯಾರೂ ಸಹ ರಾಜಕೀಯ ಮಾಡದೇ ಮಾನವೀಯತೆ ದೃಷ್ಟಿಯಿಂದ ಸಹಕರಿಸಬೇಕೆಂದು ಪುರಸಭೆಯ ಕಾಂಗ್ರೆಸ್ ಸದಸ್ಯರು ಶಾಸಕರಿಗೆ ಕೋರಿದರು.
ಏತನ್ಮಧ್ಯೆ ಮಾತನಾಡಿದ ಪುರಸಭೆಯ ಬಿಜೆಪಿ ಸದಸ್ಯ ಬೆಣ್ಣೆಹಳ್ಳಿ ಸಿದ್ದೇಶ್ ಅವರು, ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಶಾಲೆಯ ಜಾಗದಲ್ಲಿ ಬೇಡ ಎಂದಾಗ ಜೆಡಿಎಸ್ ಸದಸ್ಯ ಟಿ.ಹನುಮಂತಪ್ಪ ಕೂಡಾ ಧ್ವನಿ ಗೂಡಿಸಿದರು.
ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಪುರಸಭೆಯ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಿ, ಶಾಲೆ ಜಾಗದಲ್ಲಿ ಬೇಡ ಎಂಬುದು ನಮ್ಮ ವಾದವಾಗಿದೆ. ಅಷ್ಟಕ್ಕೂ ಈ ವಿಚಾರ ಈಗ ನ್ಯಾಯಾಲಯ ದಲ್ಲಿರುವುದು. ಈ ವಿಷಯವನ್ನು ಸಭೆಯಲ್ಲಿ ಚರ್ಚೆಗೆ ತರಬಾರದಿತ್ತು ಎಂದರು. ಮಧ್ಯ ಪ್ರವೇಶಿಸಿದ ಪುರಸಭೆ ಸದಸ್ಯ ಎ.ಆರೀಫ್ ಅಲಿ ಅವರು, ವಿಷಯ ನ್ಯಾಯಾಲಯದಲ್ಲಿರುವ ಬಗ್ಗೆ ನಮ್ಮ ಪುರಸಭೆಗೆ ಯಾವುದೇ ಮಾಹಿತಿ ಇಲ್ಲ ಎಂದರು.
ಆಗ ಪುರಸಭೆ ಮುಖ್ಯಾಧಿಕಾರಿ ಭಜಕ್ಕನವರ್ ಕೂಡಾ ಯಾವುದೇ ಮಾಹಿತಿ ಇಲ್ಲ. ಇಂದಿರಾ ಕ್ಯಾಂಟೀನ್ ನಿರ್ಮಾಣ ವಿಚಾರವಾಗಿ ಡಿಸಿ ಅವರನ್ನು ಖುದ್ದಾಗಿ ಭೇಟಿ ಮಾಡಿ ಚರ್ಚಿಸಿದಾಗ, ಅವರು ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿ ಎಂಬ ಸಲಹೆ ಮೇರೆಗೆ ಈ ವಿಷಯವನ್ನು ಸಭೆಯ ಅಜೆಂಡಾದಲ್ಲಿ ತಂದಿದ್ದೇವೆ ಎಂದು ಶಾಸಕರಿಗೆ ಉತ್ತರಿಸಿದರು.
ಆಗ ಶಾಸಕರು, ಈ ಬಗ್ಗೆ ಡಿಸಿ ಮತ್ತು ಎಸಿ ಅವರು ಸ್ಥಳ ಪರಿಶೀಲನೆ ಮಾಡಿದ ವರದಿ ಸಮೇತ ಮುಂದಿನ ಸಭೆಯಲ್ಲಿ ಈ ವಿಷಯವನ್ನು ಚರ್ಚೆಗೆ ತನ್ನಿ ಮತ್ತು ವಿಷಯ ನ್ಯಾಯಾಲಯದಲ್ಲಿರುವ ಬಗ್ಗೆ ಮಾಹಿತಿ ಪಡೆದು ಏನಾಗಿದೆ ಎಂದು ತಿಳಿದುಕೊಳ್ಳಿ, ಜೊತೆಗೆ ಶಾಲಾ ಕೊಠಡಿಗಳನ್ನು ಕೆಡವಲು ಪುರಸಭೆ ಮುಖ್ಯಾಧಿಕಾರಿಗೆ ಅಧಿಕಾರ ಕೊಟ್ಟವರು ಯಾರೆಂಬ ಅಧಿಕೃತ ಮಾಹಿತಿಯನ್ನು ತನ್ನಿ ಎಂದು ಮುಖ್ಯಾಧಿಕಾರಿಗೆ ಹೇಳಿ ಸಭೆಯಿಂದ ನಿರ್ಗಮಿಸಿದರು.
ಇಷ್ಟಕ್ಕೂ ಸುಮ್ಮನಾಗದ ಪುರಸಭೆಯ ಕಾಂಗ್ರೆಸ್ ಸದಸ್ಯರು ಕೈ ಎತ್ತುವ ಮೂಲಕ ಅದೇ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ಆದಷ್ಟು ಬೇಗ ನಿರ್ಮಿಸಿ ಎಂದು ಬಹುಮತ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಭಜಕ್ಕನವರ್ ಇಂದಿನ ಸಭೆಯ ನಡಾವಳಿಗಳನ್ನು ಡಿಸಿ ಅವರ ಗಮನಕ್ಕೆ ತರುತ್ತೇನೆ ಎಂದರು.
ಅ.2 ರಂದು ಗಾಂಧೀಜಿ ಜಯಂತಿ ಕಾರ್ಯಕ್ರಮದ ನಂತರ ಪುರಸಭೆ ಆವರಣದಲ್ಲಿ ತುಂಗಾ ಭದ್ರಾ ನದಿಯಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ 66 ಕೋಟಿ ರೂ. ವೆಚ್ಚದ ಅಮೃತ 2.0 ಯೋಜನೆಗೆ ನವದೆಹಲಿಯಲ್ಲಿ ಪ್ರಧಾನ ನರೇಂದ್ರ ಮೋದಿ ಅವರು ಶಂಕು ಸ್ಥಾಪನೆ ಮಾಡುವ ಕಾರ್ಯಕ್ರಮವನ್ನು ಎಲ್ಇಡಿ ಮೂಲಕ ತೋರಿಸಲಾಗುವುದೆಂದರು. ಮುಖ್ಯಾಧಿಕಾರಿ ಭಜಕ್ಕನವರ್ ತಿಳಿಸಿದರು.
ಆಶ್ರಯ ಕಾಲೋನಿ ಬಳಿ ಇರುವ 5 ಎಕರೆ ಜಾಗದಲ್ಲಿ ನಿವೇಶನಕ್ಕಾಗಿ 1730 ಅರ್ಜಿಗಳು ಬಂದಿದ್ದವು. ಅವುಗಳನ್ನು ಪರಿಶೀಲಿಸಿದಾಗ 1350 ಅರ್ಜಿಗಳು ಸ್ವೀಕೃತಗೊಂಡಿವೆ. ಆ ಜಾಗದಲ್ಲಿ 158 ನಿವೇಶನಗಳು ಮಾತ್ರ ಲಭ್ಯವಾಗಲಿದ್ದು, ಫಲಾನುಭವಿಗಳ ಆಯ್ಕೆಯನ್ನು ಆಶ್ರಯ ಸಮಿತಿ ಸಭೆಯನ್ನು ಆಯ್ಕೆ ಮಾಡಲಾಗುವುದೆಂಬ ಅಂಶವನ್ನು ಮುಖ್ಯಾಧಿಕಾರಿಗಳು ಸಭೆಯ ಗಮನಕ್ಕೆ ತಂದರು.
ಆಗ ಸದಸ್ಯರಾದ ಗೌಡ್ರ ಮಂಜಣ್ಣ, ನಯಾಜ್, ಲೋಕೇಶ್, ಆರೀಫ್ ಅಲಿ, ಸಾಬೀರ್ ಅಲಿ, ಬಿ.ವೀರಯ್ಯ ಮತ್ತಿತರರು ಜಿ+2 ಮಾದರಿಯಲ್ಲಿ ಮನೆ ನಿರ್ಮಿಸಿಕೊಡಿ ಎಂಬ ಸಲಹೆ ನೀಡಿದರು.
ಪುರಸಭೆ ಪ್ರಭಾರಿ ಅಧ್ಯಕ್ಷೆ ಶ್ರೀಮತಿ ನಪ್ಸೀಯಾ ಬಾನು ಚಮನ್ ಷಾ ಅಧ್ಯಕ್ಷತೆ ವಹಿಸಿದ್ದರು.
ಸದಸ್ಯರುಗಳಾದ ಷಾ ಅಬ್ರಾರ್, ಸದಸ್ಯ ಸಾಬೀರ್ ಅಲಿ, ಸಾಬೀರ್ ಅಲಿ, ಕೆ.ಜಿ.ಲೋಕೇಶ್, ಸದಸ್ಯೆ ಶ್ರೀಮತಿ ವಿಜಯಲಕ್ಷ್ಮಿ ಕೆ.ಪಿ.ಗಂಗಾಧರ್, ಸುಧಾ ಪಿ.ಆರ್.ರಾಜು, ಸುಮಯ್ಯ ಬಾನು, ಎಂ.ಬಿ.ರುಸ್ತುಂ, ಮೀನಾಕ್ಷಮ್ಮ ಜಿಗಳೇರ ಹಾಲೇಶಪ್ಪ, ಸುಲೋಚನಮ್ಮ ಓ.ಜಿ.ಕುಮಾರ್, ಮಂಜುಳಾ ಭೋವಿಕುಮಾರ್, ನಾಜೀಮ್ ಜಮೀರ್, ನಗಿನಾ ಬಾನು ಅನ್ವರ್ ಭಾಷಾ, ಅಕ್ಕಮ್ಮ ಬಿ.ಸುರೇಶ್, ತಹಸೀನಾ ಬಾನು ಯುಸೂಫ್, ಎಕ್ಕೆಗೊಂದಿ ಕರಿಯಪ್ಪ, ಬಸವರಾಜ್ ದೊಡ್ಮನಿ, ಬುಡ್ಡವರ್ ರಫೀಕ್ ಸಾಬ್, ಪುರಸಭೆ ಕಂದಾಯಾಧಿಕಾರಿ ಧನಂಜಯ, ಇಂಜಿನಿಯರ್ ರಾಘವೇಂದ್ರ, ಕಚೇರಿ ವ್ಯವಸ್ಥಾಪಕಿ ಜಯಲಕ್ಷ್ಮಿ, ಪರಿಸರ ಇಂಜಿನಿಯರ್ ಉಮೇಶ್, ಸಮುದಾಯ ಸಂಘಟನಾಧಿಕಾರಿ ದಿನಕರ್, ಆರೋಗ್ಯ ನಿರೀಕ್ಷಕರಾದ ನವೀನ್, ಶಿವರಾಜ್, ಅವಿನಾಶ್, ಕಂದಾಯ ನಿರೀಕ್ಷಕರಾದ ಚಿತ್ರಾ, ಇಮ್ರಾನ್ ಮತ್ತಿತರರು ಸಭೆಯಲ್ಲಿದ್ದರು.