ಅಂಧರಿಗೆ ಬೆಳಕಾಗಿದ್ದ ಹಾನಗಲ್ ಕುಮಾರ ಶ್ರೀ

ಅಂಧರಿಗೆ ಬೆಳಕಾಗಿದ್ದ ಹಾನಗಲ್ ಕುಮಾರ ಶ್ರೀ

ಹಾನಗಲ್ ಲಿಂ. ಶ್ರೀ ಕುಮಾರ ಶಿವಯೋಗಿಗಳ 157 ನೇ ಜಯಂತ್ಯುತ್ಸವದಲ್ಲಿ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ

ದಾವಣಗೆರೆ, ಸೆ. 29- ಶಿವಯೋಗ ಮಂದಿರ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ ಹಾನಗಲ್ ಕುಮಾರ ಮಹಾಶಿವಯೋಗಿಗಳ ದೂರದೃಷ್ಟಿಗೆ ಸಾಕ್ಷಿಯಾಗಿದ್ದು, ಅಂಧರ ಪಾಲಿಗೆ ಬೆಳಕಾಗಿದ್ದರು ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಬಾಡಾ ಕ್ರಾಸ್ ಬಳಿ ಇರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಅಖಿಲ ಕರ್ನಾಟಕ ಶ್ರೀ ಗುರು ಕುಮಾರೇಶ್ವರ ಅಂಧ ಸಂಗೀತ ಕಲಾ ವಿದರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಹಾನಗಲ್ ಲಿಂ. ಶ್ರೀ ಕುಮಾರ ಮಹಾ ಶಿವಯೋಗಿ ಗಳ 157 ನೇ ಜಯಂತ್ಯುತ್ಸವ, ತುಲಾಭಾರ, ಸ್ವಾಮಿ ಸುಕುಮಾರ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಹಾನಗಲ್ ಕುಮಾರಸ್ವಾಮಿಗಳು ಅರಮನೆಯ ಸಂಗೀತವನ್ನು ಗುರುಮನೆಗೆ ತಂದು ಅಂಧರ ಬಾಳು ಬೆಳಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂಧ ವಿದ್ಯಾರ್ಥಿಗಳಿಗೆ ಸಂಗೀತದ ಬೆಳಕು ತೋರಿದವರು ಪಂಚಾಕ್ಷರಿ ಗವಾಯಿ ಹಾಗೂ ಪಂಡಿತ್ ಪುಟ್ಟರಾಜ್ ಕವಿ ಗವಾಯಿಗಳು. ಆದರೆ ಸಂಗೀತದ ಬೀಜ ಬಿತ್ತಿದವರು ಹಾನಗಲ್ ಕುಮಾರಸ್ವಾಮಿಗಳು ಎಂದರು.

ಇಡೀ ಜೀವನವನ್ನೇ ಸಮಾಜಕ್ಕಾಗಿ ಸಮರ್ಪಿಸಿಕೊಂಡವರು ಹಾನಗಲ್ ಶ್ರೀಗಳು. ಅವರು ಸ್ಥಾಪಿಸಿದ ಶಿವಯೋಗ ಮಂದಿರದಿಂದ ಗುರು-ವಿರಕ್ತರ ಸಮನ್ವಯತೆ ಸಾಧ್ಯವಾಯಿತು. ಇಂದಿಗೂ ಸಹ ಅಲ್ಲಿ ನೂರಾರು ಸಾಧಕ ವಟುಗಳು ವೇದ, ಆಗಮ, ಸಂಸ್ಕೃತ, ವಚನ ಸಾಹಿತ್ಯದ ಅಧ್ಯಯನ ಮಾಡುತ್ತಿದ್ದು, ಸ್ವಾಮೀಜಿಗಳನ್ನು ತಯಾರು ಮಾಡುವ ಪ್ರಮುಖ ಕೇಂದ್ರವಾಗಿದೆ ಎಂದು ಹೇಳಿದರು.

ಹಾನಗಲ್ ಕುಮಾರ ಮಹಾಶಿವಯೋಗಿಗಳು ಇಲ್ಲದಿದ್ದರೆ ನಾಡಿನ ಸಾವಿರಾರು ಮಠಗಳು ಅಸ್ತಿತ್ವ ಕಳೆದುಕೊಳ್ಳುತ್ತಿದ್ದವು. ವೀರಶೈವ ಸಮಾಜ ಸಂಘಟನೆಗೆ ಹಿನ್ನಡೆ ಉಂಟಾಗುತ್ತಿತ್ತು ಎಂದು ತಿಳಿಸಿದರು.

ದಾವಣಗೆರೆ, ಗದಗ, ಶಿವಮೊಗ್ಗದಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಪಾಠ ಕಲಿತ ಅನೇಕರು ಉತ್ತಮ ಕಲಾವಿದರಾಗಿ, ಸಂಗೀತ ಶಿಕ್ಷಕರಾಗಿ ಹೊರ ಹೊಮ್ಮುವ ಮೂಲಕ ಆಶ್ರಮದ ಕೀರ್ತಿಯನ್ನು ಬೆಳಗಿದ್ದಾರೆ ಎಂದು ಹೇಳಿದರು.

ವೀರೇಶ್ವರ ಪುಣ್ಯಾಶ್ರಮದ ಅಧ್ಯಕ್ಷರಾದ ಡಾ. ಅಥಣಿ ಎಸ್. ವೀರಣ್ಣ  ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ. ಶಾಮನೂರು ಶಿವಶಂಕರಪ್ಪ, ಎನ್.ಎಂ. ಕಡೇಕೊಪ್ಪ, ಎ.ಸಿ. ಜಯಣ್ಣ ಮೊದಲ್ಗೊಂಡು ಅನೇಕ ದಾನಿಗಳ ಸಹಕಾರದಿಂದ ಇಂದು ವೀರೇಶ್ವರ ಪುಣ್ಯಾಶ್ರಮ ಸಾಕಷ್ಟು ಅಭಿವೃದ್ಧಿ ಕಂಡಿದೆ. ತುಲಾಭಾರದ ಮೂಲಕ ದಾನ ಮಾಡುವ ಮೂಲಕ ಶಿಲಾ ಮಂಟಪ ನಿರ್ಮಾಣಕ್ಕೆ ಕಾರಣೀಭೂತರಾಗಿದ್ದು, ಅವರ ಹೆಸರುಗಳನ್ನು ಆಶ್ರಮದಲ್ಲಿ ಹಾಕಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಪ್ರತಿಮೆ ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈ ವರ್ಷ 365 ದಿನಗಳ ಕಾಲ ನಿರಂತರವಾಗಿ ದಾಸೋಹ ನಡೆಸಲು ನಿತ್ಯ ದಾಸೋಹಿಗಳನ್ನು ನೋಡುತ್ತಿದ್ದೇವೆ. ಈಗಾಗಲೇ ಸಾಕಷ್ಟು ದಾನಿಗಳು ಮುಂದೆ ಬಂದಿದ್ದಾರೆಂದರು.

ಪ್ರಸ್ತುತ 50 ಮಕ್ಕಳು ಸಂಗೀತಾಭ್ಯಾಸ ಮಾಡುತ್ತಿದ್ದು, ಇನ್ನೂ 50 ಮಕ್ಕಳಿಗೆ ಅವಕಾಶ ಕಲ್ಪಿಸಲಾಗುವುದು. ಅವರಿಗೆ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಬೆಂಗಳೂರಿನ ವಕೀಲರಾಗಿದ್ದ ಅಕ್ಕಮಹಾದೇವಿಯವರು ತಮ್ಮ ಆಸ್ತಿಯ ಶೇ. 60 ರಷ್ಟನ್ನು ಆಶ್ರಮದ ಅಭಿವೃದ್ಧಿಗೆ ದೇಣಿಗೆಯಾಗಿ ನೀಡಲು ವಿಲ್ ಬರೆದಿದ್ದಾರೆ. ಕೆಲವು ಕಾನೂನು ತೊಡಕುಗಳ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಇದಲ್ಲದೇ 25 ಲಕ್ಷ ರೂ.ಗಳನ್ನೂ ಸಹ ಅವರು ನೀಡಿದ್ದಾರೆಂದು ಮಾಹಿತಿ ನೀಡಿದರು. 

ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ, ಶಿವಮೊಗ್ಗ ಶ್ರೀ ವೀರೇಶ್ವರ ಪುಣ್ಯಾಶ್ರಮದ ಸಂಸ್ಥಾಪಕ ಅಧ್ಯಕ್ಷರೂ ಆದ ಆರ್.ವಿ. ಸಂಗಮೇಶ್ವರ ಗವಾಯಿಗಳಿಗೆ `ಸ್ವಾಮಿ ಸುಕುಮಾರ ಸಮ್ಮಾನ್’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೃಹನ್ಮಠ ಅಡ್ನೂರ, ರಾಜೂರ, ಗದಗದ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ಗದಗ – ದಾವಣಗೆರೆ – ಶಿವಮೊಗ್ಗ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಡಾ. ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸಿದ್ದರು.

ಅಖಿಲ ಕರ್ನಾಟಕ ಶ್ರೀ ಗುಗು ಕುಮಾರೇಶ್ವರ ಅಂಧ ಸಂಗೀತ ಕಲಾವಿದರ ಸಂಘದ ಅಧ್ಯಕ್ಷ ರಾಜಕುಮಾರ್ ಮುಲಗೆ, ಕಾರ್ಯದರ್ಶಿ ಸಂತೋಷ್ ಬಾಣಿ, ವೀರೇಶ್ವರ ಪುಣ್ಯಾಶ್ರಮದ ಉಪಾಧ್ಯಕ್ಷ ಎ.ಎಸ್. ಮೃತ್ಯುಂಜಯ, ನಿರ್ದೇಶಕ ಎ.ಹೆಚ್. ಸಿದ್ಧಲಿಂಗ ಸ್ವಾಮಿ, ವಾಣಿ ನಾಗಭೂಷಣ್ ಮತ್ತಿತರರು ಭಾಗವಹಿಸಿದ್ದರು.

ಜಯಲಕ್ಷ್ಮಿ ಹೆಗಡೆ ಮತ್ತು ಕುಟುಂಬದವರು ತುಲಾಭಾರ ನೆರವೇರಿಸಿದರು. ಶಿವಮೊಗ್ಗ ವೀರೇಶ್ವರ ಪುಣ್ಯಾಶ್ರಮದ ಅಂಧ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಸರೋಜಮ್ಮ ನಿಜಲಿಂಗಪ್ಪ ಕಡೇಕೊಪ್ಪ, ವಾಣಿ ವಿಲಾಸ, ಜಿ.ಇ. ನಾಗರತ್ನಮ್ಮ ಚನ್ನವೀರಪ್ಪ, ಶಿಲ್ಪ ಮೃತ್ಯುಂಜಯ ಕಂಚಿಕೆರೆ, ಎಂ.ಬಸವರಾಜ್, ಬಸವನಗೌಡ ಮತ್ತಿತರರನ್ನು ಗೌರವಿಸಲಾಯಿತು.

ವೀರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳು ಪ್ರಾರ್ಥಿಸಿದರು. ಶಿವಬಸಯ್ಯ ಚರಂತಿಮಠ ಸ್ವಾಗತಿಸಿದರು. ರಘುನಂದ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಡಯ್ಯ ಶಾಸ್ತ್ರಿ ನಿರೂಪಿಸಿದರು.

error: Content is protected !!