ಸ್ವಪಕ್ಷೀಯರ ವಿರುದ್ಧವೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ
ದಾವಣಗೆರೆ, ಸೆ. 29 – ಕಾಂಗ್ರೆಸ್ ಸರ್ಕಾರ ಒಡೆದು ಮುಖ್ಯಮಂತ್ರಿಯಾಗಲು ಬಿಜೆಪಿಯಲ್ಲಿ ಕೆಲವರು ಸಾವಿರ ಕೋಟಿ ರೂ. ಇಟ್ಟುಕೊಂಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ನಲ್ಲಿ ದೊಡ್ಡ ಕ್ರಾಂತಿ ಆಗಲಿದೆ. ಆಗ ಕಾಂಗ್ರೆಸ್ ಸರ್ಕಾರ ಕೆಡವಿ ನಾನೇ ಮುಖ್ಯಮಂತ್ರಿ ಆಗಬೇಕು ಎಂದು ಕೆಲವರು ಸಾವಿರ ಕೋಟಿ ರೂ. ಕಾಯ್ದಿಟ್ಟುಕೊಂಡಿದ್ದಾರೆ ಎಂದರು.
ಈ ಹಿಂದೆ 17 ಜನರನ್ನು ಪಕ್ಷಕ್ಕೆ ಕರೆತಂದು ಬಿಜೆಪಿಯ ಪರಿಸ್ಥಿತಿ ಹೀಗಾಗಿದೆ. ಮತ್ತೆ ಆಪರೇಷನ್ ಕಮಲ ನಡೆಸುವುದು ನಮಗೆ ಒಪ್ಪಿಗೆ ಇಲ್ಲ ಎಂದು ಯತ್ನಾಳ್ ಹೇಳಿದರು.
ಗ್ಯಾರಂಟಿ ಕಾರಣದಿಂದಾಗಿ ಸರ್ಕಾರ ಈಗಾ ಗಲೇ ದಿವಾಳಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಪರೇಷನ್, ಖರೀದಿ ಇತ್ಯಾದಿಗಳಿಗೆ ನಾವು ಹಾಗೂ ಪಕ್ಷದ ಹೈಕಮಾಂಡ್ ಒಪ್ಪುವುದಿಲ್ಲ ಎಂದವರು ತಿಳಿಸಿದರು.
ರಾಜ್ಯದಲ್ಲಿ ಪಾಕಿಸ್ತಾನಿ ಸರ್ಕಾರ ಅಧಿಕಾರದಲ್ಲಿದೆ
ಶಾಸಕ ಯತ್ನಾಳ್, ಮಾಜಿ ಸಂಸದ ಪ್ರತಾಪ್ ಸಿಂಹ ತರಾಟೆ
ದಾವಣಗೆರೆ, ಸೆ. 29 – ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಪಾಕಿಸ್ತಾನಿ ಸರ್ಕಾರ ಅಧಿಕಾರದಲ್ಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶ ಹಬ್ಬದ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಧಿಸಿರುವ ನಿಬಂಧನೆಗಳನ್ನು ನೋಡಿದರೆ ಕರ್ನಾಟಕದಲ್ಲಿ ಯಾವ ಸರ್ಕಾರ ಅಧಿಕಾರದಲ್ಲಿದೆ ಎಂಬ ಅನುಮಾನ ಮೂಡುತ್ತಿದೆ ಎಂದರು.
ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೇನಿ ಬಾವುಟ ಪ್ರದರ್ಶನ ಮತ್ತು ಅವರ ಪರವಾದ ಘೋಷಣೆಗಳನ್ನು ಕೇಳಿದರೆ ಕರ್ನಾಟಕದಲ್ಲಿ ಪಾಕಿಸ್ತಾನ ಸಂಸ್ಕೃತಿಯ ತಾಲಿಬಾನಿ ಸರ್ಕಾರ ಅಧಿಕಾರದಲ್ಲಿದೆಯಾ? ಎಂಬ ಸಂಶಯ ಮೂಡುತ್ತಿದೆ ಎಂದರು.
ಈ ವರ್ಷ ಗಣೇಶ ಪ್ರತಿಷ್ಠಾಪನೆಯ ಸಂಘಟನೆಗಳಿಗೆ ಹಾಕುತ್ತಿರುವ ನಿಯಮಗಳನ್ನು ಗಮನಿಸಿದರೆ, ಮುಂದಿನ ವರ್ಷ ಗಣೇಶೋತ್ಸವದ ಮೇಲೆ ನಿರ್ಬಂಧ ಇರುವ ಸಾಧ್ಯತೆಗಳಿವೆ. ವಿನಾಕಾರಣ ಇಲ್ಲದ ನಿಯಮಗಳನ್ನು ಹಿಂದೂಗಳ ಮೇಲೆ ಹೇರಲಾಗುತ್ತಿದೆ. ಅದೇ ಮುಸಲ್ಮಾನರು ರಸ್ತೆಯಲ್ಲೇ ಕುಳಿತು ನಮಾಜ್ ಮಾಡಿದರೂ, ತಲ್ವಾರ್ ಪ್ರದರ್ಶನ ಮಾಡಿದರು ಅವರ ವಿರುದ್ಧ ಕ್ರಮ ಇಲ್ಲ ಎಂದು ಆರೋಪಿಸಿದರು.
ದಾವಣಗೆರೆಯಲ್ಲಿ ನಡೆದ ಗಲಭೆ ಸಂಬಂಧ ಮುಸ್ಲಿಂ ಸಮುದಾಯದವರ ವಿರುದ್ಧ ಎರಡು ಎಫ್.ಐ.ಆರ್. ದಾಖಲಿಸಿದ್ದರೆ, ಹಿಂದೂ ಸಮುದಾಯದ ವಿರುದ್ಧ ಐದು ಎಫ್.ಐ.ಆರ್.ಗಳನ್ನು ದಾಖಲಿಸಲಾಗಿದೆ ಎಂದು ಯತ್ನಾಳ್ ಆಕ್ಷೇಪಿಸಿದರು.
ಹಿಂದೂಗಳ ವಿರುದ್ಧ ಪಕ್ಷಪಾತಿಯಾಗಿ ಕ್ರಮ ತೆಗೆದುಕೊಳ್ಳುತ್ತಿರುವ ಅಧಿಕಾರಿಗಳು, ಮುಂದೆ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದೇ ಇಲ್ಲ ಎಂದುಕೊಂಡಿದ್ದಾರೆ. ಸರ್ಕಾರದ ಗತಿ ನೋಡಿದರೆ ಯಾವಾಗ ಬೇಕಾದರೂ ಚುನಾವಣೆ ನಡೆಯಬಹುದು. ಆಗ ಬಿಜೆಪಿ 140 ಸ್ಥಾನ ಪಡೆಯಲಿದೆ. ಅಧಿಕಾರಿಗಳ ಪರಿಸ್ಥಿತಿಯೂ ಬದಲಾಗಲಿದೆ ಎಂದರು.
ಮಾಜಿ ಸಂಸದ ಪ್ರತಾಪ ಸಿಂಹ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಹಿಂದೂಗಳ ಮೇಲೆ ದಾಖಲಿಸಿರುವ ಕೇಸ್ ಗಳನ್ನು ಹಿಂಪಡೆಯುತ್ತೇವೆ ಎಂದರು.
ದಾವಣಗೆರೆ ಗಾಂಧಿ ನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಿಂದೂ ಧ್ವಜವನ್ನು ಕೆಳಗೆ ಇಳಿಸಿ, ಮುಸ್ಲಿಂ ಧ್ವಜ ಹಾಕಲಾಗಿತ್ತು. ಹಿಂದೂ ಸಂಘಟನೆ ಕಾರ್ಯಕರ್ತನಿಗೆ ಅವಾಚ್ಯವಾಗಿ ನಿಂದಿಸಿ, ಪ್ರಚೋದನಾಕಾರಿಯಾಗಿ ವಿಡಿಯೋ ಮಾಡಲಾಗಿತ್ತು. ನಂತರ ಗಣೇಶ ಮೆರವಣಿಗೆಯನ್ನು ಗುರಿಯಾಗಿಟ್ಟುಕೊಂಡು ಕಲ್ಲು ತೂರಾಟ ನಡೆಸಲಾಯಿತು. ಇಷ್ಟಾದರೂ, ಹಿಂದೂಗಳನ್ನೇ ಗುರಿಯಾಗಿಟ್ಟುಕೊಂಡು ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಆರೋಪಿಸಿದರು.
ದಾವಣಗೆರೆ ಅಷ್ಟೇ ಅಲ್ಲದೇ, ರಾಜ್ಯದಲ್ಲಿ ವ್ಯವಸ್ಥಿತವಾಗಿಯೇ ಇಂತಹ ಘಟನೆಗಳು ನಡೆಯುತ್ತಿವೆ. ಗಣೇಶ ಮೆರವಣಿಗೆಯನ್ನೇ ಗುರಿ ಮಾಡಿ, ಕಲ್ಲು ತೂರಾಟ ಮಾಡಲಾಗಿದೆ ಎಂದವರು ಆರೋಪಿಸಿದರು.
ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೂ ಪಿಎಫ್ಐ ರೀತಿಯ ಭಯೋತ್ಪಾದಕ ಸಂಘಟನೆಯ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಲಾಗಿತ್ತು. ಇದರಿಂದಾಗಿ ಹಿಂದೂ ಕಾರ್ಯಕರ್ತರ ಹತ್ಯೆಗಳೂ ನಡೆದಿದ್ದವು. ಈಗಲೂ ಸಿದ್ದರಾಮಯ್ಯ ಅದನ್ನೇ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಆದರೆ, ಸಿದ್ದರಾಮಯ್ಯನವರ ತಾಲಿಬಾನ್ ಸರ್ಕಾರದ ವಿರುದ್ಧ ನಾವ್ಯಾರೂ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ರಾಜ್ಯವ್ಯಾಪಿ ತೀವ್ರ ಸ್ವರೂಪದ ಹೋರಾಟ ಮಾಡುತ್ತೇವೆ. ಹಿಂದೂ ಕಾರ್ಯಕರ್ತರ ಬೆನ್ನಿಗೆ ನಿಲ್ಲುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್, ಬಿಜೆಪಿ ಮುಖಂಡರಾದ ಗಾಯತ್ರಿ ಸಿದ್ದೇಶ್ವರ, ಹನಗವಾಡಿ ವೀರೇಶ್, ಯಶವಂತರಾವ್ ಜಾಧವ್, ದೇವರಮನಿ ಶಿವಕುಮಾರ್, ಪಾಲಿಕೆ ಸದಸ್ಯ ಶಿವಪ್ರಕಾಶ್, ಬಿ.ಎಸ್. ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ಯಾಲೆಸ್ತೇನ್ ಧ್ವಜ ಏಕೆ? ಅಲ್ಲಿಗೇ ಹೋಗಿ ಹೋರಾಡಿ
ಇಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳೆದು, ಇಲ್ಲಿನದ್ದೇ ಎಲ್ಲಾ ಸೌಲಭ್ಯ ಪಡೆದರೂ, ಕೆಲವರು ಪ್ಯಾಲೇಸ್ತೇನ್ ಧ್ವಜ ಪ್ರದರ್ಶನ ಮಾಡುತ್ತಿದ್ದಾರೆ. ಕೇವಲ ಪ್ಯಾಲೆಸ್ತೇನ್ ಧ್ವಜ ಪ್ರದರ್ಶಿಸುತ್ತಿರುವವರ ವಿರುದ್ಧವಷ್ಟೇ ಅಲ್ಲದೇ, ಧ್ವಜ ಹೊಲಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಒತ್ತಾಯಿಸಿದರು.
ಪ್ಯಾಲೆಸ್ತೇನ್ ಬಗ್ಗೆ ಅಷ್ಟು ಕಾಳಜಿ ಇದ್ದರೆ ಇಲ್ಲಿ ಧ್ವಜ ಪ್ರದರ್ಶನ ಮಾಡುವ ಬದಲು ಅಲ್ಲಿಗೇ ಹೋಗಿ ಹೋರಾಟ ನಡೆಸಿ. ಇಸ್ರೇಲ್ ಗುಂಡುಗಳು ಕಾದಿವೆ ಎಂದು ಕಿಡಿ ಕಾರಿದರು.
ಪಕ್ಷಕ್ಕೆ ದ್ರೋಹ ಮಾಡಿದವರಿಂದ ಪಾಠ ಕಲಿಯಬೇಕಿಲ್ಲ
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದವರಿಂದ ನಾನು ಪಾಠ ಕಲಿಯಬೇಕಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಇತ್ತೀಚೆಗೆ ಚಿತ್ರದುರ್ಗದಲ್ಲಿ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಯತ್ನಾಳ್ರಿಂದ ಕಲಿಯುವುದು ಏನೂ ಇಲ್ಲ ಎಂದಿದ್ದರು. ಅದಕ್ಕೆ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.
ನಾವು ಭಿನ್ನಮತೀಯ ಸಭೆ ನಡೆಸುವುದಿಲ್ಲ. ಡಿಸೆಂಬರ್ವರೆಗೆ ಕಾಯುತ್ತೇವೆ. ಆ ವೇಳೆಗೆ ವರಿಷ್ಠರು ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ ಎಂದು ಯತ್ನಾಳ್ ಹೇಳಿದರು.
ಆರೋಪಿಯ ವಂಶವೃಕ್ಷ ಏಕೆ ಬೇಕು?
ಪೊಲೀಸರು ಗಲಭೆ ಪ್ರಕರಣದಲ್ಲಿ ಆರೋಪಿಯಾಗಿರುವ ಹಿಂದೂ ಕಾರ್ಯಕರ್ತ ಸತೀಶ್ ಪೂಜಾರಿ ವಂಶವೃಕ್ಷವನ್ನು ಪೊಲೀಸರು ಕೇಳಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪಿಸಿದರು.
ವಂಶಾವಳಿಯನ್ನು ಪೊಲೀಸರು ಯಾಕೆ ಕೇಳಿದ್ದೀರಿ? ಪೊಲೀಸ್ ಇಲಾಖೆಗೆ ಸತೀಶ ಪೂಜಾರಿ ವಂಶವೃಕ್ಷ ಯಾಕೆ ಬೇಕು? ಹತ್ಯೆ ರೀತಿಯ ಗಂಭೀರ ಪ್ರಕರಣಗಳಲ್ಲೇ ವಂಶವೃಕ್ಷ ಕೇಳುವುದಿಲ್ಲ. ಹೀಗಿರುವಾಗ ಹಿಂದೂ ಕಾರ್ಯಕರ್ತನಿಂದ ಮಾತ್ರ ವಂಶವೃಕ್ಷ ಕೇಳಲಾಗುತ್ತಿದೆ ಎಂದು ಟೀಕಿಸಿದರು.
ಕೆಲವರ ಬಳಿ ಭ್ರಷ್ಟಾಚಾರ ಮಾಡಿದ ಹಣ ಇರಬಹುದು. ಈ ಹಿಂದೆ ಕೆಲವರ ಮನೆಯಲ್ಲಿ ಹಣ ಎಣಿಕೆ ಯಂತ್ರ ದೊರೆತಿತ್ತು. ಅವರು ಮುಖ್ಯಮಂತ್ರಿಯಾಗಲು ಬಯಸಬಹುದು. ಇಂತಹವರು ಕೇವಲ ಬಿಜೆಪಿಯಲ್ಲಷ್ಟೇ ಅಲ್ಲ, ಕಾಂಗ್ರೆಸ್ನಲ್ಲೂ ಇದ್ದಾರೆ ಎಂದು ಯತ್ನಾಳ್ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದಿದ್ದವರೇ ಶಾಸಕರ ಖರೀದಿಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲೇ ಕುದುರೆ ವ್ಯಾಪಾರ ನಡೆಯುತ್ತಿದೆ. ಸಿದ್ದ ರಾಮಯ್ಯನವರ ಮುಡಾ ಹಗರಣದ ವಿಷಯ ಬಯಲಿಗೆ ಎಳೆದಿದ್ದು ಕಾಂಗ್ರೆಸ್ನವರೇ. ಈ ಕುರಿತ ಕಡತಗಳನ್ನು ಅವರೇ ತಂದುಕೊಟ್ಟಿದ್ದಾರೆ. ಪಾದಯಾತ್ರೆಯನ್ನೂ ಅವರೇ ಮಾಡಿಸಿದ್ದಾರೆ ಎಂದೂ ಬಿಜೆಪಿ ಶಾಸಕ ಹೇಳಿದರು. ಈಗಿನ ಸರ್ಕಾರ ವಿಸರ್ಜನೆ ಯಾಗಲಿ. ಮರು ಚುನಾವಣೆಯಾದಲ್ಲಿ ಬಿಜೆಪಿಗೆ ಪೂರ್ಣ ಬಹುಮತದಿಂದ ಅಧಿಕಾರ ಸಿಗಲಿದೆ. ಗೊಂದಲದ ವ್ಯವಸ್ಥೆಯಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವುದು ಬೇಡ ಎಂದರು.
ನಾವು ಭಿನ್ನಮತೀಯರಲ್ಲ. ಪಕ್ಷದ ನಿಷ್ಠಾವಂತರು. ಪಕ್ಷದ ಬೆಳವಣಿಗೆಗಾಗಿ ಹೋರಾಟ ನಡೆಸುತ್ತಿದ್ದೇವೆ. ನಾವು ಬೆಳಗಾವಿಯಲ್ಲಿ ಸಭೆ ನಡೆಸಿದ ನಂತರ ಸಂಘ ಪರಿವಾರದ ಪ್ರಮುಖರು ನಮ್ಮ ಜೊತೆ ಮಾತನಾಡಿದ್ದಾರೆ. ನಮ್ಮ ನಿಲುವು ಪರಿಗಣಿಸಿದ್ದಾರೆ ಎಂದರು.