ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಜಿ. ಶಿವಲಿಂಗಪ್ಪ
ದಾವಣಗೆರೆ, ಸೆ. 29- ವಿಶ್ವ ಹೃದಯ ದಿನದ ನಡಿಗೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸುವುದು ಬೇಡ. ಇದು ನಿತ್ಯ ನಿರಂತರವಾಗಿರಲಿ ಎಂದು ನಟಿ ದಾವಣಗೆರೆಯ ಅಧಿತಿ ಪ್ರಭುದೇವ್ ಹೇಳಿದರು.
ನಗರದ ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪವಿರುವ ಎಸ್ಎಸ್ಐಎಂಎಸ್ ಅಂಡ್ ರಿಸರ್ಚ್ ಸೆಂಟರ್ ಆವರಣದಲ್ಲಿ ಎಸ್.ಎಸ್. ನಾರಾಯಣ ಹೃದಯಾಲಯದಿಂದ `ಯೂಸ್ ಆಕ್ಷನ್ ಫಾರ್ ಹಾರ್ಟ್’ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಿದ್ದ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ, ನೃತ್ಯ, ಕಲೆ ಯಾವುದೇ ಇರಲಿ ಮನಸ್ಸನ್ನು ಉಲ್ಲಾಸಭರಿತವಾಗಿ ಇಟ್ಟುಕೊಳ್ಳಲು ಏನೇನು ಸಾಧ್ಯತೆ ಇದೆಯೋ ಅದೆಲ್ಲವನ್ನೂ ಕಲಿಸಿ ಸಂತೋಷದಿಂದ ಇರಿ ಎಂದು ಸಲಹೆ ನೀಡಿದರು.
ಸದೃಢ ದೇಹಕ್ಕೋಸ್ಕರ ಸದೃಢ ಹೃದಯ ಹೊಂದಿರಬೇಕು. ಹೃದಯ ಚನ್ನಾಗಿರಲು ನಮ್ಮ ಮನಸ್ಸು ಸಹ ಸದೃಢವಾಗಿರಬೇಕು. ನಮ್ಮ ದೇಹದ, ನಮ್ಮ ಆಲೋಚನೆಗಳ ಬಗ್ಗೆ ನಿಯಂತ್ರಣ ಸಾಧಿಸಬೇಕು. ಆಗ ಮಾತ್ರ ನಮ್ಮ ದೇಹ, ಮನಸ್ಸು ಹಾಗೂ ಜೀವನ ಹತೋಟಿಯಲ್ಲಿರುತ್ತದೆ ಎಂದರು.
ವಿದ್ಯಾರ್ಥಿಗಳು, ಅಧಿಕಾರಿಗಳು, ವೈದ್ಯರು, ಕಾರ್ಮಿಕರದು ಒತ್ತಡದ ಬದುಕು ಎಂಬುದು ಸಾಮಾನ್ಯ ಮಾತು. ನಮ್ಮ ಜೀವನದಲ್ಲಿ ಬಲವಾದ ನಂಬಿಕೆ ಇಟ್ಟುಕೊಂಡರೆ ನಮ್ಮ ಜೀವನ ಸುಂದರವಾಗಿರುತ್ತದೆ. ಜೀವನದಲ್ಲಿ ಯಾವುದೇ ಕೆಟ್ಟ ಆಲೋಚನೆ, ದುರಭ್ಯಾಸ, ಆಹಾರ ಪದ್ಧತಿ ಬೇಡ. ಮನಸ್ಸು ಒಳ್ಳೆಯತನವನ್ನು ತುಂಬಿಕೊಂಡರೆ ಹೃದಯ ಕೂಡ ಪವಿತ್ರವಾಗಿದ್ದು, ಆರೋಗ್ಯ ಸಹ ಚನ್ನಾಗಿರುತ್ತದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ವೈದ್ಯರೆಂದರೆ ದೇವರೆಂಬ ಭಾವನೆ ಜನ ಸಾಮಾನ್ಯರಲ್ಲಿದೆ. ಅದರಂತೆ ಹೃದಯ ಮನುಷ್ಯನ ಪ್ರಮುಖ ಭಾಗವಾಗಿದೆ. ಹೃದಯಾಘಾತವಾಗದಂತೆ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕೆಂದು ಜಾಗೃತಿ ಮೂಡಿಸುವ ಉದ್ದೇಶದಿಂದ ವಾಕಥಾನ್ ಹಮ್ಮಿಕೊಳ್ಳಲಾಗಿತ್ತು ಎಂದರು.
ಜನರು ನಿತ್ಯ ಒತ್ತಡದ ಜೀವನ ನಡೆಸುತ್ತಿದ್ದು, ಇದರಿಂದ ಹೃದಯಾಘಾತವಾಗುವ ಸಂಭವವಿದ್ದು, ಪೌಷ್ಟಿಕಯುಕ್ತ ಆಹಾರ ಸೇವನೆ, ನಿತ್ಯ ಯೋಗ, ಧ್ಯಾನ ಮಾಡುವುದರಿಂದ ದೈಹಿಕ ವ್ಯಾಯಾಮದಿಂದ ಇಂತಹ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಬಹುದು ಎಂದು ಹೇಳಿದರು.
ಮನುಷ್ಯನಿಗೆ ಜೀವನ ಶೈಲಿ ಮುಖ್ಯ. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನ ಮಕ್ಕಳಿಗೂ ಹೃದಯಾಘಾತ ಆಗುವುದು ಸಾಮಾನ್ಯವಾಗಿದೆ. ಈ ಬಗ್ಗೆ ಅರಿವು ಅಗತ್ಯ ಎಂದು ತಿಳಿಸಿದರು.
ಹಿರಿಯ ವೈದ್ಯ ಡಾ. ಜಿ. ಶಿವಲಿಂಗಪ್ಪ ಮಾತನಾಡಿ, ಜೀವನ ಶೈಲಿ ಬದಲಾವಣೆ ಮಾಡಿಕೊಂಡರೆ ಹೃದಯಾಘಾತ, ಕ್ಯಾನ್ಸರ್ ಮುಂತಾದ ಕಾಯಿಲೆಗಳನ್ನು ತಡೆಗಟ್ಟಲು ಸಾಧ್ಯವಿದೆ. ಹಣ್ಣು, ತರಕಾರಿಗಳನ್ನು ಹೆಚ್ಚು ತಿನ್ನಬೇಕು ಎಂದು ಸಲಹೆ ನೀಡಿದರು.
ರೋಗಿಗಳು ಎಲ್ಲಿಯೇ ಇರಲಿ ಅವರು ಇರುವ ಸ್ಥಳಕ್ಕೆ ತೆರಳಿ ಇಸಿಜಿ ಮಾಡಿ ವ್ಯವಸ್ಥಿತವಾಗಿ ಆರೋಗ್ಯ ವಿಚಾರಿಸಲು ಸಾಧ್ಯ. ಇದರಿಂದ ತಕ್ಷಣದ ಚಿಕಿತ್ಸೆ ನೀಡುವುದರಿಂದ ಶೇ.99 ರಷ್ಟು ರೋಗಿಗಳ ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಎಸ್.ಎಸ್. ನಾರಾಯಣ ಹೃದಯಾಲಯದ ವ್ಯವಸ್ಥಾಪಕ ಸುನೀಲ್ ಭಂಡಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಾ ತಜ್ಞ ಡಾ. ನಾಗರಾಜ್, ಡಾ. ಮಲ್ಲೇಶ್, ಡಾ. ಧನಂಜಯ, ಪ್ರಶಾಂತ್ ಸೇರಿದಂತೆ ವಿವಿಧ ವಿಭಾಗಗಳ ವೈದ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರೆಡ್ಕ್ರಾಸ್, ಲೈಫ್ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹ, ಜಿಲ್ಲಾ ಯೋಗ ಒಕ್ಕೂಟ, ಲಯನ್ಸ್ ಕ್ಲಬ್, ರೋಟರಿ ಸಂಸ್ಥೆ, ದಾಣಗೆರೆ ತಾಲ್ಲೂಕು ಫೋಟೋಗ್ರಾಫರ್ಸ್ ಅಂಡ್ ವಿಡಿಯೋ ಗ್ರಾಫರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.