ಚಮನ್‌ಸಾಬ್ ಪಾಲಿಕೆ ಮೇಯರ್

ಚಮನ್‌ಸಾಬ್ ಪಾಲಿಕೆ ಮೇಯರ್

ಉಪ ಮೇಯರ್ ಆಗಿ ಸೋಗಿ ಶಾಂತಕುಮಾರ್ ಆಯ್ಕೆ

ದಾವಣಗೆರೆ, ಸೆ. 27- ಮಹಾನಗರ ಪಾಲಿಕೆ ಮೇಯರ್ ಆಗಿ ಕೆ. ಚಮನ್ ಸಾಬ್ ಹಾಗೂ ಉಪ ಮೇಯರ್‌ ಆಗಿ ಸೋಗಿ ಶಾಂತಕುಮಾರ್ ಆಯ್ಕೆಯಾದರು.

ಶುಕ್ರವಾರ ನಡೆದ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ 14  ನೇ ವಾರ್ಡ್‌ನ ಕಾಂಗ್ರೆಸ್‌ನ ಕೆ. ಚಮನ್ ಸಾಬ್ 30 ಮತಗಳು, ಬಿಜೆಪಿಯ ಕೆ. ಪ್ರಸನ್ನಕುಮಾರ್ 17 ಮತಗಳನ್ನು ಹಾಗೂ ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ 18 ನೇ ವಾರ್ಡ್‌ನ ಕಾಂಗ್ರೆಸ್‌ನ ಸೋಗಿ ಶಾಂತಕುಮಾರ್ 30 ಮತಗಳು ಮತ್ತು ಬಿಜೆಪಿಯ ಎಸ್.ಟಿ. ವೀರೇಶ್ 17 ಮತಗಳನ್ನು ಪಡೆದುಕೊಂಡರು. ಕೆ. ಚಮನ್ ಸಾಬ್ ಮತ್ತು ಸೋಗಿ ಶಾಂತಕುಮಾರ್ ತಲಾ 13 ಮತಗಳ ಅಂತರದಿಂದ ಜಯ ಸಾಧಿಸಿದರು.

ಮೇಯರ್ ಸ್ಥಾನ ಬಿಸಿಎ ಗೆ ಹಾಗೂ ಉಪ ಮೇಯರ್ ಸ್ಥಾನ ಬಿಸಿಬಿಗೆ ಮೀಸಲಾಗಿತ್ತು. ಮಹಾನಗರ ಪಾಲಿಕೆಗೆ ಬಿಜೆಪಿಯಿಂದ ಆಯ್ಕೆಯಾಗಿದ್ದ ಸೋಗಿ ಶಾಂತಕುಮಾರ್ ಕಾಂಗ್ರೆಸ್ ಸೇರಿದ ನಂತರ ಬಿಜೆಪಿ ವಿರುದ್ಧ ಗೆಲುವು ಸಾಧಿಸಿ ಉಪ ಮೇಯರ್ ಆಗಿರುವುದು ವಿಶೇಷವಾಗಿದೆ. 14 ನೇ ವಾರ್ಡ್‌ನಿಂದ ಸತತವಾಗಿ ಆಯ್ಕೆಯಾಗುತ್ತ ಬಂದಿರುವ ಚಮನ್‌ಸಾಬ್ ಅವರು ಮೇಯರ್ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದರು.

45 ಸದಸ್ಯ ಬಲ ಹೊಂದಿರುವ ಮಹಾನಗರ ಪಾಲಿಕೆಯಲ್ಲಿ 22 ಬಿಜೆಪಿ, 19 ಕಾಂಗ್ರೆಸ್,ಓರ್ವ ಜೆಡಿಎಸ್ ಹಾಗೂ 3 ಪಕ್ಷೇತರ ಸದಸ್ಯರಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನಾಲ್ವರು ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾದ ಕಾರಣ 18 ಸ್ಥಾನಗಳಿಗೆ ಬಿಜೆಪಿ ಬಲ ಕುಸಿದಿತ್ತು. ಈ ಪೈಕಿ ರಾಕೇಶ್ ಜಾಧವ್ ವಿದೇಶ ಪ್ರವಾಸದಲ್ಲಿರುವುದರಿಂದ ಬಿಜೆಪಿ ಪರ 17 ಸದಸ್ಯರು ಮತ ಹಾಕಿದರು.

ಮೃತಪಟ್ಟಿರುವ ಕಾಂಗ್ರೆಸ್ ಸದಸ್ಯನನ್ನು ಹೊರತುಪಡಿಸಿ, ಕಾಂಗ್ರೆಸ್‌ನ 18 , ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾದ ನಾಲ್ವರು ಹಾಗೂ ಓರ್ವ ಜೆಡಿಎಸ್‌ ಸದಸ್ಯೆ ಮತ್ತು ಇವರೊಂದಿಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಸೇರಿ 30 ಸದಸ್ಯರು ಕಾಂಗ್ರೆಸ್ ಪರವಾಗಿ ಮತ ಹಾಕಿದರು.

ಬೆಂಗಳೂರು ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

error: Content is protected !!