`ಶ್ರೀ ಜಯದೇವ ಲೀಲೆ’ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಸವಪ್ರಭು ಸ್ವಾಮೀಜಿ
ದಾವಣಗೆರೆ, ಸೆ. 26- ಕಡು ಬಡತನದಲ್ಲಿ ಜನಿಸಿದ ಜಯದೇವ ಜಗದ್ಗುರುಗಳು 1903 ರಲ್ಲಿ ಚಿತ್ರದುರ್ಗ ಬೃಹನ್ಮಠದ ಪೀಠಾಧ್ಯಕ್ಷರಾಗಿ ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸಿ, ಶಿಕ್ಷಣ ಕ್ರಾಂತಿ ಮಾಡುವ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯ ದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ವಿರಕ್ತ ಮಠದ ಡಾ. ಬಸವ ಪ್ರಭು ಸ್ವಾಮೀಜಿ ಹೇಳಿದರು.
ನಗರದ ಶಿವಯೋಗಾಶ್ರಮದ ಸಭಾಂಗಣದಲ್ಲಿ ಲಿಂ. ಶ್ರೀ ಜಗದ್ಗುರು ಜಯದೇವ ಮುರುಘ ರಾಜೇಂದ್ರ ಮಹಾಸ್ವಾಮಿಗಳವರ 68 ನೇ ಸ್ಮರಣೋತ್ಸವದ ಅಂಗವಾಗಿ ಏರ್ಪಡಿಸಿದ್ದ `ಶ್ರೀ ಜಯದೇವ ಲೀಲೆ’ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಜಗತ್ತಿನ ಕತ್ತಲೆ ಕಳೆಯಲು ಸೂರ್ಯ ಬರುವಂತೆ ಸ್ವಾತಂತ್ರ್ಯ ಪೂರ್ವದಲ್ಲಿ ಅಸಮಾನತೆ, ಅಸ್ಪೃಶ್ಯತೆ, ಅನಕ್ಷರತೆ, ಬಡತನ, ಹಸಿವು, ನಿರುದ್ಯೋಗ ಎಂಬ ಕತ್ತಲನ್ನು ನಿರ್ಮೂಲನೆ ಮಾಡಲು ಜ್ಞಾನ ಸೂರ್ಯರಾಗಿ ಬಂದವರು ಜಯದೇವ ಶ್ರೀಗಳು ಎಂದು ತಿಳಿಸಿದರು.
1906 ರಲ್ಲಿ ಮೊಟ್ಟ ಮೊದಲ ಬಾರಿಗೆ ದಾವಣಗೆರೆಯಲ್ಲಿ ಜಯದೇವ ಪ್ರಸಾದ ನಿಲಯ ಪ್ರಾರಂಭಿಸಲಾಯಿತು. ಹಾಗೆಯೇ ಚಿತ್ರದುರ್ಗ, ಬೆಂಗಳೂರು, ತುಮಕೂರು, ತಿಪಟೂರು, ಅರಸೀ ಕೆರೆ, ಧಾರವಾಡ, ಕೊಲ್ಲಾಪುರ, ಕಾಶಿ, ನಿಪ್ಪಾಣಿ, ಬ್ಯಾಡಗಿ ಮತ್ತಿತರೆ ಸ್ಥಳಗಳಲ್ಲಿ ಉಚಿತ ಪ್ರಸಾದ ನಿಲಯಗಳನ್ನು ಆರಂಭಿಸಿದರು. ಇವುಗಳು ಇದೀಗ ಶತಮಾನೋತ್ಸವವನ್ನು ಆಚರಿಸಿಕೊಂಡಿರುವುದು ವಿಶೇಷ ಎಂದರು.
ಕಳೆದ 120 ವರ್ಷಗಳಿಂದ ಇಂತಹ ಸತ್ಕಾ ರ್ಯಗಳು ನಡೆದಿದ್ದರಿಂದ ದೇಶದಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಾಗಲು ಜಯದೇವ ಜಗದ್ಗುರುಗಳು ಕಾರಣಕರ್ತರಾಗಿದ್ದಾರೆ. ಖ್ಯಾತ ಕವಿ ಜಿ.ಎಸ್. ಶಿವರುದ್ರಪ್ಪ, ಸಂಶೋಧಕ ಎಂ. ಚಿದಾನಂದ ಮೂರ್ತಿ, ಹಂಗಾಮಿ ರಾಷ್ಟ್ರಪತಿ ಯಾಗಿದ್ದ ಬಿ.ಡಿ. ಜತ್ತಿ, ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ, ಕವಿ ಚನ್ನವೀರ ಕಣವಿ, ಮಾಜಿ ಸಚಿವರಾದ ದಿ. ಹೆಚ್. ಶಿವಪ್ಪ, ಕೊಂಡಜ್ಜಿ ಬಸಪ್ಪ ಮುಂತಾದವರು ಜಯದೇವ ಪ್ರಸಾದ ನಿಲಯದಲ್ಲಿ ಓದಿ ನಾಡಿಗೆ ಬೆಳಕಾದವರು ಎಂದು ಹೇಳಿದರು. ಜಯದೇವ ಶ್ರೀಗಳು ಕೇವಲ ಲಿಂಗಾಯತ ಸಮುದಾಯಕ್ಕೆ ಸಹಾಯ ಹಸ್ತ ಚಾಚದೇ ಮುಸ್ಲಿಂ, ಹಿಂದುಳಿದ ಸಮಾಜದವರಿಗೆ ಧನ ಸಹಾಯ ಮಾಡಿ ಅವರನ್ನು ಉದ್ಧರಿಸುವ ಕೆಲಸ ಮಾಡಿದ್ದಾರೆ ಎಂದರು.
ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಅರಮನೆಗೆ ಜಯದೇವ ಜಗದ್ಗುರುಗಳನ್ನು ಕರೆಯಿಸಿಕೊಂಡು ಗೌರವಿಸು ತ್ತಾರೆ. 1940 ರಲ್ಲಿ 45 ಲಕ್ಷ ಬಜೆಟ್ನಲ್ಲಿ ಜಯದೇವ ಜಗದ್ಗುರುಗಳು 18 ಲಕ್ಷ ರೂ.ಗಳನ್ನು ಶಿಕ್ಷಣ ಸಂಸ್ಥೆಗಳಿಗೆ ವಿನಿಯೋಗ ಮಾಡಿ, ಮೈಸೂರು ಸಂಸ್ಥಾನಕ್ಕೆ ಕೀರ್ತಿ ತಂದಿದ್ದಾರೆ. ಅವರ ಸತ್ಕಾರ್ಯ ಇಂದಿಗೂ ಜೀವಂತವಾಗಿವೆ. ಉಸಿರು ಹೋದರೂ ಹೆಸರು ಉಳಿಯುವಂತಹ ಕೆಲಸವನ್ನು ಜಯದೇವ ಶ್ರೀಗಳು ಮಾಡಿದ್ದಾರೆಂದು ಹೇಳಿದರು.
ಜೀವನದಲ್ಲಿ ರೂಪ, ರೂಪಾಯಿ ಶಾಶ್ವತ ಎಂದು ತಿಳಿದಿದ್ದೇವೆ. ಆದರೆ ರೂಪಾಯಿ, ರೂಪಕ್ಕಿಂತ ನಾವು ಮಾಡುವ ಸತ್ಕಾರ್ಯಗಳು ಮಾತ್ರ ಸದಾ ಕಾಲ ಶಾಶ್ವತವಾಗಿರುತ್ತವೆ ಎಂದರು.
ಸಂತೇಬೆನ್ನೂರಿನ ಮಹಾಂತೇಶ ಶಾಸ್ತ್ರಿ `ಶ್ರೀ ಜಯದೇವ ಲೀಲೆ’ ಪ್ರವಚನ ಕಾರ್ಯಕ್ರಮ ನಡೆಸಿಕೊಟ್ಟರು. ಬಸವ ಕಲಾ ಲೋಕದ ಕಲಾವಿದರು ವಚನ ಸಂಗೀತ ನೆರವೇರಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಪಾಲಿಕೆ ಸದಸ್ಯ ಎ. ನಾಗರಾಜ್, ಶಿವಯೋಗಾಶ್ರಮ ಟ್ರಸ್ಟ್ ನ ಪದಾಧಿಕಾರಿಗಳಾದ ಎಂ. ಜಯಕುಮಾರ್, ಅಂದನೂರು ಮುಪ್ಪಣ್ಣ, ಕಣ್ವಕುಪ್ಪಿ ಮುರುಗೇಶಪ್ಪ, ಎಸ್.ಓಂಕಾರಪ್ಪ, ಲಂಬಿ ಮುರುಗೇಶಪ್ಪ, ಟಿ. ಮಹಾಲಿಂಗೇಶ್ವರ, ಕುಂಟೋಜಿ ಚನ್ನಪ್ಪ, ವಿಭೂತಿ ಬಸವಾನಂದರು, ಶಿವಕುಮಾರ್ ಮತ್ತಿತರರು ಇದ್ದರು.