ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ

ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ

ಹರಿಹರ ನಗರಸಭೆ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ  ಶಾಸಕ ಬಿ.ಪಿ ಹರೀಶ್

ಹರಿಹರ, ಸೆ.23- ನಗರಸಭೆಯಲ್ಲಿ ಪೌರ ಕಾರ್ಮಿಕರ ಕೊರತೆ ಇದ್ದು,  ಪೌರ ಕಾರ್ಮಿಕರ ಹಲವಾರು ಸಮಸ್ಯೆಗಳೂ ಇವೆ. ಅವುಗಳನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ   ಶಾಸಕ ಬಿ.ಪಿ. ಹರೀಶ್ ಭರವಸೆ ನೀಡಿದರು.

ನಗರದ ಗುರುಭವನದ ಸಭಾಂಗಣದಲ್ಲಿ ಇಂದು ನಡೆದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಗರದ ಸ್ವಚ್ಚತೆ ಸೇರಿದಂತೆ, ಸಾರ್ವ ಜನಿಕರಿಗೆ ಅತಿ ಉಪಯುಕ್ತವಾಗುವಂತಹ ಅನೇಕ ಕೆಲಸ, ಕಾರ್ಯಗಳನ್ನು ಪೌರ ಕಾರ್ಮಿಕರು ಮಾಡುತ್ತಾರೆ. ಊರಿನಲ್ಲಿ ಯಾವುದೇ ಹಬ್ಬ ಇದ್ದರೂ ಆ ಸಮಯದಲ್ಲಿ ತಾವುಗಳು ಮಾತ್ರ ಕುಟುಂಬದ ಸದಸ್ಯರ ಜೊತೆಗೆ ಹಬ್ಬ  ಆಚರಿಸದೇ,   ಸಾರ್ವಜನಿಕರ  ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಪೌರ ಕಾರ್ಮಿಕರ ಕಾರ್ಯ ಶ್ಲ್ಯಾಘನೀಯವಾದುದು ಎಂದರು.

ನಗರಸಭೆ ಅಧ್ಯಕ್ಷರಾದ ಕವಿತಾ ಮಾರುತಿ ಬೇಡರ್ ಮಾತನಾಡಿ, ಸರ್ಕಾರವು ಪೌರ ಕಾರ್ಮಿಕರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿರುತ್ತದೆ. ಅವುಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ನಗರಸಭೆ ಉಪಾಧ್ಯಕ್ಷ ಜಂಬಣ್ಣ ಗುತ್ತೂರು ಮಾತನಾಡಿ, ಪೌರ ಕಾರ್ಮಿಕರು ನಗರದ ಜನತೆಯನ್ನು ರಕ್ಷಣೆ ಮಾಡುವಂತೆ ಜವಾಬ್ದಾರಿ ಸ್ಥಾನವನ್ನು ಹೊಂದಿರುವ ಮರಿ ಸೈನ್ಯ ಇದ್ದಂತೆ, ಸಾರ್ವಜನಿಕರು ಸಹ ಎಲ್ಲೆಂದರಲ್ಲಿ ಕಸವನ್ನು ಹಾಕುವಾಗ ಅದನ್ನು ತಡೆಯವಂತಹ ಹಕ್ಕು ಇರುತ್ತದೆ  ಎಂದು ಹೇಳಿದರು.

ಸದಸ್ಯ ಹನುಮಂತಪ್ಪ ಮಾತನಾಡಿ,   ಪೌರ ಕಾರ್ಮಿಕರಿಗೆ ನಿವೇಶನ ಕೊಡಿಸಲು ಶಾಸಕರು ಮುಂದಾಗಬೇಕಿದೆ ಎಂದು ಒತ್ತಾಾಯಿಸಿದರು.

ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ,  ಪೌರ ಕಾರ್ಮಿಕರ ಹಿತದೃಷ್ಟಿ ಯಿಂದ, ಆದಷ್ಟು ಬೇಗ ವಿಶ್ರಾಂತಿ ಕೊಠಡಿಯ ಉದ್ಘಾಟನೆ ಮಾಡಲಾಗುತ್ತದೆ ಮತ್ತು ಸುರಕ್ಷಿತ ಪರಿಕರಗಳನ್ನು ನೀಡಲಾಗುತ್ತದೆ. ಅವುಗಳನ್ನು ಕಡ್ಡಾಯವಾಗಿ ಬಳಸಬೇಕು. ಜೊತೆಗೆ ವಿಶೇಷ  ಭತ್ಯೆ 7 ಸಾವಿರ ರೂ.ಗಳ ಚೆಕ್ ನೀಡಲಾಗುತ್ತಿದ್ದು ಇದನ್ನು   ಸದ್ಬಳಕೆ ಮಾಡಿಕೊಳ್ಳಬೇಕು.  4 ಎಕರೆ ಜಮೀನು ಮಾಲೀಕರು ನ್ಯಾಯಾಲಯದ ಮೊರೆ  ಹೋಗಿದ್ದು,  ಪ್ರಕರಣ ಇತ್ಯರ್ಥ ಆದ ನಂತರ ನಿವೇಶನ  ವಿಚಾರ ಮಾಡಲಾಗುತ್ತದೆ ಎಂದು ಹೇಳಿದರು. 

ಆರೋಗ್ಯ ಇಲಾಖೆಯ ಅಧಿಕಾರಿಗಳಾದ ರವಿಪ್ರಕಾಶ್, ಸಂತೋಷ ನಾಯ್ಕ್,  ಪೌರ ಕಾರ್ಮಿಕರ ಸಂಘದ ಗೌರವ ಅಧ್ಯಕ್ಷ ಸದಾಶಿವ, ಅಧ್ಯಕ್ಷ ಹುಚ್ಚೆಂಗಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್. ಪರಸಪ್ಪ, ಖಜಾಂಚಿ ರವಿಕುಮಾರ್, ಉಪಾಧ್ಯಕ್ಷ ಡಿ.ಹನುಮಂತಪ್ಪ, ಜಂಟಿ ಕಾರ್ಯದರ್ಶಿ ದಯಾನಂದ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ನಾಗರತ್ನ ಪ್ರಾರ್ಥಿಸಿದರು. ಮ್ಯಾನೇಜರ್ ನಿರಂಜನಿ ಪ್ರಾಸ್ತಾವಿಕ ಮಾತನಾಡಿದರು.    ಜಿ.ಕೆ.ಪ್ರವೀಣ್ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಬಿ.ಬಿ ರೇವಣನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!