ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸಲಹೆ
ದಾವಣಗೆರೆ, ಸೆ. 23- ದುಶ್ಚಟಗಳಿಂದ ದೂರವಿದ್ದು, ಆರೋಗ್ಯದತ್ತ ಹೆಚ್ಚು ಗಮನಹರಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಅವರಿಗೆ ಉನ್ನತ ಸ್ಥಾನಮಾನಗಳನ್ನು ಲಭಿಸುವಂತೆ ಮಾಡಿ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಪೌರ ಕಾರ್ಮಿಕರಿಗೆ ಕರೆ ನೀಡಿದರು.
ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೌರ ಕಾರ್ಮಿಕರಿಗೆ ಅನೇಕ ನ್ಯೂನತೆ ಮತ್ತು ಸಮಸ್ಯೆಗಳಿವೆ. ವಿವಿಧ ಬೇಡಿಕೆಗಳನ್ನು ಸಹ ಹಂತ ಹಂತವಾಗಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಪೌರ ಕಾರ್ಮಿಕರ ಮಕ್ಕಳಿಗೆ ಸರ್ಕಾರಿ ವಸತಿಯುತ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ನೇರ ಪ್ರವೇಶ ಕಲ್ಪಿಸಲಾಗುವುದು. ಪೌರ ಕಾರ್ಮಿಕರು ತಾವು ದುಡಿದ ದುಡಿಮೆ ಹಣದಲ್ಲಿ ಒಂದಿಷ್ಟು ಹಣವನ್ನು ಉಳಿತಾಯ ಮಾಡಿ ಸದ್ಬಳಕೆ ಮಾಡಿಕೊಳ್ಳುವಂತೆ ಕಿವಿಮಾತು ಹೇಳಿದರು.
ಮಹಾನಗರ ಪಾಲಿಕೆ ಸದಸ್ಯ ಎ. ನಾಗರಾಜ್ ಮಾತನಾಡಿ, ನಿರಂತರ ಹೋರಾಟದ ಫಲವಾಗಿ ಪೌರ ಕಾರ್ಮಿಕರಿಗೆ ವಸತಿ ಗೃಹಗಳು ದೊರೆತಿವೆ. ಫಲಾನುಭವಿಗಳ ಆಯ್ಕೆ ವಿಳಂಬದ ಹಿನ್ನೆಲೆಯಲ್ಲಿ ನಿವೃತ್ತಿಯಾಗಿರುವ ಪೌರ ಕಾರ್ಮಿಕರಿಗೆ ವಸತಿ ಗೃಹಗಳು ಲಭ್ಯವಾಗಿಲ್ಲ. ಪೌರಾಯುಕ್ತರು ಇವರಿಗೂ ವಸತಿ ಸೌಲಭ್ಯ ಕಲ್ಪಿಸಿಕೊಡುವತ್ತ ಚಿತ್ತ ಹರಿಸಬೇಕೆಂದು ಒತ್ತಾಯಿಸಿದರು.
ಪೌರ ಕಾರ್ಮಿಕರ ಅವಿರತ ಶ್ರಮವೇ ನಗರ ಸ್ವಚ್ಛತೆಗೆ ಕಾರಣವಾಗಿದೆ. ಪೌರ ಕಾರ್ಮಿಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕ ಮಾತನಾಡಿ, ಪೌರ ಕಾರ್ಮಿಕರು ಸೈನಿಕರಿದ್ದಂತೆ. ಬಿಸಿಲು, ಮಳೆ, ಗಾಳಿ, ಚಳಿ ಯಾವುದನ್ನೂ ಲೆಕ್ಕಿಸದೇ ಮಾಡುತ್ತಿರುವ ಕಾಯಕದಿಂದಲೇ ನಾಗರಿಕರು ಆರೋಗ್ಯದಿಂದ ಇರಲು ಸಾಧ್ಯವಾಗಿದೆ ಎಂದರು.
ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಅವರ ಖಾತೆಗೆ ತಲಾ ಎರಡು ಸಾವಿರ ರೂ.ಗಳನ್ನು ಜಮೆ ಮಾಡಲಾಗಿದೆ. 388 ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ 250 ಪೌರ ಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪೌರ ಕಾರ್ಮಿಕರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಆಯುಕ್ತರು, ಪೌರ ಕಾರ್ಮಿಕರ ಮಕ್ಕಳಿಗೆ ಆರೋಗ್ಯ ವಿಮೆ, ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದೆ. ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಬೆಂಬಲಕ್ಕೆ ಸದಾ ಇರುತ್ತದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಉಪ ಮಹಾಪೌರರಾದ ಯಶೋಧ ಯಗ್ಗಪ್ಪ, ಸದಸ್ಯರಾದ ಕೆ.ಪ್ರಸನ್ನಕುಮಾರ್, ಗಡಿಗುಡಾಳ್ ಮಂಜುನಾಥ್, ವೀಣಾ ನಂಜಪ್ಪ, ಆಶಾ ಉಮೇಶ್, ಸುಧಾ ಇಟ್ಟಿಗುಡಿ ಮಂಜುನಾಥ್, ಮೀನಾಕ್ಷಿ ಜಗದೀಶ್, ಎಲ್.ಡಿ. ಗೋಣೆಪ್ಪ, ಎಲ್.ಎಂ.ಹೆಚ್. ಸಾಗರ್, ಪೌರಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಎಲ್.ಎಂ. ಹನುಮಂತಪ್ಪ, ಶಾಹೀದಾ ಬಾನು, ಎನ್. ನೀಲಗಿರಿಯಪ್ಪ, ಪೌರ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜ್ ಸೇರಿದಂತೆ ಅನೇಕರಿದ್ದರು.