ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ನಾಲ್ಕು ಎಫ್.ಐ.ಆರ್., 30 ಜನರ ಬಂಧನ
ದಾವಣಗೆರೆ, ಸೆ. 20 – ನಗರದ ಅರಳೀಮರ ವೃತ್ತದ ಬಳಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಗೆ ಸಂಬಂಧಿಸಿದಂತೆ ನಾಲ್ಕು ಎಫ್.ಐ.ಆರ್.ಗಳನ್ನು ದಾಖಲಿಸಿದ್ದು, 30 ಜನರನ್ನು ಬಂಧಿಸಲಾಗಿದೆ.
ಗುರುವಾರ ಸಂಜೆ 6.40ರ ವೇಳೆ ನಡೆದ ಕಲ್ಲು ತೂರಾಟದ ಘಟನೆಯ ನಂತರ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಆದರೆ, ಶುಕ್ರವಾರ ನಗರದಲ್ಲಿ ಪರಿಸ್ಥಿತಿ ಶಾಂತಿಯುತವಾಗಿತ್ತು.
ಘಟನೆ ಹಿನ್ನೆಲೆಯಲ್ಲಿ ಎನ್.ಆರ್. ರಸ್ತೆಯ ಸುತ್ತಲಿನ ಕೆಲ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಉಳಿದಂತೆ ನಗರದಲ್ಲಿ ಪರಿಸ್ಥಿತಿ ಶಾಂತವಾಗಿತ್ತು.
ನಗರದ ಅರಳೀಮರ ವೃತ್ತ ಹಾಗೂ ವೆಂಕಟೇಶ್ವರ ವೃತ್ತದ ಬಳಿ ಗುರುವಾರ ರಾತ್ರಿ ಗಣೇಶ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ನಗರದಲ್ಲಿ ಪರಿಸ್ಥಿತಿ ಎಂದಿನಂತೆ ಇತ್ತು. ಹೋಟೆಲ್ ಹಾಗೂ ಇನ್ನಿತರೆ ಎಲ್ಲ ವಾಣಿಜ್ಯ ಮಳಿಗೆಗಳು ತೆರೆದಿದ್ದವು. ಮಸೀದಿ, ದೇವಸ್ಥಾನಗಳಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು. ಹಾವೇರಿ, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ ಹೆಚ್ಚುವರಿಯಾಗಿ ಸಾವಿರಕ್ಕೂ ಅಧಿಕ ಪೊಲೀಸರನ್ನು ಕರೆಸಿಕೊಳ್ಳಲಾಗಿತ್ತು.
ಈ ಘಟನೆಯ ಬಗ್ಗೆ ಪೊಲೀಸರು ಸ್ವಯಂ ಪ್ರೇರಿತವಾಗಿ ಎರಡು ಹಾಗೂ ಸಾರ್ವಜನಿಕರಿಂದ ಎರಡು ಎಫ್.ಐ.ಆರ್.ಗಳನ್ನು ದಾಖಲಿಸಲಾಗಿದೆ. ಸಿ.ಸಿ.ಟಿ.ವಿ. ಹಾಗೂ ಮೊಬೈಲ್ ದೃಶ್ಯಗಳನ್ನು ಆಧರಿಸಿ ಪೊಲೀಸರು ಗುರುವಾರ ರಾತ್ರಿಯಿಂದಲೇ ಕ್ರಮ ತೆಗೆದುಕೊಂಡು, 30 ಜನರನ್ನು ಬಂಧಿಸಿದ್ದಾರೆ. ತನಿಖೆ ಮುಂದುವರೆದಂತೆ, ಇನ್ನಷ್ಟು ಜನರನ್ನು ಬಂಧಿಸುವ ಸಾಧ್ಯತೆಯೂ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಂತಿಗೆ ಭಂಗ ಪಡಿಸಲು ಯತ್ನಿಸಿದರೆ ನಿರ್ದಾಕ್ಷಿಣ್ಯ ಕ್ರಮ
ಗುರುವಾರದ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ತೆಗೆದುಕೊಳ್ಳ ಲಾಗುವುದು. ಶಾಂತಿ, ಸುವ್ಯವಸ್ಥೆಗೆ ಭಂಗಪಡಿಸಲು ಯಾರೇ ಮುಂದಾದರು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೂರ್ವ ವಲಯ ಡಿಐಜಿ ರಮೇಶ್ ಬಾನೋತ್ ಎಚ್ಚರಿಸಿದ್ದಾರೆ.
ಪ್ರಚೋದನಕಾರಿ ಹೇಳಿಕೆ ನೀಡಿದ ನಂತರ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಮುಖ ಮುಖಂಡರ ಸಭೆ ನಡೆಸಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದಿದ್ದರು. ಆದರೂ, ಕೆಲ ಕಿಡಿಗೇಡಿಗಳು ಪರಿಸ್ಥಿತಿಯ ದುರ್ಲಾಭ ಪಡೆದು ಕಲ್ಲು ತೂರಾಟ ನಡೆಸಿದ್ದಾರೆ ಎಂದವರು ಹೇಳಿದರು.
ಆದರೆ, ಪೊಲೀಸರು ಅರ್ಧ ಗಂಟೆಯಲ್ಲೇ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಅಮಾಯಕರನ್ನು ಬಂಧಿಸಿಲ್ಲ. ಕೆಲವರು ಕೈಯಲ್ಲಿ ಕಲ್ಲು ಹಾಗೂ ಬಾಟಲಿ ಹಿಡಿದಾಗ ಬಂಧಿಸಿದ್ದೇವೆ. ಸಿಸಿಟಿವಿ ಹಾಗೂ ಮೊಬೈಲ್ ದೃಶ್ಯಗಳನ್ನು ಆಧರಿಸಿ ಉಳಿದವರನ್ನು ಬಂಧಿಸಿದ್ದೇವೆ ಎಂದು ಡಿಐಜಿ ರಮೇಶ್ ಹೇಳಿದರು.
ಆನೆಕೊಂಡ, ಮಟ್ಟಿಕಲ್ಗಳಲ್ಲಿ ದಾಂಧಲೆ
ಅರಳೀಮರ ವೃತ್ತದ ಬಳಿಯಷ್ಟೇ ಅಲ್ಲದೆ, ಆನೆಕೊಂಡ ಹಾಗೂ ಮಟ್ಟಿಕಲ್ಲು ಪ್ರದೇಶಗಳಲ್ಲೂ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆರವಣಿಗೆ ವೇಳೆ ಕಲ್ಲು ತೂರಾಟದ ಬಳಿಕ ಏಕಾಏಕಿ ಬಡಾವಣೆಗೆ ನುಗ್ಗಿದ ಕಿಡಿಗೇಡಿಗಳು ಕೈಯಲ್ಲಿ ಮಚ್ಚು, ದೊಣ್ಣೆ ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದು ದಾಂಧಲೆ ನಡೆಸಿದ್ದಾರೆ. ಮನೆ ಮುಂದಿನ ವಾಹನಗಳನ್ನು ಜಖಂಗೊಳಿಸಿದ್ದಾರೆ. ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆನೆಕೊಂಡ, ಮಟ್ಟಿಕಲ್ಲು ಪ್ರದೇಶದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಕಿಡಿಗೇಡಿಗಳು ಮನೆಗಳ ಹೊರಗೆ ನಿಲ್ಲಿಸಿದ್ದ ಬೈಕ್, ಕಾರು ಸೇರಿದಂತೆ ಹತ್ತಾರು ವಾಹನಗಳನ್ನು ಜಖಂಗೊಳಿಸಿದ್ದಾರೆ. ರಾತ್ರಿಯಿಡೀ ಆತಂಕದಲ್ಲೇ ಕಾಲ ಕಳೆದಿದ್ದೇವೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರ ಎದುರು ಸ್ಥಳೀಯರು ಹೇಳಿದರು.
ಪರಿಸ್ಥಿತಿ ನಿಯಂತ್ರಣದಲ್ಲಿ : ನಗರದಲ್ಲಿ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈಗಿರುವ ಬಂದೋಬಸ್ತ್ ಮುಂದುವರೆಸಲಾಗುವುದು ಎಂದು ರಾಜ್ಯ ಕಾನೂನು, ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ತಿಳಿಸಿದ್ದಾರೆ.
ಘಟನೆಯಲ್ಲಿ ಸಾರ್ವಜನಿಕರಿಗೆ ಯಾವುದೇ ಗಾಯಗಳಾಗಿರುವ ಮಾಹಿತಿ ಇಲ್ಲ. ಮೌಲ್ವಿ ಒಬ್ಬರು ತಮ್ಮ ಕಿವಿ ಬಳಿ ಗಾಯವಾಗಿದೆ ಎಂದು ದೂರೊಂದನ್ನು ದಾಖಲಿಸಿದ್ದಾರೆ. ಈ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು ಹೇಳಿದರು.
ಎರಡೂ ಸಮುದಾಯಗಳ ಮುಖಂಡರನ್ನು ಸೇರಿಸಿ ಶಾಂತಿ ಸಭೆ ನಡೆಸಲಾಗುವುದು. ಪ್ರತಿಷ್ಠಾಪನೆಯಾಗಿರುವ ಗಣೇಶ ಮೂರ್ತಿಗಳನ್ನು ಗೌರವಯುತವಾಗಿ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಲಾಗುವುದು. ನಗರದ ಸಾರ್ವಜನಿಕ ಹಿಂದೂ ಮಹಾಗಣಪತಿ ವಿಸರ್ಜನೆಗೆ ಸೂಕ್ತ ಬಂದೋಬಸ್ತ್ ಒದಗಿಸಲಾಗುವುದು ಎಂದು ಹೇಳಿದರು.
ಈ ಘಟನೆಯಲ್ಲಿ ಹೊರಗಿನ ಯಾರೂ ಭಾಗಿಯಾಗಿರುವ ಮಾಹಿತಿ ಇಲ್ಲ. ಈ ಘಟನೆ ಪೂರ್ವನಿಯೋಜಿತ ಸಂಚಿನಂತೆಯೂ ಕಂಡು ಬರುತ್ತಿಲ್ಲ. ಹಠಾತ್ ಪ್ರಚೋದನೆಗೆ ಗುರಿಯಾಗಿ ಘಟನೆ ನಡೆದಿರುವಂತೆ ಕಂಡು ಬರುತ್ತಿದೆ ಎಂದು ಹಿತೇಂದ್ರ ಹೇಳಿದರು.
ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿರುವ ಬಗ್ಗೆ ದೂರುಗಳು ದಾಖಲಾಗಿವೆ. ಈ ಬಗ್ಗೆ ಕ್ರಮವನ್ನೂ ತೆಗೆದುಕೊಳ್ಳಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.