ಉಪ ಉತ್ಪನ್ನಗಳಿಂದ ಹೆಚ್ಚಲಿ ಅಡಿಕೆ ಮಾನ

ಉಪ ಉತ್ಪನ್ನಗಳಿಂದ ಹೆಚ್ಚಲಿ ಅಡಿಕೆ ಮಾನ

ಗುಟ್ಕಾದಿಂದಾಗಿ ಅಡಿಕೆಗೆ ಕ್ಯಾನ್ಸರ್‌ ಎಂಬ ಅವಮಾನ ತಗುಲಿದೆ : ತರಳಬಾಳು ಶ್ರೀ

ದಾವಣಗೆರೆ, ಸೆ. 19 – ಅಡಿಕೆಯಿಂದ ಕ್ಯಾನ್ಸರ್ ಬರುವುದಿಲ್ಲ. ಆದರೆ, ಅಡಿಕೆ ಜೊತೆ ರಾಸಾಯನಿಕ ಮಿಶ್ರಣ ಮಾಡಿ ಬಳಸುವುದರಿಂದ ಹಾಗೂ ಗುಟ್ಕಾ ಮಾಡುವುದರಿಂದ ಕ್ಯಾನ್ಸರ್‌ ಅಪಾಯ ಉಂಟಾಗಿದೆ. ಇದರಿಂದಾಗಿ ಅಡಿಕೆಗೆ ಅವಮಾನವಾಗುತ್ತಿದೆ ಎಂದು ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ದಾವಣಗೆರೆ ಅಡಿಕೆ ಅಭಿವೃದ್ಧಿ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘದ (ದಾಮ್‌ಕೋಸ್‌) ರಜತ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಅಡಿಕೆಯನ್ನು ಮಂಗಳ ಕಾರ್ಯದಲ್ಲಿ ಬಳಕೆ ಮಾಡಲಾಗುತ್ತದೆ. ಅಡಿಕೆಯಿಂದ ಕ್ಯಾನ್ಸರ್ ಬರುತ್ತದೆ ಎಂದು ಹೇಳುವುದು ತಪ್ಪು ಎಂದವರು ತಿಳಿಸಿದರು.

ಅಡಿಕೆ ಬೆಲೆ ಹೆಚ್ಚಾಗುತ್ತಿದೆ ಎಂದು ದೊಡ್ಡ ಸಂಖ್ಯೆಯಲ್ಲಿ ರೈತರು ಅಡಿಕೆ ಬೆಳೆಗೆ ಮುಂದಾಗುತ್ತಿದ್ದಾರೆ. ಇದರಿಂದಾಗಿ ಅಡಿಕೆ ಇಳುವರಿ ಹೆಚ್ಚಾಗಿ ಬೆಲೆ ಕುಸಿದರೆ ರೈತರ ಗತಿ ಏನು? ಎಂಬ ಕಳವಳವೂ ಇದೆ ಎಂದು ಶ್ರೀಗಳು ಹೇಳಿದರು.

ಈ ಹಿನ್ನೆಲೆಯಲ್ಲಿ ಅಡಿಕೆಯಿಂದ ಉಪ ಉತ್ಪನ್ನಗಳನ್ನು ಪಡೆಯುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ಅಡಿಕೆಯನ್ನು ಗುಟ್ಕಾ ಬದಲು `ಗುಡ್‌ ಕಾಸ್‌’ಗೆ (ಒಳ್ಳೆ ಉದ್ದೇಶ) ಬಳಸಬೇಕಿದೆ. ಆಗ ಅಡಿಕೆಗೆ ಇನ್ನೂ ಹೆಚ್ಚಿನ ಮಾನ ಸಿಗಲಿದೆ ಎಂದು ಶ್ರೀಗಳು ತಿಳಿಸಿದರು.

ದಾಮ್‌ಕೋಸ್‌, ತುಮ್‌ಕೋಸ್‌ ಇತ್ಯಾದಿಗಳು ಕೇವಲ ಅಡಿಕೆ ಮಾರಾಟದ ಮಳಿಗೆಗಳಾಗಬಾರದು. ಅಡಿಕೆ ಉಪ ಉತ್ಪನ್ನಗಳನ್ನು ಉತ್ಪಾದಿಸುವ ತಾಣಗಳೂ ಆಗಬೇಕು ಎಂದು ಶ್ರೀಗಳು ಹೇಳಿದರು.

ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ದಾವಣಗೆರೆ ಭಾಗದಲ್ಲಿ 20 ಸಾವಿರಕ್ಕೂ ಹೆಚ್ಚು ಅಡಿಕೆ ಬೆಳೆಗಾರರಿದ್ದಾರೆ. ಆದರೆ, ದಾಮ್‌ಕೋಸ್‌ನಲ್ಲಿ ಕೇವಲ 1,400 ಸದಸ್ಯರಿದ್ದಾರೆ. ಸದಸ್ಯರ ಸಂಖ್ಯೆ ಹೆಚ್ಚಾಗಬೇಕಿದೆ. ಆಗ ಬೆಳೆಗಾರರ ಬೇಡಿಕೆಗಳಿಗೆ ಬಲ ಬರುತ್ತದೆ. ಎಂದರು.

ದಾಮ್‌ಕೋಸ್‌ಗೆ ಸ್ವಂತ ಕಟ್ಟಡದ ಅಗತ್ಯವಿದೆ. ಈ ಬಗ್ಗೆ ಅಗತ್ಯ ಸಹಕಾರ ನೀಡುತ್ತೇನೆ ಎಂದವರು ಭರವಸೆ ನೀಡಿದರು.

ಮುಖಂಡರಾದ ಎನ್.ಜಿ. ಪುಟ್ಟಸ್ವಾಮಿ ಮಾತನಾಡಿ, ಸಹಕಾರ ಸಂಘಗಳು ಬೆಳೆಯಲು ಸಾಕಷ್ಟು ಅವಕಾಶಗಳಿದ್ದು ಬಳಸಿಕೊಳ್ಳಬೇಕಿದೆ. ದಾಮ್‌ಕೋಸ್‌ನಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಹೆಚ್ಚಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ದಾಮ್‌ಕೋಸ್‌ ಅಧ್ಯಕ್ಷ ಬಿ.ಕೆ. ಶಿವಕುಮಾರ್ ಮಾತನಾಡಿ, ಸದಸ್ಯರು ಕೇವಲ ಷೇರು ಪಡೆದರೆ ಸಾಲದು. ಸಹಕಾರ ಸಂಘದಲ್ಲೇ ಅಡಿಕೆ ಮಾರಬೇಕು ಎಂದು ಕರೆ ನೀಡಿದರು.

ಇದೇ ವೇಳೆ ದಾಮ್‌ಕೋಸ್‌ ರಜತ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ವೇದಿಕೆಯ ಮೇಲೆ ದಾಮ್‌ಕೋಸ್‌ ಸಂಸ್ಥಾಪಕ ಅಧ್ಯಕ್ಷ ಹೆಚ್. ಜಯಣ್ಣ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ತುಮ್‌ಕೋಸ್ ಅಧ್ಯಕ್ಷ ಆರ್.ಎಂ. ರವಿ ಅಜ್ಜಿಹಳ್ಳಿ, ಮುಖಂಡರಾದ ಸದಾನಂದ ಮಳಲ್ಕೆರೆ, ಜೆ.ಆರ್. ಷಣ್ಮುಖಪ್ಪ, ಮುದೇಗೌಡ್ರ ಗಿರೀಶ್, ಸದಾನಂದ ಹೆಗಡೆ, ಎಸ್.ಜಿ. ಮಲ್ಲಿಕಾರ್ಜುನ್, ಎ.ಜಿ. ರೇವಣಸಿದ್ದಪ್ಪ, ಮರುಳಸಿದ್ದಪ್ಪ, ಕೆ.ವಿ. ಉಮೇಶ್, ಎಂ.ಆರ್. ಮಂಜುನಾಥಯ್ಯ, ಜೆ.ಸಿ. ವಾಮದೇವಪ್ಪ, ಸುಧಾ ಬಸವರಾಜ್, ಹೆಚ್.ಎಸ್. ಮಂಗಳ ಗೌರಮ್ಮ, ಪಾಲಾಕ್ಷಮ್ಮ ಕಬ್ಬೂರು, ಹೆದ್ನೆ ಮುರುಗೇಂದ್ರಪ್ಪ, ಶಾಮನೂರು ಲಿಂಗರಾಜು ಮತ್ತಿತರರು ಉಪಸ್ಥಿತರಿದ್ದರು.

error: Content is protected !!