ಗಣಪತಿ ಮೆರವಣಿಗೆ ವೇಳೆ ಕಲ್ಲು ತೂರಾಟ

ಗಣಪತಿ ಮೆರವಣಿಗೆ ವೇಳೆ ಕಲ್ಲು ತೂರಾಟ

ಹಳೆ ದಾವಣಗೆರೆಯಲ್ಲಿ ಬಿಗುವಿನ ವಾತಾವರಣ, ಬಿಗಿ ಬಂದೋಬಸ್ತ್

ದಾವಣಗೆರೆ, ಸೆ.19- ಗಣೇಶನ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ನಗರದ ಬೇತೂರು ರಸ್ತೆ ಬಳಿ ನಡೆದಿದೆ.

ಗುರುವಾರ ಸಂಜೆ ವೆಂಕಾಭೋವಿ ಕಾಲೋನಿಯಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ಶಾಂತ ರೀತಿಯಿಂದ ಸಾಗುತ್ತಿತ್ತು. ಮೆರವಣಿಗೆಯು ಅರಳಿಮರದ ವೃತ್ತದಿಂದ ಚಾಮರಾಜ ಪೇಟೆ ವೃತ್ತದ ಬಳಿ ಹೋಗುವಾಗ ಇದ್ದಕ್ಕಿದಂತೆ ಕಲ್ಲು ತೂರಾಟ ನಡೆದಿದೆ. 

ಏಕಾಏಕಿ ಕಲ್ಲು ತೂರಾಟ ನಡೆದಿದ್ದರಿಂದ ಕೆಲವರಿಗೆ ಪೆಟ್ಟು ಬಿದ್ದಿದ್ದು, ಪೊಲೀಸ್ ಇನ್‌ಸ್ಪೆಕ್ಟರ್ ಗುರುಬಸವರಾಜ್, ಪೇದೆ ರಘು ಕಲ್ಲೇಟಿನಿಂದ ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕಲ್ಲು ತೂರಿದ ಆರೋಪಿಗಳಿಗೆ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. 

ಕಲ್ಲು ತೂರಾಟದ ಘಟನೆ ನಡೆಯುತ್ತಿದ್ದಂತೆ ಹಳೇ ದಾವಣಗೆರೆ ಭಾಗದ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಬಂದ್ ಮಾಡಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಜಮಾಯಿಸಿದ್ದ ಜನರನ್ನೂ ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸ್ವತಃ ಎಸ್ಪಿ ಉಮಾ ಪ್ರಶಾಂತ್ ಲಾಠಿ ಹಿಡಿದು ಜನರನ್ನು ಚದುರಿಸಲು ಮುಂದಾಗಿದ್ದರು. ಈ ವೇಳೆ ಕಲ್ಲು ತೂರಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಹಿಂದೂ ಪರ ಕಾರ್ಯಕರ್ತರು ಆಗ್ರಹಿಸಿದರು.

error: Content is protected !!