ದಾವಣಗೆರೆ, ಸೆ.19 – ಇದೇ ದಿನಾಂಕ 22 ರಂದು ಬೆಂಗಳೂರಿನ ರಾಡಿಸನ್ ಬ್ಲ್ಯೂ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ಮುಂದೇನು…? ವಿಷಯ ಕುರಿತು ಸಭೆ ನಡೆಯಲಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಸಭೆಯಲ್ಲಿ ರಾಷ್ಟ್ರೀಯ ಪಕ್ಷಗಳು ಇಲ್ಲದೇ ಕರ್ನಾಟಕವನ್ನು ಮುನ್ನಡೆಸು ವಂತಹ ಪರ್ಯಾಯ ಶಕ್ತಿ, ವೇದಿಕೆಯ ಬಗ್ಗೆ ವಿಸ್ತೃತ ವಾಗಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಅಂದು ಬೆಳಗ್ಗೆ 10 ರಿಂದ ಸಂಜೆಯವರೆಗೆ ಸಭೆ ನಡೆಯಲಿದ್ದು, ರೈತ, ದಲಿತ, ಮಹಿಳಾ, ಯುವ ಸಂಘಟನೆ ಯವರು, ಸಾಹಿತಿಗಳು, ಕಲಾವಿದರು, ಸಿನಿಮಾ ಇತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪ್ರಸ್ತುತ ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದು, ಹಿಂದಿನ ಸರ್ಕಾರದ ಭ್ರಷ್ಟಾಚಾರ ಬಯಲಿಗೆಳೆದು ಜೈಲಿಗೆ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರು ಹೊಸತನದ ಬಗ್ಗೆ ಚರ್ಚೆ ನಡೆಸದಿದ್ದರೆ ಎರಡೂ ಪಕ್ಷಗಳೇ ಪರ್ಯಾಯ ಎನ್ನುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು.
ಸರ್ಕಾರ ರಾಜ್ಯದಲ್ಲಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರದ್ದುಗೊಳಿಸದ ಕಾರಣ ಪ್ರತಿದಿನ ರೈತರು ಕೃಷಿಯಿಂದ ವಿಮುಖ ರಾಗುತ್ತಿದ್ದಾರೆ. ಸಣ್ಣ ರೈತರು ಕೃಷಿ ಭೂಮಿ ಕಳೆದುಕೊಳ್ಳುತ್ತಿದ್ದು, ತಕ್ಷಣವೇ ಕಾಯ್ದೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭೂ ಸುಧಾರಣ ಕಾಯ್ದೆ 1961ಕ್ಕೆ ತಿದ್ದುಪಡಿ ತಂದಿದ್ದರು. ಅದನ್ನು ರದ್ದುಪಡಿಸುವುದಾಗಿ ಹೇಳಿಯೇ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಈವರೆಗೆ ಕಾಯ್ದೆ ರದ್ದುಪಡಿಸಿಯೇ ಇಲ್ಲ ಎಂದರು.
ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ, ಪ್ರಧಾನ ಕಾರ್ಯದರ್ಶಿಗಳಾದ ವೀರಭದ್ರಸ್ವಾಮಿ, ಮಲ್ಲನಗೌಡ ಪಾಟೀಲ್, ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಚಿನ್ನಸಮುದ್ರ ಶೇಖರನಾಯ್ಕ, ಜಿಲ್ಲಾಧ್ಯಕ್ಷ ಶತಕೋಟಿ ಬಸಪ್ಪ, ಕಾನೂನು ಸಲಹೆಗಾರ ವೀರನಗೌಡ ಪಾಟೀಲ್ ಇದ್ದರು.