ದಾವಣಗೆರೆ, ಸೆ. 18- ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೆರಿಕಾದ ಪ್ರತಿಷ್ಠಿತ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲ ಯವು ಹೊರ ತಂದಿರುವ ವಿಶ್ವದ ಟಾಪ್ ಶೇ. 2 ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಬಿ.ಸಿ. ಪ್ರಸನ್ನಕುಮಾರ್ (ಕ್ಯಾಲೆಂ ಡರ್ ವರ್ಷ 2023-10866) ಸ್ಥಾನ ಪಡೆದಿದ್ದು, ಇದರ ಜೊತೆಗೆ ಅವರ ಮಾರ್ಗದರ್ಶನದಲ್ಲಿನ ನಾಲ್ಕು ಸಂಶೋಧನಾರ್ಥಿಗಳಾದ ಡಾ. ಆರ್.ಜೆ.ಪುನೀತ್ ಗೌಡ, (36192), ಡಾ. ನವೀನ್ ಕುಮಾರ್ (52428), ಡಾ. ಜೆ.ಕೆ. ಮಧುಕೇಶ್ (151615), ಡಾ. ಆರ್.ಎಸ್. ವರುಣ್ ಕುಮಾರ್ 9197048) ಅವರುಗಳೂ ಕೂಡ ಸೇರ್ಪಡೆಯಾಗಿದ್ದಾರೆ.
ಸ್ಟ್ಯಾನ್ ಫೋರ್ಡ್ ವಿವಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಸಂಶೋಧನೆ, ಸಂಶೋಧನಾ ವರದಿ, ಸಂಶೋಧನಾ ಉಲ್ಲೇಖಗಳು, ಲೇಖನಗಳನ್ನು ಒಳಗೊಂಡ ಹೆಚ್-ಇಂಡೆಕ್ಸ್, ಐ-ಟೆನ್ ಇಂಡೆಕ್ಸ್ ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಈ ಮಾನದಂಡಗಳ ಪ್ರಕಾರ ವಿಜ್ಞಾನಗಳನ್ನು 22 ವೈಜ್ಞಾನಿಕ ಕ್ಷೇತ್ರಗಳು ಮತ್ತು 174 ಉಪ ಕ್ಷೇತ್ರಗಳಾಗಿ ವರ್ಗೀಕರಿಸಲಾಗಿದೆ.
ಇದರಲ್ಲಿ ದಾವಣಗೆರೆ ವಿವಿಯ ಗಣಿತಶಾಸ್ತ್ರ ವಿಭಾಗದ ಪ್ರೊ.ಬಿ.ಸಿ. ಪ್ರಸನ್ನಕುಮಾರ್ ಅವರು ಸತತ ನಾಲ್ಕನೇ ಬಾರಿಗೆ ಸ್ಥಾನ ಪಡೆದಿದ್ದು, ಇದರ ಜೊತೆಗೆ ವೃತ್ತಿ ಜೀವನದ ಸಾಧನೆಯಲ್ಲಿ ಶ್ರೇಯಾಂಕವನ್ನು ಪಡೆದಿರುವುದು ಗಮನಾರ್ಹವಾಗಿದೆ. ಪ್ರೊ. ಬಿ.ಸಿ. ಪ್ರಸನ್ನಕುಮಾರ್ ಮಾತ್ರವಲ್ಲದೇ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ನಡೆಸುತ್ತಿರುವ ಡಾ.ಆರ್.ಜೆ. ಪುನೀತ್ ಗೌಡ, ಡಾ. ಆರ್.ನವೀನ್ ಕುಮಾರ್, ಡಾ.ಜೆ.ಕೆ. ಮಧುಕೇಶ್ ಮತ್ತು ಡಾ. ಆರ್.ಎಸ್. ವರುಣ್ ಕುಮಾರ್ ಅವರುಗಳು ಗಣಿತಶಾಸ್ತ್ರದ ಶಾಖ ಮತ್ತು ಸಮೂಹ ವರ್ಗಾವಣೆ, ದ್ರವಚನಶಾಸ್ತ್ರ ವಿಷಯಗಳ ಸಂಶೋಧನೆಯಲ್ಲಿ ತೊಡಗಿದ್ದು, ಮಾರ್ಗದರ್ಶಕರೊಡನೆ ಸಂಶೋಧನಾರ್ಥಿಗಳು ವಿಜ್ಞಾನಿಗಳ ಪಟ್ಟಿಗೆ ಸೇರಿರುವುದು ಸ್ಫೂರ್ತಿದಾಯಕವಾಗಿದೆ.
ಅಮೆರಿಕಾದ ಪ್ರತಿಷ್ಠಿತ ಸ್ಟ್ಯಾನ್ ಫೋರ್ಡ್ ವಿಶ್ವ ವಿಜ್ಞಾನಿಗಳ ಪಟ್ಟಿಯಲ್ಲಿರುವ 4 ವಿಜ್ಞಾನಿಗಳು ಪ್ರಸ್ತುತ ರಾಜ್ಯದ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಡಾ. ಆರ್. ಪುನೀತ್ ಗೌಡ, ಬೆಂಗಳೂರಿನ ಅಮೃತ ವಿಶ್ವವಿದ್ಯಾಪೀಠಂನ ಗಣಿತಶಾಸ್ತ್ರ ವಿಭಾಗದಲ್ಲಿ ಡಾ. ಆರ್. ನವೀನ್ ಕುಮಾರ್, ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಡಾ.ಜೆ.ಕೆ. ಮಧುಕೇಶ್ ಹಾಗೂ ಮಲೇಷಿಯಾದ ಸನ್-ವೇ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದಲ್ಲಿ ಡಾ.ಆರ್.ಎಸ್. ವರುಣ್ ಕುಮಾರ್ ಅವರುಗಳು ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.
ಈ ಹಿಂದೆಯೂ ಕೂಡ 2020, 2021, 2022 ನೇ ಸಾಲಿನಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ ಡಾ.ಆರ್.ಜೆ. ಪುನೀತ್ ಗೌಡ ಹಾಗೂ ಡಾ. ಆರ್. ನವೀನ್ ಕುಮಾರ್ ಅವರುಗಳು ಸ್ಥಾನ ಪಡೆದಿದ್ದರು.
2021 ಮತ್ತು 2022 ನೇ ಸಾಲಿನಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ ಡಾ.ಜೆ.ಕೆ. ಮಧುಕೇಶ್ ಮತ್ತು ಡಾ. ಆರ್.ಎಸ್. ವರುಣ್ ಕುಮಾರ್ ಸ್ಥಾನ ಪಡೆದಿದ್ದರು.
ವಿಜ್ಞಾನಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಡಾ. ಬಿ.ಸಿ. ಪ್ರಸನ್ನಕುಮಾರ್, ಡಾ. ಆರ್.ಜೆ.ಪುನೀತ್ ಗೌಡ, ಡಾ. ಆರ್. ನವೀನ್ ಕುಮಾರ್, ಡಾ. ಜೆ.ಕೆ. ಮಧುಕೇಶ್, ಡಾ. ಆರ್.ಎಸ್. ವರುಣ್ ಕುಮಾರ್ ಇವರುಗಳನ್ನು ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ್, ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಪ್ರಾಚಾರ್ಯ ಡಾ. ಹೆಚ್.ಬಿ. ಅರವಿಂದ್, ಅಮೃತ ವಿದ್ಯಾಪೀಠಂನ ಕುಲಪತಿ ಮಾತಾ ಅಮೃತಾನಂದಮಯಿ ದೇವಿ ಮತ್ತು ಆಡಳಿತ ವರ್ಗದವರು ಅಭಿನಂದಿಸಿದ್ದಾರೆ.