ವಿಶ್ವಕರ್ಮ ಮಹೋತ್ಸವದಲ್ಲಿ ನಿವೃತ್ತ ವಾರ್ತಾಧಿಕಾರಿ ಸಿ.ಪಿ. ಮಾಯಾಚಾರಿ ಅಭಿಮತ
ದಾವಣಗೆರೆ, ಸೆ.17- ವಿಶ್ವಕರ್ಮ ಜನಾಂ ಗದ ಪರಂಪರೆಯು ಜಗತ್ತಿನ ಸರ್ವಾಂಗೀಣ ಬದುಕು ನಿರ್ಮಿಸಲು ಮಹತ್ತರ ಪಾತ್ರ ವಹಿಸಿದೆ ಎಂದು ನಿವೃತ್ತ ಜಿಲ್ಲಾ ವಾರ್ತಾಧಿಕಾರಿ ಸಿ.ಪಿ. ಮಾಯಾಚಾರಿ ಹೇಳಿದರು.
ವಿಶ್ವಕರ್ಮ ಸಮಾಜದ ವತಿಯಿಂದ ನಗ ರದ ಕಾಳಿಕಾಂಬ ದೇವಸ್ಥಾನದ ಆವರಣದಲ್ಲಿ ಮಂಗಳವಾರ ನಡೆದ ವಿಶ್ವಕರ್ಮ ಮಹೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಅಂತರಾತ್ಮನಾದ ವಿಶ್ವಕರ್ಮ- ಪರಮೇಶ್ವ ರನ್ನು ಅರಿತವರು ಮೋಕ್ಷ ಹೊಂದುತ್ತಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿಶ್ವಕರ್ಮನೂ ಜನಾಂಗದ ಅಸ್ತಿತ್ವವನ್ನು ಅರಿಯಬೇಕು ಎಂದು ಹೇಳಿದರು. ಈ ಸಮಾಜದವರು ವಿಶ್ವಕರ್ಮ ಮಠ ಹಾಗೂ ಧಾರ್ಮಿಕ ಕೇಂದ್ರಗಳೊಂದಿಗೆ ಸಂಪರ್ಕ ಸಾಧಿಸಿ, ಧಾರ್ಮಿಕ ಪರಂಪರೆ ಉಳಿಸ ಬೇಕು. ಪಾಲಕರು ಮಕ್ಕಳಿಗೆ ಜನಾಂಗದ ಪರಂ ಪರೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಗ್ರಾಮೀಣ ಭಾಗದ ವಿಶ್ವಕರ್ಮ ಪ್ರತಿಭೆಗಳನ್ನು ಸಮಾಜವು ಗುರುತಿಸಬೇಕು. ವಿಶ್ವಕರ್ಮದ ಪಂಚ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಲು ವಿಶ್ವವಿದ್ಯಾಲಯ ಹಾಗೂ ಡಿಪ್ಲೋಮಾ ಕೋರ್ಸ್‌ಗಳು ಪ್ರಾರಂಭವಾಗ ಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ನೆಪದ ಸರ್ಕಾರಿ ಕಾರ್ಯಕ್ರಮ ಸಮಾಜಕ್ಕೆ ಬೇಕಿಲ್ಲ..!
ಅಧಿಕಾರಿಗಳು ಮತ್ತು ಸಚಿವರು ಕಾರ್ಯಕ್ರಮಕ್ಕೆ ಆಗಮಿಸದೇ ಇರುವುದು ಸಮಾಜಕ್ಕೆ ನೋವು ತಂದಿದೆ. ಸರ್ಕಾರ ನೆಪಕ್ಕೆ ಮಾತ್ರ ಜಯಂತಿ ಘೋಷಣೆ ಮಾಡಿದೆ. ಸರ್ಕಾರದ ಕಾರ್ಯಕ್ರಮಗಳು ನಮ್ಮ ಸಮಾಜಕ್ಕೆ ಅವಶ್ಯಕತೆಯಿಲ್ಲ. ನಾವೇ ಜಯಂತಿ ಕಾರ್ಯಕ್ರಮ ಮಾಡಿಕೊಳ್ಳುತ್ತೇವೆ ಎಂದು ಮುಖಂಡ ಜಗನ್ನಾಥ ಗುಡುಗಿದರು.
ಸಮಾಜದ ಮಕ್ಕಳು ವಿಚಾರ ದೃಷ್ಟಿಕೋನ ಬೆಳೆಸಿಕೊಂಡು ಶೈಕ್ಷಣಿಕವಾಗಿ ಮುಂದೆ ಬರಬೇಕು ಮತ್ತು ಅನ್ಯ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು ಎಂದು ಸಲಹೆ ನೀಡಿದರು. ವಿಶ್ವಕರ್ಮ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ. ಶಿವಾನಂದ ಮಾತನಾಡಿ, ರಾಜ್ಯ ಸರ್ಕಾರವು ವಿಶ್ವಕರ್ಮ ಜಯಂತಿ ಆಚರಿಸಲು ಅಧಿಕೃತವಾಗಿ ಘೋಷಿ ಸಿದ್ದರೂ ಕಾರ್ಯಕ್ರಮಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗೈರಾಗಿರುವುದು ಸಮಾಜ ಬಾಂಧವರಿಗೆ ಬೇಸರ ತಂದಿದೆ ಎಂದರು.
ಅಂತರವಳ್ಳಿ ಮಠದ ಭಾಸ್ಕರ ಸ್ವಾಮೀಜಿ ಮಾತನಾಡಿ, ವಿಶ್ವಕರ್ಮ ಸಮಾಜವು ಹಿಂದುಳಿದಿದೆ. ಸರ್ಕಾರದಿಂದ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ. ಆದ್ದರಿಂದ ನಮ್ಮ ಜನಾಂಗವು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮ ಬಳಿಕ ಬಂಗಾರದ ರಥದಲ್ಲಿ ವಿಶ್ವಕರ್ಮ ಮೂರ್ತಿಯ ಮೆರವಣಿಗೆ ಸಾಗಿತು. ಕುಂಭೋತ್ಸವ, ನಂದಿಕೋಲು ಕುಣಿತ, ಡಿಜೆ ಹಾಗೂ ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ಕಂಡು ಬಂದವು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರವಿಚಂದ್ರ, ಸಮಾಜದ ಅಧ್ಯಕ್ಷ ಬಸಾಪುರದ ನಾಗೇಂದ್ರಾಚಾರ್, ಗೌರವಾಧ್ಯಕ್ಷ ಎನ್. ಪೂರ್ವಾಚಾರ್, ಸಿದ್ದಾಚಾರ್, ಪರಮೇಶ್ವರಾಚಾರ್, ಆನಂದ ಮತ್ತು ಸಮಾಜದ ಮುಖಂಡರು ಇದ್ದರು.