ಅಗ್ಗದ ಬೆಲೆಗೆ ಜಿಂದಾಲ್‌ಗೆ ಭೂಮಿ ಕೊಡದಿರಲು ರೈತರ ಆಗ್ರಹ

ಅಗ್ಗದ ಬೆಲೆಗೆ ಜಿಂದಾಲ್‌ಗೆ ಭೂಮಿ ಕೊಡದಿರಲು ರೈತರ ಆಗ್ರಹ

ದಾವಣಗೆರೆ, ಸೆ.18- ಜಿಂದಾಲ್ ಕಂಪನಿಗೆ ಅಗ್ಗದ ಬೆಲೆಗೆ ಭೂಮಿ ಕೊಡಬಾರದು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕರಾಳ ದಿನ ಆಚರಿಸಿದ ರೈತರು, ಪ್ರತಿಭಟನೆ ನಡೆಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಪ್ರತಿಭಟನೆಯ ಮೂಲಕ ಒತ್ತಾಯಿಸಿದರು.

ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ ಮಾತನಾಡಿ, ಅತಿವೃಷ್ಟಿಯಿಂ ದಾದ ಜನ, ಜಾನುವಾರು, ಮನೆ ಹಾಗೂ ಬೆಳೆ ನಷ್ಟಕ್ಕೆ ತಕ್ಷಣವೇ ಪರಿಹಾರ ಕಲ್ಪಿಸಬೇಕು. ಐಪಿ ಸೆಟ್‌ಗೆ ಆಧಾರ್ ನಂಬರ್ ಜೋಡಣೆ ಮಾಡಬಾರದು ಮತ್ತು ಸ್ವಯಂ ಆರ್ಥಿಕ ಯೋಜನೆ ಕೈ ಬಿಟ್ಟು ಹಿಂದಿನಂತೆ ಅಕ್ರಮ-ಸಕ್ರಮ ಯೋಜನೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಕನಿಷ್ಠ ಬೆಂಬಲ ಬೆಲೆ ಕಾನೂನಾತ್ಮಕವಾಗಿ ಜಾರಿಗೊಳಿಸುವುದು, ವಿದ್ಯುತ್ ಖಾಸಗೀಕರಣ ಕೈ ಬಿಡುವುದು ಮತ್ತು ಬಗರ್‌ಹುಕುಂ ಸಾಗುವಳಿ ದಾರರನ್ನು ಒಕ್ಕಲೆಬ್ಬಿಸದೇ ತಕ್ಷಣಕ್ಕೆ ಸಾಗುವಳಿ ಹಕ್ಕು ಪತ್ರ ನೀಡಬೇಕೆಂದು ಹೇಳಿದರು.

17 ವರ್ಷಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ಡಾ. ಸ್ವಾಮಿನಾಥನ್‌ ಅವರು ನೀಡಿದ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಬೆಲೆ ಜಾರಿ ಮಾಡದಿರುವುದು ಹಾಗೂ ಕೃಷಿ ಬೆಲೆ ಆಯೋಗ ನೀಡಿದ ವರದಿ ಜಾರಿಗೊಳಿಸದೇ ಇರುವುದನ್ನು ದೂರಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿ ಮಾಡುತ್ತಿರುವ ಕಠಿಣ ನೀತಿಗಳಿಂದ ರೈತರು ಕೃಷಿಯಿಂದ ಹೊರ ಹೋಗುತ್ತಿದ್ದಾರೆ. ನೀರಾವರಿ ಮತ್ತು ಭೂಮಿ ಅಭಿವೃದ್ಧಿಗಾಗಿ ಬಂಡವಾಳ ಹಾಕಿ ರೈತರು ಸಾಲಗಾರರಾಗುತ್ತಿದ್ದಾರೆ ಎಂದರು.

ಸಂಘದ ಜಿಲ್ಲಾಧ್ಯಕ್ಷ ಪಿ.ಪಿ ಮರುಳಸಿದ್ದಯ್ಯ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳೇ ಸರಿ ಪಡಿಸಬಹುದಾದ ಸಣ್ಣ ಪುಟ್ಟ ತಿದ್ದು ಪಡಿಗಳಿಗೆ ಅಧಿಕಾರಿಗಳು ತಿಂಗಳಾನುಗಟ್ಟಲೇ ಜನಸಾಮಾನ್ಯರನ್ನು ಸತಾಯಿಸುತ್ತಿದ್ದಾರೆ  ಎಂದು ದೂರಿದರು.

ಈ ವೇಳೆ ಜಿಲ್ಲಾ ಕಾರ್ಯಾಧ್ಯಕ್ಷ ಹೊನ್ನೂರು ರಾಜು, ಗೋಶಾಲೆ ಬಸವ ರಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ ನಾಯ್ಕ, ಜಿಲ್ಲಾ ಹಸಿರು ಸೇನೆ ಸಂಚಾಲಕ ಎಂ. ಅಭಿಲಾಷ್, ಹಾಲಸ್ವಾಮಿ, ದೊಡ್ಡೇರಿ ಬಸವರಾಜಪ್ಪ, ಮಂಜಪ್ಪ, ಷಣ್ಮುಖಪ್ಪ, ಮಲ್ಲೇನಹಳ್ಳಿ ನಾಗರಾಜ್, ಕ್ಯಾತನಳ್ಳಿ ನಾಗರಾಜಪ್ಪ, ನುಗ್ಗೆಹಳ್ಳಿ ನಿಂಗಪ್ಪ, ರವಿ ಹಳ್ಳಿ, ಕರಿಬಸಪ್ಪ, ಸಂತೋಷ್ ಮಲ್ಲಾಳ, ಗಣೇಶ್, ಪ್ರಕಾಶ್ ಸೇರಿದಂತೆ ತಾಲ್ಲೂಕು ಹಾಗೂ ಗ್ರಾಮ ಘಟಕದ ಪದಾಧಿಕಾರಿಗಳಿದ್ದರು.

error: Content is protected !!