`ನಾರಿ ಶಕ್ತಿ’ ಉದ್ಘಾಟಿಸಿ, ಸುರಕ್ಷಾ ಆಪ್‌ಗೆ ಚಾಲನೆ ನೀಡಿದ ಸಂಸದೆ ಡಾ.ಪ್ರಭಾ
ದಾವಣಗೆರೆ, ಸೆ. 16- ಶಾಲಾ-ಕಾಲೇಜುಗಳಲ್ಲಿ ಸಹಾಯವಾಣಿ ಹಾಗೂ ಕಾನೂನು ಸುರಕ್ಷತೆ ಜೊತೆಗೆ ಆತ್ಮರಕ್ಷಣೆ ಜಾಗೃತಿ ಮೂಡಿಸುವ ಅಗತ್ಯವಿದ್ದು, ಹೆಣ್ಣು ಮಕ್ಕಳಿಗೆ ಸುರಕ್ಷತೆಯ ವಾತಾವರಣ ನಿರ್ಮಾಣ ಮಾಡಬೇಕಾಗಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಮೊನ್ನೆ ಏರ್ಪಾಡಾಗಿದ್ದ `ನಾರಿ ಶಕ್ತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ, ಸುರಕ್ಷಾ ಆಪ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ಮಹಿಳೆಯರಿಗೆ ಹೆಚ್ಚಿನ ಸುರಕ್ಷತೆ ಕಲ್ಪಿಸುವ ಜೊತೆಗೆ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಿಸುವ ಅವಶ್ಯವಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಬಂಗಾಳ, ಹುಬ್ಬಳ್ಳಿಯಲ್ಲಿ ನಡೆದ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಗಮನಿಸಿದರೆ ನಾರಿ ಶಕ್ತಿಯಂತಹ ಆತ್ಮರಕ್ಷಣೆಯ ಕಾರ್ಯಕ್ರಮಗಳನ್ನು ರೂಪಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ವಿದ್ಯಾರ್ಥಿನಿಯರ ನಿಲಯಗಳಲ್ಲಿರುವ ಹೆಣ್ಣು ಮಕ್ಕಳು ತಮ್ಮ ತಂದೆ-ತಾಯಿಗಳಿಗೆ ದೈನಂದಿನ ಚಟುವಟಿಕೆಗಳ ಬಗ್ಗೆ ನೈಜ ಮಾಹಿತಿ ನೀಡುತ್ತಿರಬೇಕು. ಹೆಣ್ಣು ಮಕ್ಕಳು ಕೂಡ ಮೌಲ್ಯಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಕರೆ ನೀಡಿದರು.
ಪ್ರತಿಜ್ಞಾ ವಿಧಿ ಬೋಧಿಸಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಕರಾಟೆ ಕಲೆ ಮನುಷ್ಯನ ದೈಹಿಕ, ಮಾನಸಿಕ ಆರೋಗ್ಯ ಸುಸ್ಥಿತಿಯಲ್ಲಿಡುವ ಜೊತೆಗೆ ವೈಯಕ್ತಿಕ ಮತ್ತು ಸಾರ್ವಜನಿಕ ಬದುಕಿನ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ದಾವಣಗೆರೆ ಜಿಲ್ಲೆಯಲ್ಲಿ ಮಹಿಳೆಯರ ಸುರಕ್ಷತೆ ಯನ್ನು ಇನ್ನಷ್ಟು ಬಲಪಡಿಸಲು ಸುರಕ್ಷಾ ಆಪ್ ಜೊತೆಗೆ, ದುರ್ಗಾ ಪಡೆಯನ್ನು ಮತ್ತಷ್ಟು ಕಾರ್ಯಪ್ರವೃತ್ತ ಗೊಳಿಸಲಾಗಿದೆ ಎಂದರು.
ಹೆಣ್ಣು ಮಕ್ಕಳ ಮೇಲಾಗುವ ದೌರ್ಜನ್ಯ ತಡೆಗಟ್ಟಲು ಪೋಕ್ಸೋ ಕಾಯ್ದೆ ಇದ್ದು, ಶಾಲಾ-ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ದೈಹಿಕ ಅಥವಾ ಮಾನಸಿಕ ತೊಂದರೆಗೆ ಒಳಗಾದರೆ ಕೂಡಲೇ ಪಾಲಕರ ಗಮನಕ್ಕೆ ತರುವಂತೆ ಹೇಳಿದರು.
ಜಿಲ್ಲಾ ಪಂಚಾಯತಿ ಸಿಇಓ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಹೆಣ್ಣು ಮಕ್ಕಳು ಸ್ವಯಂ ರಕ್ಷಣೆ ಕೌಶಲ್ಯ ಹೊಂದುವಂತಾಗಲಿ ಎನ್ನುವ ಉದ್ದೇಶದಿಂದ ಈ ವರ್ಷ 11,229 ಬಾಲಕಿಯರು ಹಾಗೂ ವಸತಿ ನಿಲಯದ 3000 ವಿದ್ಯಾರ್ಥಿಗಳಿಗೆ ಕರಾಟೆ ಸೇರಿದಂತೆ, ಇತರೆ ಸಮರ ಕಲೆಯ ತರಬೇತಿ ನೀಡುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಕರಾಟೆ ಜೊತೆಗೆ ಜೋಡೋ, ಮಾರ್ಷಲ್ ಆರ್ಟ್ಸ್ ಸೇರಿದಂತೆ ಇನ್ನಿತರೆ ಕಲೆಗಳ ತರಬೇತಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಹೆಣ್ಣು ಮಕ್ಕಳಿಗಾಗಿ ಸುರಕ್ಷಾ ಆಪ್ ಸಿದ್ದಪಡಿಸಲಾಗಿದ್ದು, ಇದುವರೆಗೂ 150 ಕ್ಕೂ ಹೆಚ್ಚು ಕರೆಗಳು ಬಂದಿವೆ. ಇದರನ್ವಯ ಪೊಲೀಸರು ಕ್ರಮ ಜರುಗಿಸಿದ್ದಾರೆ. ಅದರಂತೆ ಎಲ್ಲಾ ಹೆಣ್ಣು ಮಕ್ಕಳು ಸುರಕ್ಷಾ ಆಪ್ ಅಥವಾ 112ಗೆ ಕರೆ ಮಾಡುವ ಮೂಲಕ ಪೊಲೀಸರನ್ನು ಸಂಪರ್ಕಿಸಿ ಸಹಾಯ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಹೆಣ್ಣು ಮಕ್ಕಳು ಶಾಲಾ-ಕಾಲೇಜುಗಳಿಗೆ ಬರುವುದು ಕೇವಲ ಶಿಕ್ಷಣ ಪಡೆದುಕೊಳ್ಳುವುದಕ್ಕೆ ಅಲ್ಲ. ತಮ್ಮನ್ನು ತಾವು ಕಾಪಾಡಿಕೊಳ್ಳುವ ಜೊತೆಗೆ ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು. ಆಗ ಮಾತ್ರ ನೀವು ಪಡೆದ ಶಿಕ್ಷಣಕ್ಕೆ ಬೆಲೆ ಬರುತ್ತದೆ ಎಂದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಮಲ್ಲಿಕಾರ್ಜುನ್ ಮಠದ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ. ನಾಗರಾಜ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗಾಯತ್ರಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ್ ಎಂ. ಸಂತೋಷ್, ಡಿಡಿಪಿಐ ಜಿ.ಕೊಟ್ರೇಶ್, ಮಂಜುನಾಥ್ ಸೇರಿದಂತೆ ಕರಾಟೆ ಕೋಚ್‌ಗಳು, ವಿವಿಧ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.