ನಿರುದ್ಯೋಗ ನೆರವು ಪಡೆವಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂದೆ
ದಾವಣಗೆರೆ, ಸೆ. 16 – ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಲಕ್ಷ್ಮಿ, ಶಕ್ತಿ ಹಾಗೂ ಅನ್ನಭಾಗ್ಯ ಯೋಜನೆಗಳು ಮಹಿಳೆ ಯರಿಗೆ ಮೀಸಲಾಗಿವೆ. ಇದರ ಜೊತೆಗೆ ಯುವನಿಧಿ ಯೋಜನೆಯಲ್ಲೂ ಹೆಣ್ಣು ಮಕ್ಕಳೇ ಹೆಚ್ಚಿನ ಫಲಾನುಭವಿಗಳಾಗಿದ್ದಾರೆ.
ಪದವಿ ಹಾಗೂ ಡಿಪ್ಲೋಮಾ ಪದವಿ ಪಡೆದವರು ನಿರುದ್ಯೋಗಿಗಳಾಗಿದ್ದರೆ, ಯುವನಿಧಿ ಯೋಜನೆಯ ಮೂಲಕ ನೆರವು ನೀಡಲಾಗುತ್ತಿದೆ. ಪದವಿದಾರರಿಗೆ ತಿಂಗಳಿಗೆ 3 ಸಾವಿರ ರೂ. ಹಾಗೂ ಡಿಪ್ಲೋಮಾ ಫಲಾನುಭವಿಗಳಿಗೆ 1,500 ರೂ. ನೀಡಲಾಗುತ್ತಿದೆ.
ಈ ಯೋಜನೆಗೆ ಜಿಲ್ಲೆಯಲ್ಲಿ 12,390 ಫಲಾನುಭವಿಗಳಿದ್ದಾರೆ. ಇವರ ಪೈಕಿ ಪುರುಷರು 5,667 ಇದ್ದರೆ, ಮಹಿಳಾ ಫಲಾನುಭವಿಗಳ ಸಂಖ್ಯೆ 6,723 ಆಗಿದೆ.
ಜಗಳೂರು ತಾಲ್ಲೂಕಿನಲ್ಲಿ ಮಾತ್ರ ಮಹಿಳಾ ಫಲಾನುಭವಿಗಳ ಸಂಖ್ಯೆ ಕಡಿಮೆ ಇದೆ. ಇಲ್ಲಿ ಮಹಿಳಾ ಫಲಾ ನುಭವಿಗಳ ಸಂಖ್ಯೆ 532 ಆಗಿದ್ದರೆ, ಪುರುಷ ಫಲಾನುಭವಿಗಳ ಸಂಖ್ಯೆ 665 ಆಗಿದೆ. ದಾವಣಗೆರೆಯಲ್ಲಿ 2,460 ಪುರುಷ ಹಾಗೂ 3,040 ಮಹಿಳಾ ಫಲಾನುಭವಿ ಗಳಿದ್ದಾರೆ. ಚನ್ನಗಿರಿಯಲ್ಲಿ 1,038 ಪುರುಷ ಹಾಗೂ 1,268 ಮಹಿಳೆಯರಿದ್ದಾರೆ.
ಹೊನ್ನಾಳಿಯಲ್ಲಿ 478 ಪುರುಷ ಹಾಗೂ 602 ಮಹಿಳೆಯರಿದ್ದಾರೆ. ನ್ಯಾಮತಿಯಲ್ಲಿ 257 ಪುರುಷ ಹಾಗೂ 261 ಮಹಿಳೆ ಯರಿದ್ದಾರೆ. ಹರಿಹರದಲ್ಲಿ 769 ಪುರುಷ ಹಾಗೂ 1,020 ಮಹಿಳೆಯರಿದ್ದಾರೆ.
ಪದವಿ ಶಿಕ್ಷಣ ಪೂರೈಸಿದ ನಂತರ ಉದ್ಯೋಗದಲ್ಲಿ ತೊಡಗುವವರು ಹಾಗೂ ಉನ್ನತ ಶಿಕ್ಷಣಕ್ಕೆ ತೆರಳುವವರಿಗೆ ಯುವನಿಧಿ ಲಭ್ಯವಾಗುವುದಿಲ್ಲ.
ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಹಾಗೂ ಉನ್ನತ ಶಿಕ್ಷಣಕ್ಕೆ ತೆರಳುತ್ತಿರುವ ಕಾರಣ ಫಲಾನುಭವಿಗಳ ಸಂಖ್ಯೆ ಕಡಿಮೆ ಇದೆ ಎಂದು ಮೂಲಗಳು ತಿಳಿಸಿವೆ.
ಹೀಗಾಗಿ ಒಂದು ರೀತಿ ಮಹಿಳಾ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿ ರುವುದು ಚಿಂತೆಗೀಡು ಮಾಡುವ ವಿಷಯವೂ ಆಗಿದೆ. ಉನ್ನತ ಶಿಕ್ಷಣ ಹಾಗೂ ಉದ್ಯೋಗಕ್ಕೆ ಮಹಿಳೆಯರ ಸೇರ್ಪಡೆ ಪ್ರಮಾಣ ಹೆಚ್ಚಿಸುವ ಬಗ್ಗೆ ಚಿಂತನೆಯ ಅಗತ್ಯವಿದೆ ಎಂಬುದನ್ನೂ ಈ ಮಾಹಿತಿ ತೋರಿಸುತ್ತಿದೆ.