ರಂಗಭೂಮಿ ವಿಶ್ವ ಮಟ್ಟಕ್ಕೆ ಬೆಳೆಯುವ ಹಂಬಲ

ರಂಗಭೂಮಿ ವಿಶ್ವ ಮಟ್ಟಕ್ಕೆ ಬೆಳೆಯುವ ಹಂಬಲ

ಕನಸು ಬಿತ್ತಿದ ಹಂಸಲೇಖ ವಾಸ್ತವ ತಿಳಿಸಿದ ಪಂಡಿತಾರಾಧ್ಯ ಸ್ವಾಮಿಜಿ

ದಾವಣಗೆರೆ, ಸೆ. 15 – ಮಧ್ಯ ಕರ್ನಾಟಕದಲ್ಲಿ ರುವ ದಾವಣಗೆರೆಯು ಹಿಂದಿನಿಂದಲೂ ವೃತ್ತಿ ರಂಗಭೂಮಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ವೃತ್ತಿ ರಂಗಭೂಮಿ ರಂಗಾಯಣದ ಮೂಲಕ ಜಾಗತಿಕವಾಗಿ ಬೆಳೆಯಲಿ ಎಂದು ಸಂಗೀತ ನಿರ್ದೇಶಕ ಹಂಸಲೇಖ ಆಶಿಸಿದರು.

ನಗರದ ಜೆ.ಜೆ.ಎಂ. ವೈದ್ಯಕೀಯ ಕಾಲೇಜು ಆವರಣದಲ್ಲಿರುವ ಬಾಪೂಜಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆಯ 2024-25ನೇ ಸಾಲಿನ ರಂಗ ಚಟುವಟಿಕೆ ಗಳ ನಾಂದಿ-ಆರಂಭೋತ್ಸವ ಕಾರ್ಯಕ್ರಮದ ರಂಗಜ್ಯೋತಿ ಬೆಳಗಿ ಅವರು ಮಾತನಾಡಿದರು.

ಥೈಲ್ಯಾಂಡ್‌ನ ಸಿಯಾಮ್ ನಿರಾಮಿತ್‌ ಹಾಗೂ ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಬ್ರಾಡ್‌ವೇನಲ್ಲಿ ನಡೆಯುವ ನಾಟಕ ಪ್ರದರ್ಶ ನಗಳು ವಿಶ್ವದಾದ್ಯಂತ ಹೆಸರಾಗಿವೆ. ಅಲ್ಲಿನ ರಂಗಭೂಮಿಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವ ತಂತ್ರಜ್ಞಾನ ಹೊಂದಿವೆ ಎಂದು ಹೇಳಿದರು.

ಬ್ರಾಡ್‌ವೇನ ಒಂದೇ ರಸ್ತೆಯಲ್ಲಿ 42 ರಂಗಮಂದಿರಗಳಿವೆ. ಇಲ್ಲಿ ನಾಟಕಕ್ಕೆ ತಕ್ಕ ಹಾಗೆ ರಂಗಮಂದಿರವನ್ನು ನಿರ್ಮಿಸಲಾಗುತ್ತದೆ. ಒಂದು ನಾಟಕ ಆರು ತಿಂಗಳವರೆಗೂ ಪ್ರದರ್ಶನ ಕಾಣುತ್ತದೆ. ನಾಟಕ ಹಾಗೂ ಸಂಗೀತಗಳು ಅಲ್ಲಿನ ಜನರ ಜೀವನದ ಭಾಗ ವಾಗಿವೆ. ಮಧ್ಯ ಕರ್ನಾಟಕ ದಾವಣಗೆರೆಯ ವೃತ್ತಿ ರಂಗಭೂಮಿಯೂ ಆ ಹಂತಕ್ಕೆ ಬೆಳೆಯುವ ಗುರಿ ಹೊಂದಬೇಕು ಎಂದು ಹೇಳಿದರು. ಆದರೆ, ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ರಂಗಭೂಮಿ ಜೀವಂತ ಕಲೆಯಾಗಿದೆ ಆದರೆ, ನಾನಾ ಕಾರಣಗಳಿಂದಾಗಿ ಈ ಕಲೆ ಉಳಿಸಿಕೊಳ್ಳುವುದೇ ಕಷ್ಟವಾಗಿದೆ ಎಂದರು.

ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣದಲ್ಲಿ ಕಳೆದ ಆರು ವರ್ಷಗಳಿಂದ ಆರು ಪೈಸೆ ಕೆಲಸವಾಗಿಲ್ಲ.  ಸರ್ಕಾರದ ಯೋಜನೆಗಳಿಗೆ ಹಣ ಹೊಂದಿಸುವುದೇ ಕಷ್ಟವಾಗಿರುವಾಗ, ಯಾವುದೇ ರಂಗಾಯಣಕ್ಕೆ ಕೋಟಿ ಕೋಟಿ ಅನುದಾನ ಬರಲಿದೆ ಎಂದು ನಿರೀಕ್ಷಿಸಲಾಗದು ಎಂದರು.

ಅಲ್ಲದೇ, ವೃತ್ತಿ ರಂಗಭೂಮಿಯಲ್ಲಿ ದ್ವಂದ್ವಾರ್ಥದ ಸಂಭಾಷಣೆ, ಕರ್ಕಶ ಸಂಗೀತ, ಇನ್ನೆಂಥದೋ ನೃತ್ಯಗಳ ಮೂಲಕ ಸಮಸ್ಯೆಯಾಗಿದೆ. ವೃತ್ತಿ ರಂಗಭೂಮಿಗೆ ಈಗ ಒಂದು ವರ್ಗದ ಪ್ರೇಕ್ಷಕರು ಮಾತ್ರ ಉಳಿದಿದ್ದಾರೆ ಎಂದು ವಿಷಾದಿಸಿದರು. ಆ ಮೂಲಕ ವೃತ್ತಿ ರಂಗಭೂಮಿಯ ವಾಸ್ತವತೆಗೆ ಕನ್ನಡಿ ಹಿಡಿದರು.

ಇದರ ಜೊತೆಗೆ ವೃತ್ತಿ ರಂಗಭೂಮಿಯ ಹಲವಾರು ಕಲಾವಿದರು ದುರಭ್ಯಾಸಗಳಿಗೆ ಸಿಲುಕಿದ್ದಾರೆ. ಇದರಿಂದಾಗಿ 40 – 45 ವರ್ಷವಾಗುವ ವೇಳೆಗೆ ಅವರ ದೇಹ, ಬುದ್ಧಿ ಹಾಗೂ ಮನಸ್ಸುಗಳು ವಿಕಾರವಾಗಿರುತ್ತವೆ. ವೃತ್ತಿ ರಂಗಭೂಮಿ ಕಲಾವಿದರ ನಡುಳಿಕೆ ಚೆನ್ನಾಗಿರಬೇಕು ಎಂದು ಕಿವಿಮಾತು ಹೇಳಿದರು.

error: Content is protected !!