ವಿನೋಬನಗರ ಗಣಪತಿ ಅದ್ಧೂರಿ ಮೆರವಣಿಗೆ

ವಿನೋಬನಗರ ಗಣಪತಿ ಅದ್ಧೂರಿ ಮೆರವಣಿಗೆ

ಗಣಪತಿಗೆ ಪೂಜೆ ಸಲ್ಲಿಸಿ ಟ್ರ್ಯಾಕ್ಟರ್ ಚಲಾಯಿಸಿ, ಮೆರವಣಿಗೆಗೆ ಚಾಲನೆ ನೀಡಿದ ಸಚಿವ ಎಸ್ಸೆಸ್ಸೆಂ

ದಾವಣಗೆರೆ, ಸೆ.15- ಇಲ್ಲಿನ ವಿನೋಬ ನಗರದ ವರಸಿದ್ದಿ ವಿನಾಯಕ ಸೇವಾ ಸಮಿತಿಯಿಂದ 32ನೇ ವರ್ಷದ ಗಣೇಶೋತ್ಸವ ಆಚರಿಸಿ, 9ನೇ ದಿನದಂದು ಗಣ ಪನ ಮೂರ್ತಿಯ ವಿಸರ್ಜನೆಯ ಶೋಭಾಯಾತ್ರೆ ಭಾನುವಾರ ಅದ್ಧೂರಿಯಾಗಿ ಜರುಗಿತು.

ಡೊಳ್ಳು, ನಂದಿಕೋಲು ಕುಣಿತ, ಬ್ಯಾಂಡ್‌ಸೆಟ್‌ ಸೇರಿದಂತೆ ವಿವಿಧ ಕಲಾ ತಂಡಗಳ ಸದ್ದು, ಗಜ ರಾಜನ ಗಾಂಭಿರ್ಯ ನಡಿಗೆ ಹಾಗೂ ಡಿಜೆ ಹಾಡಿಗೆ ಕುಣಿದ ಯುವಕ-ಯುವತಿಯರು ಎಲ್ಲರನ್ನು ಆಕರ್ಷಿಸಿದರು.

ಅಲ್ಲಿನ ವರಸಿದ್ದಿ ವಿನಾಯಕನಿಗೆ ಪೂಜೆ ಸಲ್ಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರು ಮಧ್ಯಾಹ್ನ 2.40ರ ವೇಳೆ ಗಣೇಶ ವಿಗ್ರಹವಿದ್ದ ಟ್ರ್ಯಾಕ್ಟರ್‌ ಚಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಪೊಲೀಸ್‌ ಇಲಾಖೆಯ ಬಿಗಿ ಬಂದೋಬಸ್ತ್‌ ನಡುವೆ ಮೆರವಣಿಗೆ ಮೆಲ್ಲಗೆ ಸಾಗತೊಡಗಿತು. ಗಣಪತಿ ವಿಗ್ರಹಕ್ಕೆ ರಸ್ತೆಯ ಇಕ್ಕೆಲದ ಕಟ್ಟದ ಮೇಲಿದ್ದ ಮಹಿಳೆಯರು ಹೂವು ಸುರಿದು ಭಕ್ತಿ ಸಮರ್ಪಿಸಿದರು.

ಕೇಸರಿ ಶಾಲು ಧರಿಸಿದ ಯುವಕ-ಯುವತಿಯರು ಜೈ ಶ್ರೀರಾಮ್‌ ಘೋಷನೆ ಕೂಗುತ್ತಾ ಡಿಜೆ ಹಾಡಿಗೆ ಮೈ ಕುಣಿಸು ತ್ತಿದ್ದರು. ಮೆರವಣಿಗೆ ವೇಳೆ ಆಗಮಿಸಿದ ವರುಣನ ಸಿಂಚನಕ್ಕೆ ಹುಡುಗರು ಉತ್ಸಾಹದಿಂದ ನೃತ್ಯ ಮಾಡಿದರು.

ಮೆರವಣಿಗೆಯು ಮಸೀದಿ ಸಮೀಪಿಸುತ್ತಿದ್ದಂತೆ ಆರಕ್ಷಕರು ಬ್ಯಾರಿಕೆಡ್‌ ಹಾಕಿ ಬಿಗಿ ಬಂದೋಬಸ್ತ್‌ ಮಾಡುವ ಮೂಲಕ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಸುರಕ್ಷತೆ ನೀಡಿದರು. ಹ್ಯಾಂಡ್‌ ಕ್ಯಾಮೇರಾ, ಡ್ರೋನ್‌ ಕ್ಯಾಮೇರಾ ಹಾಗೂ ಸಿಸಿ ಟಿವಿಯಲ್ಲಿ ಮೆರವಣಿಗೆಯನ್ನು ಸೆರೆ ಹಿಡಿಯಲಾಯಿತು.

ವಿನಾಯಕ ಮಹಾಸ್ವಾಮಿಯ ಮೆರವಣಿಗೆೆಯು 2ನೇ ಮುಖ್ಯ ರಸ್ತೆಯ ಮೂಲಕ , ಪಿ.ಬಿ. ರಸ್ತೆ, ಅರುಣ ವೃತ್ತದಿಂದ ರಾಂ ಆಂಡ್‌ ಕೊ ವೃತ್ತದ ಮುಖೇನ  ಪಿ.ಬಿ. ರಸ್ತೆಯ ಮಾರ್ಗವಾಗಿ ಸಾಗಿ ನಂತರ ಬಾತಿ ಕೆರೆಯಲ್ಲಿ ಗಣಪ ಮೂರ್ತಿ ವಿಸರ್ಜಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ದೂಡಾದ ಅಧ್ಯಕ್ಷ ದಿನೇಶ್‌ ಕೆ. ಶೆಟ್ಟಿ, ಎ. ನಾಗರಾಜ್‌, ಶ್ರೀರಾಮ ಸೇನೆಯ ಮಣಿ ಸರ್ಕಾರ್‌, ಜಾಗರಣ ವೇದಿಕೆಯ ಸತೀಶ್‌ ಪೂಜಾರಿ ಸೇರಿದಂತೆ ಸಮಿತಿಯ ಮುಖಂಡರು ಹಾಗೂ ಸಾರ್ವಜನಿಕರು ಇದ್ದರು.

error: Content is protected !!