ದಾವಣಗೆರೆ, ಸೆ. 13 – ಅಕ್ರಮ ಹಣ ಪ್ರಕರಣದಲ್ಲಿ ಸಿಲುಕಿರುವುದಾಗಿ ಬೆದರಿಕೆ ಹಾಕಿ ‘ಡಿಜಿಟಲ್ ಅರೆಸ್ಟ್’ ಮಾಡಿ 34 ಲಕ್ಷ ರೂ.ಗಳ ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ನಿಮ್ಮ ಹೆಸರಿನಲ್ಲಿ ಖರೀದಿಸಿರುವ ಸಿಮ್ ಕಾರ್ಡ್ ಅನ್ನು ಅಕ್ರಮ ಹಣಕ್ಕೆ ಬಳಕೆ ಮಾಡಲಾಗಿದೆ. ಇದರಿಂದಾಗಿ 17 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿ ವಂಚಕರು ನಗರದ ವ್ಯಕ್ತಿಯೊಬ್ಬರಿಗೆ ಬೆದರಿಸಿ ಹಣ ಪಡೆದಿದ್ದಾರೆ. ಕಳೆದ ಗುರುವಾರದಂದು ಈ ಘಟನೆ ನಡೆದಿದೆ. ಈ ಬಗ್ಗೆ ಶುಕ್ರವಾರದಂದು ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ.
ನಾವು ಟೆಲಿಕಾಂ ನಿಯಂತ್ರಕ ಟ್ರಾಯ್‌ನಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ಮೇಲೆ ಅಕ್ರಮ ಹಣದ 17 ಪ್ರಕರಣಗಳು ದಾಖಲಾಗಿವೆ. ಈ ಕುರಿತು ಮಾಹಿತಿ ಬೇಕಿದ್ದರೆ ಆಧಾರ್ ಕಾರ್ಡ್ ಸಂಖ್ಯೆ ನೀಡುವಂತೆ ವ್ಯಕ್ತಿಗೆ ಅನಾಮಿಕರೊಬ್ಬರು ಗುರುವಾರ ಕರೆ ಮಾಡಿದ್ದರು.
ಅದರಂತೆ ವಾಟ್ಸ್‌ಆಪ್ ಮೂಲಕ ಆಧಾರ್ ಕಾರ್ಡ್ ಪ್ರತಿಯನ್ನು ಕಳಿಸಲಾಗಿತ್ತು. ನಂತರ ಅನಾಮಿಕ ವ್ಯಕ್ತಿ ಮತ್ತೆ ಕರೆ ಮಾಡಿ, ನಿಮ್ಮ ವಿರುದ್ಧ ವಿದೇಶಿ ವಿನಿಮಯ ಉಲ್ಲಂಘನೆ ಕಾಯ್ದೆ ಹಾಗೂ ಅಕ್ರಮ ಹಣ ಕಾಯ್ದೆ ಅನ್ವಯ ಜಾರಿ ನಿರ್ದೇಶನಾಲಯದಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಬಂಧಿಸಲಾಗುವುದು. ಇದಕ್ಕಾಗಿ ಮುಂಬೈನ ತಿಲಕ್ ನಗರ ಪೊಲೀಸ್ ಠಾಣೆಗೆ ಬರಬೇಕು ಎಂದು ತಿಳಿಸಿದ.
ತನಿಖಾ ಸಂಸ್ಥೆಗಳ ಹೆಸರಿನ ‘ಡಿಜಿಟಲ್ ಅರೆಸ್ಟ್’ನಂಬಬೇಡಿ
ಟ್ರಾಯ್, ಜಾರಿ ನಿರ್ದೇಶನಾಲಯ, ಸಿ.ಬಿ.ಐ., ಇ.ಡಿ., ಐ.ಬಿ. ಇತ್ಯಾದಿ ತನಿಖಾ ಸಂಸ್ಥೆಗಳ ಹೆಸರಿನಲ್ಲಿ ಕರೆ ಮಾಡಿ ಅಕ್ರಮ ಹಣ ಪ್ರಕರಣದಲ್ಲಿ ಸಿಲುಕಿರುವುದಾಗಿ ವಂಚಿಸುವ ಪ್ರಕರಣಗಳು ನಡೆಯುತ್ತಿವೆ. ಕೂಡಲೇ ಬಂಧನ ಮಾಡುತ್ತೇವೆ, ದೆಹಲಿ ಮುಂತಾದ ಕಡೆ ಬರಬೇಕು ಎಂದು ಬೆದರಿಸಲಾಗುತ್ತಿದೆ. ಇಂತಹ ಬೆದರಿಕೆ ಕರೆಗಳನ್ನು ನಂಬಬಾರದು ಎಂದು ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಂಚಕರು ತನಿಖಾ ಸಂಸ್ಥೆಗಳ ಹೆಸರಿನ ಲೆಟರ್ ಹೆಡ್ ಮೂಲಕ ಪತ್ರ ಕಳಿಸಿ, ಮೇಲಾಧಿಕಾರಿಗಳ ಜೊತೆ ಮಾತನಾಡುವಂತೆ ತಿಳಿಸುತ್ತಾರೆ. ಸಹಾಯ ಮಾಡುವ ಸೋಗಿನಲ್ಲಿ ಹಣ ಪಡೆಯುತ್ತಾರೆ.
ಈ ವಿಷಯವನ್ನು ಬೇರೆ ಯಾರಿಗಾದರೂ ಹೇಳಿದರೆ ತೊಂದರೆಯಾಗುತ್ತದೆ ಎಂದು ಹೆದರಿಸುತ್ತಾರೆ. ಇಂತಹ ವಂಚನೆಗಳ ಬಗ್ಗೆ ಜಾಗರೂಕರಾಗಿರಬೇಕು. ಅಂತಹ ಕರೆಗಳಿಗೆ ಸ್ಪಂದಿಸಬಾರದು. ಈ ರೀತಿಯ ಕರೆ ಬಂದರೆ ಸ್ಥಳೀಯ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ನಂಬಿಕೆ ಮೂಡಿಸಲು ಜಾರಿ ನಿರ್ದೇಶನಾಲಯದ ಲೆಟರ್ ಹೆಡ್ ಇರುವ ಒಂದು ಪತ್ರವನ್ನೂ ಕಳಿಸಲಾಗಿತ್ತು. ನಂತರ ಅನಾಮಧೇಯ ಸಂಖ್ಯೆಯಿಂದ ವಾಟ್ಸ್‌ಆಪ್ ವಿಡಿಯೋ ಕರೆ ಮಾಡಲಾಗಿತ್ತು. ಇದರಲ್ಲಿ ಪೊಲೀಸ್ ಉಡುಗೆಯಲ್ಲಿದ್ದ ಒಬ್ಬರು ಮಾತನಾಡಿ, ನನ್ನ ಮೇಲಾಧಿಕಾರಿ ಹೇಮರಾಜ್ ಕೋಲಿ ಎಂಬುವವರ ಜೊತೆ ಮಾತನಾಡುವಂತೆ ತಿಳಿಸಿದರು. ನಂತರ ಭ್ರಷ್ಟಾಚಾರ ನಿಗ್ರಹದ ಆಯುಕ್ತ ವಿ.ಜಿ. ಪಾಟೀಲ್ ಎಂದು ಹೇಳಿಕೊಳ್ಳುವವರ ಜೊತೆ ಮಾತನಾಡಿಸಿದರು.
ನೀವು ಅಮಾಯಕರಿದ್ದರೆ ನಾವು ಸಹಾಯ ಮಾಡುತ್ತೇವೆ. ಈ ಬಗ್ಗೆ ನೀವೇ ಒಂದು ದೂರು ಕೊಡಿ, ಎಫ್.ಐ.ಆರ್. ಮಾಡಿಸುತ್ತೇವೆ ಎಂದು ನಂಬಿಸಿದರು. ನಂತರ ಅಕ್ರಮ ಹಣಕ್ಕೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್‌ನವರು ಪರಿಶೀಲಿಸುತ್ತಾರೆ. ನಿಮ್ಮ ಕುಟುಂಬದವರ ಖಾತೆಯಲ್ಲಿರುವ ಎಲ್ಲ ಹಣವನ್ನು ನಮಗೆ ಬ್ಯಾಂಕ್‌ನ ಆರ್.ಟಿ.ಜಿ.ಎಸ್. ಮೂಲಕ ಕಳಿಸಿ.ನೀವು ಅಮಾಯಕರಿದ್ದರೆ ಮೂರು ದಿನಗಳಲ್ಲೇ ನಿಮ್ಮ ಹಣ ವಾಪಸ್ ಬರುತ್ತದೆ ಎಂದು ಹೇಳಿದರು.
ಇದನ್ನು ನಂಬಿದ ವ್ಯಕ್ತಿ, ವಂಚಕರು ತಿಳಿಸಿದ ಎಸ್.ಬಿ.ಐ. ಖಾತೆಯೊಂದಕ್ಕೆ 34 ಲಕ್ಷ ರೂ. ಹಣವನ್ನು ಆರ್.ಟಿ.ಜಿ.ಎಸ್. ಮೂಲಕ ರವಾನಿಸಿದ್ದಾರೆ. ರಾಷ್ಟ್ರೀಯ ಗೌಪ್ಯತಾ ಕಾಯ್ದೆ ಅನ್ವಯ, ನೀವು ಈ ಮಾಹಿತಿಯನ್ನು ಯಾರಿಗೂ ತಿಳಿಸುವಂತಿಲ್ಲ. ತಿಳಿಸಿದರೆ ನಿಮ್ಮ ಜೀವಕ್ಕೆ ತೊಂದರೆಯಾಗುತ್ತದೆ ಎಂದು ವಂಚಕರು ಹೇಳಿದ್ದರು.
ನಂತರ ವ್ಯಕ್ತಿ ತನ್ನ ಪರಿಚಯಸ್ಥರ ಬಳಿ ಈ ಬಗ್ಗೆ ತಿಳಿಸಿದಾಗ, ಇದರಲ್ಲಿ ವಂಚನೆಯಾಗಿದೆ ಎಂಬುದು ಗೊತ್ತಾಗಿದೆ. ನಂತರ ಅವರು ಶುಕ್ರವಾರದಂದು ಪೊಲೀಸರಲ್ಲಿ ಆನ್‌ಲೈನ್ ಮೂಲಕ ದೂರು ದಾಖಲಿಸಿದ್ದಾರೆ. ಈ ಬಗ್ಗೆ ನಗರದ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗುತ್ತಿದೆ.