ಜಿಲ್ಲೆಯಲ್ಲಿ ನಾಡಿದ್ದು ರಾಷ್ಟ್ರೀಯ ಲೋಕ್ ಅದಾಲತ್‌

ಜಿಲ್ಲೆಯಲ್ಲಿ ನಾಡಿದ್ದು ರಾಷ್ಟ್ರೀಯ ಲೋಕ್ ಅದಾಲತ್‌

8 ಸಾವಿರ ಪ್ರಕರಣಗಳ ಇತ್ಯರ್ಥ ಗುರಿ

ದಾವಣಗೆರೆ,  ಸೆ. 11 – ಇದೇ ದಿನಾಂಕ 14ರ ಶನಿವಾರ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ತಿಳಿಸಿದರು.

ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಒಟ್ಟು 42,523 ಪ್ರಕರಣಗಳು ಬಾಕಿ ಇವೆ. ಇವುಗಳ ಪೈಕಿ 8,272 ಪ್ರಕರಣಗಳು ರಾಜಿಗೆ ಅರ್ಹ ಎಂದು ಗುರುತಿಸಲಾಗಿದೆ. ಈ ಬಾರಿ 8 ಸಾವಿರ ಪ್ರಕರಣಗಳನ್ನು ರಾಜೀ ಮಾಡುವ ಗುರಿ ಇದೆ ಎಂದು ಹೇಳಿದರು.

ಈ ಹಿಂದೆ ಜುಲೈ 13ರಂದು ಲೋಕ್ ಅದಾಲತ್ ನಡೆದಾಗ ಬಾಕಿ ಇದ್ದ 7,944 ಪ್ರಕರಣಗಳು ಹಾಗೂ 2,55,139 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿತ್ತು ಎಂದವರು ಹೇಳಿದರು.

ಈಗಾಗಲೇ ನ್ಯಾಯಾಲಯದಲ್ಲಿ ದಾಖ ಲಾಗಿರುವ ಪ್ರಕರಣಗಳ ಜೊತೆಗೆ, ವ್ಯಾಜ್ಯ ಪೂರ್ವ ಪ್ರಕರಣಗಳನ್ನೂ ರಾಜೀ ಸಂಧಾನಕ್ಕೆ ಒಳಪಡಿಸಲಾಗುವುದು. ಲೋಕ್ ಅದಾಲತ್‌ ನಲ್ಲಿ ಕಡಿಮೆ ಖರ್ಚಿನಲ್ಲಿ ಪ್ರಕರಣಗಳು ಇತ್ಯರ್ಥವಾಗುವ ಜೊತೆಗೆ, ಕಕ್ಷಿದಾರರ ನಡುವಿನ ಬಾಂಧವ್ಯವೂ ಉಳಿಯುತ್ತದೆ ಎಂದು ನ್ಯಾಯಮೂರ್ತಿ ಹೇಳಿದರು.

ರಾಜಿಯಾಗಬಲ್ಲ ಎಲ್ಲಾ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು, ಮೋಟಾರ್ ವಾಹನ  ಅಪಘಾತ ಪರಿಹಾರ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಭೂಸ್ವಾಧೀನ ಪರಿಹಾರ, ಬ್ಯಾಂಕ್ ಸಾಲ, ಎಂ.ಎಂ.ಡಿ.ಆರ್., ವಿಚ್ಛೇದನ ಹೊರತಾದ ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳು, ಪಿಂಚಣಿ, ವೇತನ, ವಿದ್ಯುತ್, ನೀರಿನ ಶುಲ್ಕ, ಕೈಗಾರಿಕಾ ಕಾರ್ಮಿಕರ ವೇತನ, ಕಾರ್ಮಿಕ ವಿವಾದ ಇತ್ಯಾದಿ ಪ್ರಕರಣಗಳನ್ನು ಪರಸ್ಪರ ಮಾತುಕತೆ ಯಿಂದ ಬಗೆಹರಿಸಿ ಕೊಳ್ಳಬಹುದು ಎಂದವರು ಹೇಳಿದರು.

ಕಕ್ಷಿದಾರರಿಗೆ ಅನುಕೂಲವಾಗಲಿ ಎಂದು ರಾಜಿ ಪೂರ್ವ ಸಮಾಲೋ ಚನೆ ಗಳನ್ನೂ ಕೂಡ ಆಯೋಜಿಸಲಾಗಿದೆ ಎಂದು ರಾಜೇಶ್ವರಿ ತಿಳಿಸಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ರಾಜಿ ಮಾಡಬಹು ದಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾರಂಟ್ ಹೊರಡಿಸುವ ಹಾಗೂ  ಸಣ್ಣ ಪುಟ್ಟ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರದ ಮೂಲಕ ಲೋಕ್ ಅದಾಲತ್‌ಗಳಲ್ಲಿ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸಲು ಪೊಲೀಸ್ ಇಲಾಖೆ ನೆರವಾಗುತ್ತಿದೆ ಎಂದರು.

ಜಿಲ್ಲಾ ವಕೀಲರ ಒಕ್ಕೂಟದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್ ಮಾತನಾಡಿ, ಜಿಲ್ಲಾ ವಕೀಲರ ಒಕ್ಕೂಟದ ವತಿಯಿಂದ ಲೋಕ್ ಅದಾಲತ್‌ಗಳಿಗೆ ಹಿಂದಿನಿಂದಲೂ ಸಹಕಾರ ನೀಡುತ್ತಾ ಬರಲಾಗಿದೆ. ಕಕ್ಷಿದಾರರಿಗೆ ಲೋಕ್ ಅದಾಲತ್ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ ಹಳೆ ನ್ಯಾಯಾಲಯದ ಸಂಕೀರ್ಣದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ (ದೂ.: 08192 – 296364), ತಾಲ್ಲೂಕು ಕಾನೂನು ಸೇವಾ ಸಮಿತಿಗಳಾದ ಹರಿಹರ ದೂ.: 08192 – 296885, ಹೊನ್ನಾಳಿ ದೂ. :08188 251732, ಚನ್ನಗಿರಿ ದೂ. :08189 – 229195 ಹಾಗೂ ಜಗಳೂರು ದೂ. : 08196 227600 ಇವರನ್ನು ಸಂಪರ್ಕಿಸಬಹುದು.

ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ, ಸಿ.ಜೆ.ಎಂ. ನ್ಯಾಯಾಧೀಶೆ ಟಿ.ಎಂ. ನಿವೇದಿತ, ವಕೀಲರ ಸಂಘದ ಕಾರ್ಯದರ್ಶಿ ಎಸ್. ಬಸವರಾಜ್ ಹಾಗೂ ಸಹ ಕಾರ್ಯದರ್ಶಿ ಎ.ಎಸ್. ಮಂಜುನಾಥ್ ಉಪಸ್ಥಿತರಿದ್ದರು.

error: Content is protected !!