ಕನ್ನಡ ಸಂಬಂಧಿತ ಕಾರ್ಯಕ್ರಮಗಳು ಕುವೆಂಪು ಭವನದಲ್ಲೇ ನಡೆದರೆ ಒಳ್ಳೆಯದು : ಬಿ.ವಾಮದೇವಪ್ಪ

ಕನ್ನಡ ಸಂಬಂಧಿತ ಕಾರ್ಯಕ್ರಮಗಳು ಕುವೆಂಪು ಭವನದಲ್ಲೇ ನಡೆದರೆ ಒಳ್ಳೆಯದು : ಬಿ.ವಾಮದೇವಪ್ಪ

ದಾವಣಗೆರೆ, ಸೆ. 10- ಸಾಹಿತ್ಯ ಹಾಗೂ ಕನ್ನಡದ ಕಾರ್ಯಕ್ರಮಗಳು ಬೇರೆ ಎಲ್ಲೋ ನಡೆಯುವುದಕ್ಕಿಂತ ಕುವೆಂಪು ಕನ್ನಡ ಭವನದಲ್ಲೇ ನಡೆದರೆ ಒಳ್ಳೆಯದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಬಿ. ವಾಮದೇವಪ್ಪ ಆಶಯ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಭಾವಸಿರಿ ಪ್ರಕಾಶನ ಅಣಬೇರು ಇವರ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಕಳೆದ ವಾರ ನಡೆದ `ತುತ್ತಾ-ಮುತ್ತಾ’ ಹಾಸ್ಯ ಹರಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಕನ್ನಡದ ಕಾರ್ಯಕ್ರಮಗಳು ಕನ್ನಡ ಭವನದಲ್ಲಿ ನಡೆದರೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದರು. ಅತ್ತೆ-ಸೊಸೆ ಇಬ್ಬರೂ ಮನೆಗೆ ಮುಖ್ಯ. ಅತ್ತೆಯನ್ನು ತಾಯಿಯೆಂದು, ಸೊಸೆಯನ್ನು ಮಗಳೆಂದು ಭಾವಿಸಿಕೊಂಡು ನಡೆದರೆ ಮನೆ ಮಂತ್ರಾಲಯವಾಗುತ್ತದೆ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರಾಜಶೇಖರ್ ಗುಂಡಗಟ್ಟಿ, ಯಾರೇ ಕನ್ನಡದ ಕೆಲಸಗಳನ್ನು ಮಾಡಿದರೂ ಚುಟುಕು ಸಾಹಿತ್ಯ ಪರಿಷತ್ತು ಸದಾ ಅವರ ಜೊತೆಗೂಡುತ್ತದೆ, ಉತ್ತಮ ಚಿಂತನೆಯ ಕಾರ್ಯಗಳು ನಡೆಯಲಿ ಎಂದು ಹೇಳಿದರು.

ಕೆ.ಪಿ. ಅಣಬೇರು ತಾರೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಇತ್ತೀಚೆಗೆ ಜನರಿಗೆ ಹಾಸ್ಯದ ಕಡೆ ಒಲವು ಹೆಚ್ಚಾಗುತ್ತಿದ್ದು, ಅಂತಹ ಕಾರ್ಯಗಳು ನಮ್ಮ ನಗರದಲ್ಲಿ ನಡೆಯಲಿ ಎನ್ನುವ ಉದ್ದೇಶದಿಂದ `ಹಾಸ್ಯ ಹರಟೆ’ ಎನ್ನುವ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ `ಹಾಸ್ಯ ಹರಟೆ’ಯನ್ನು ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆಸುವ ಚಿಂತನೆಯಿದೆ. ಇದಕ್ಕೆ ವೀಕ್ಷಕರೂ ಬೆಂಬಲ ಕೊಡಬೇಕೆಂದರು.

ಕಾರ್ಯಕ್ರಮದಲ್ಲಿ ಮುಖ್ಶ ನಿರೂಪಕರಾಗಿ ಹೆಚ್.ಬಿ. ಮಂಜುನಾಥ್, ಸಹ ಸ್ಪರ್ಧಿಗಳಾಗಿ  ಶಿವಯೋಗಿ ಹಿರೇಮಠ್, ಆನಂದ್ ಋಗ್ವೇದಿ, ಸುಮತಿ ಜಯಪ್ಪ, ವಿರುಪಾಕ್ಷಪ್ಪ ಪಂಡಿತ್, ಲಲಿತ್ ಕುಮಾರ್ ಜೈನ್, ಓಂಕಾರಯ್ಯ ತವನಿಧಿ, ಸಂಧ್ಯಾ ಸುರೇಶ್, ವೀರಭದ್ರಪ್ಪ ತೆಲಿಗಿ, ಶ್ರೀಕಾಂತ್ ಭಟ್, ಪಂಕಜಾಕ್ಷಿ ಬಕ್ಕೇಶ್, ಅನ್ನಪೂರ್ಣ ಪಾಟೀಲ್ ಮತ್ತಿತರರು ಭಾಗವಹಿಸಿದ್ದರು.

ಶ್ರೀಮತಿ ಸುನೀತಾ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ವೀರೇಶ್ ಸ್ವಾಗತಿಸಿದರು. ಉಮಾದೇವಿ ಹಿರೇಮಠ್ ಪ್ರಾರ್ಥಿಸಿದರು.

error: Content is protected !!