50% `ಪೇಮೆಂಟ್ ಕೋಟಾ’ಗೆ ಖಂಡನೆ
ಎಐಡಿಎಸ್ಓ ನೇತೃತ್ವದಲ್ಲಿ ಪ್ರತಿಭಟನೆ
ದಾವಣಗೆರೆ, ಸೆ.10- ನಗರದ ಯುಬಿಡಿಟಿ ಕಾಲೇಜಿನಲ್ಲಿ ಶೇ.50ರಷ್ಟು ಸೀಟುಗಳನ್ನು ಉನ್ನತ ಸರ್ಕಾರಿ ಶುಲ್ಕದ ಹೆಸರಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಎಐಡಿಎಸ್ಓ ಹಾಗೂ ಯುಬಿಡಿಟಿ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕಾಲೇಜಿನಿಂದ ಮೆರವಣಿಗೆ ಮೂಲಕ ಜಯದೇವ ವೃತ್ತದಲ್ಲಿ ಸೇರಿದ ವಿದ್ಯಾರ್ಥಿಗಳು ಮಳೆಯ ನಡುವೆಯೇ, ‘ಯುಬಿಡಿಟಿ ಉಳಿಸಿ’, ‘ಸರ್ಕಾರಿ ಕಾಲೇಜಿನಲ್ಲಿ ಸೀಟು ವ್ಯಾಪಾರೀಕರಣ ಸಲ್ಲದು’ ಎಂಬಿತ್ಯಾಧಿ ಘೋಷಣೆಗಳನ್ನು ಕೂಗಿದರು.
ಎಐಡಿಎಸ್ಓ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ ಬೀಳೂರ್ ಮಾತನಾಡಿ, ರಾಜ್ಯದ ಪ್ರಥಮ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಆದ ಯುಬಿಡಿಟಿಯಲ್ಲಿ 504 ಸೀಟುಗಳ ಪೈಕಿ ಶೇಕಡ 50 ಸೀಟುಗಳನ್ನು ಹೆಚ್ಚಿನ ಶುಲ್ಕಕ್ಕೆ ಮಾರಲಾಗುತ್ತಿದೆ. ಮೂಲ ಶುಲ್ಕ 42ಸಾವಿರ ರೂಪಾಯಿಯೇ ಬಡವರಿಗೆ ದೊಡ್ಡ ಹೊರೆಯಾಗಿರುವಾಗ 97ಸಾವಿರ ರೂ. ನಿಗದಿ ಮಾಡಿ ಬಡ-ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ದೂರ ತಳ್ಳಲಾಗುತ್ತಿದೆ ಎಂದು ದೂರಿದರು. ರಾಜ್ಯದಲ್ಲಿ ಪ್ರಬಲವಾಗಿ ಬೆಳೆದ ವಿದ್ಯಾರ್ಥಿ ಹೋರಾಟದ ಫಲವಾಗಿ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಹಿಂಪಡೆದಿದೆ. ಆದರೆ, ಅದೇ ಎನ್ಈಪಿ-2020ರ ಅಂಶವಾದ ಸರ್ಕಾರಿ ಸಂಸ್ಥೆಗಳನ್ನು ಸ್ವಾಯತ್ತ, ಸ್ವಹಣಕಾಸು ಸಂಸ್ಥೆಗಳನ್ನಾಗಿ ಮಾಡುವ ಕರಾಳ ನೀತಿಗಳನ್ನು ಜಾರಿಗೊಳಿಸುತ್ತಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಖಾಸಗೀಕರಣ ಗೊಳಿಸುವುದು, ರಾಜ್ಯ ಸರ್ಕಾರದ 6ನೇ ಗ್ಯಾರೆಂಟಿಯೇ ಎಂದು ಪ್ರಶ್ನಿಸಿದರು.
ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಪೂಜಾ ನಂದಿಹಳ್ಳಿ ಮಾತನಾಡಿ, ರಾಜ್ಯ ಸರ್ಕಾರವು ಹೆಚ್ಚಿನ ಶುಲ್ಕದ ಕೋಟಾವನ್ನು ಕೂಡಲೇ ಹಿಂಪಡೆಯಬೇಕು. ಹೆಚ್ಚಿಗೆ ಪಡೆದ ಮೊತ್ತವನ್ನು ವಿದ್ಯಾರ್ಥಿಗಳಿಗೆ ಹಿಂದಿರುಗಿಸಬೇಕು. ಕಾಲೇಜಿನ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಲು ಹೆಚ್ಚಿನ ಅನುದಾನ ಒದಗಿಸಬೇಕು. ಯುಬಿಡಿಟಿಯ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರವೇ ವಹಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಪ್ರಬಲ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಸುಮನ್ ಟಿ. ಎಸ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಯುಬಿಡಿಟಿ ಉಳಿಸಿ ಹೋರಾಟ ಸಮಿತಿ ಸದಸ್ಯರಾದ ಅಭಿಷೇಕ್, ಯೋಗೇಶ, ಶ್ರವಣ್, ರಕ್ಷಿತಾ, ದೀಪಿಕಾ, ಚಂದನಾ, ನರೇಶ ಸೇರಿದಂತೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.