39 ಸಾವಿರ ಅನರ್ಹ ಬಿಪಿಎಲ್‌ ಕಾರ್ಡುಗಳು

39 ಸಾವಿರ ಅನರ್ಹ ಬಿಪಿಎಲ್‌ ಕಾರ್ಡುಗಳು

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಸಭೆಯಲ್ಲಿ ಅಧಿಕಾರಿಗಳ ಮಾಹಿತಿ

ದಾವಣಗೆರೆ, ಸೆ. 10 – ಜಿಲ್ಲೆಯಲ್ಲಿ ಆದಾಯ ಹೆಚ್ಚಿದ್ದರೂ ಬಿ.ಪಿ.ಎಲ್. ಕಾರ್ಡ್ ಪಡೆದ 39 ಸಾವಿರ ಕುಟುಂಬ ಗಳಿವೆ. ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದು ಕೊಳ್ಳಲು ರಾಜ್ಯ ಸರ್ಕಾರ ಆದೇಶಿಸಿದೆ.

ಜಿಲ್ಲಾ ಮಟ್ಟದ ಐದು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಸಭೆಯಲ್ಲಿ ಈ ಮಾಹಿತಿ ನೀಡಿರುವ ಅಧಿಕಾರಿಗಳು, ಆದಾಯ ತೆರಿಗೆ ಪಾವತಿಸುವವರು ಹಾಗೂ ಸರ್ಕಾರಿ ಹುದ್ದೆ ಯಲ್ಲಿರುವವರೂ ಬಿಪಿಎಲ್ ಕಾರ್ಡುಗಳನ್ನು ಪಡೆದಿದ್ದಾರೆ ಎಂದು ತಿಳಿಸಿದರು.

ಆದಾಯ ತೆರಿಗೆ ಪಾವತಿಸುವ 2,963 ಜನರು ಬಿಪಿಎಲ್ ಕಾರ್ಡ್ ಪಡೆದಿರುವ ಮಾಹಿತಿ ದೊರೆತಿದೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಯಿಂದ ವಿವರಗಳನ್ನು ಪಡೆದು ಕ್ರಮ ತೆಗೆದುಕೊಳ್ಳ ಲಾಗುತ್ತಿದೆ. ಇದೇ ವೇಳೆ ಸರ್ಕಾರಿ ಹುದ್ದೆಯಲ್ಲಿ ರುವ 62 ಜನ ಬಿಪಿಎಲ್ ಕಾರ್ಡ್‌ ಪಡೆದಿದ್ದಾರೆ. ಈ ಬಗ್ಗೆ ತಹಶೀಲ್ದಾರರ ಮೂಲಕ ಕ್ರಮ ತೆಗೆದು ಕೊಳ್ಳಲಾಗುತ್ತಿದೆ ಎಂದು ಆಹಾರ ಇಲಾಖೆಯ ಉಪ ನಿರ್ದೇಶಕ ಶಿದ್ರಾಮ ಮಾರಿಹಾಳ ತಿಳಿಸಿದರು.

ಕೇಂದ್ರ ಸರ್ಕಾರದ ವರದಿಯ ಅನ್ವಯ ಗ್ರಾಮೀಣ ಭಾಗದಲ್ಲಿ ಶೇ.76 ಹಾಗೂ ನಗರ ಪ್ರದೇಶಗಳಲ್ಲಿ ಶೇ.49ರಷ್ಟು ಬಡವರಿದ್ದಾರೆ. ಇದಕ್ಕೆ ಅನುಗುಣವಾಗಿ ಬಿಪಿಎಲ್‌ ಪಡಿತರ ಕಾರ್ಡುಗಳನ್ನು ನೀಡಬೇಕಿದೆ. ಹೆಚ್ಚುವರಿ ಪಡಿತರ ಕಾರ್ಡುಗಳನ್ನು ನೀಡಿದರೆ ರಾಜ್ಯ ಸರ್ಕಾರವೇ ವೆಚ್ಚ ಭರಿಸಬೇಕಿದೆ ಎಂದವರು ಹೇಳಿದರು.

ಬಿ.ಪಿ.ಎಲ್. ಕಾರ್ಡ್ ಪಡೆಯಲು ವಾರ್ಷಿಕ ಆದಾಯ ಮಿತಿ 1.20 ಲಕ್ಷ ರೂ. ಇದೆ. ಜಿಲ್ಲೆಯಲ್ಲಿ ಒಟ್ಟು 3.41 ಲಕ್ಷ ಬಿಪಿಎಲ್ ಕಾರ್ಡು ಗಳಿವೆ. 39 ಸಾವಿರ ಕುಟುಂಬಗಳ ಆದಾಯ ವರ್ಷಕ್ಕೆ 1.20 ಲಕ್ಷ ರೂ.ಗಳಿಗಿಂತ ಹೆಚ್ಚಿದ್ದರೂ ಬಿಪಿಎಲ್ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ರಾಜ್ಯ ಸರ್ಕಾರದಿಂದ ಮಾಹಿತಿ ನೀಡಲಾಗಿದೆ ಎಂದು ಶಿದ್ರಾಮ ಮಾರಿಹಾಳ ಹೇಳಿದರು.

ಅನರ್ಹರನ್ನು ಗುರುತಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸರ್ಕಾರದ ಹಂತದಲ್ಲಿ ಮುಂದಿನ ಕ್ರಮವಾಗಲಿದೆ ಎಂದವರು ತಿಳಿಸಿದರು.

ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಪ್ರತಿ ಬಿಪಿಎಲ್ ಸದಸ್ಯನಿಗೆ ತಿಂಗಳಿಗೆ 170 ರೂ.ಗಳನ್ನು ಡಿ.ಬಿ.ಟಿ. ಮೂಲಕ ನೀಡುತ್ತಿದೆ. ಕಳೆದ ಜೂನ್‌ನಲ್ಲಿ 3.41 ಲಕ್ಷ ಬಿಪಿಎಲ್‌ ಪಡಿತರ ಕಾರ್ಡು ಹೊಂದಿರುವ 12.26 ಲಕ್ಷ ಜನರಿಗೆ ಒಟ್ಟು 19.66 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜಾ ನಾಯಕ್, ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೂ 3.66 ಲಕ್ಷ ಕುಟುಂಬಗಳು ನೋಂದಣಿಯಾಗಿವೆ. ಇವರಿಗೆ ಇದುವರೆಗೂ ಒಟ್ಟು 751.50 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ಹೇಳಿದರು.

ಗೃಹಜ್ಯೋತಿ ಯೋಜನೆಯಡಿ ಕಳೆದ ಆಗಸ್ಟ್ ಅಂತ್ಯದವರೆಗೆ ಜಿಲ್ಲೆಯಲ್ಲಿ 4.98 ಲಕ್ಷ ಫಲಾನುಭವಿಗಳಿದ್ದಾರೆ. ಇವರಿಗೆ ಇದುವರೆಗೂ 25.83 ಕೋಟಿ ರೂ.ಗಳ ಉಚಿತ ವಿದ್ಯುತ್ ಪೂರೈಸಲಾಗಿದೆ. ಸರ್ಕಾರದಿಂದ 19.26 ಕೋಟಿ ರೂ.ಗಳನ್ನು ವಿದ್ಯುತ್ ನಿಗಮಕ್ಕೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯಡಿ 4.69 ಕೋಟಿ ಉಚಿತ ಪ್ರಯಾಣಗಳಾಗಿವೆ. ಇದರ ಒಟ್ಟು ವೆಚ್ಚ 127.60 ಕೋಟಿ ರೂ. ಎಂದು ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಕ ಸಿದ್ದೇಶ್ವರ ಹೆಬ್ಬಾಳ್ ತಿಳಿಸಿದರು.

ಯುವನಿಧಿ ಯೋಜನೆಯಡಿ ಒಟ್ಟು 12,390 ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಇವರಿಗೆ 3.69 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಡಿ.ರವೀಂದ್ರ ತಿಳಿಸಿದರು.

ಸಭೆಯ ವೇದಿಕೆಯಲ್ಲಿ ಜಿಲ್ಲಾ ಪಂಚಾಯ್ತಿ ಸಿ.ಇ.ಒ. ಸುರೇಶ್ ಇಟ್ನಾಳ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ್, ಉಪಾಧ್ಯಕ್ಷರಾದ ಕೆ.ಎನ್. ಮಂಜುನಾಥ್, ನಂಜಾನಾಯ್ಕ, ಅನೀಸ್ ಪಾಷ ಉಪಸ್ಥಿತರಿದ್ದರು.

error: Content is protected !!