ಎಲ್ಲಾ ವೃತ್ತಿಗಳ ತಾಯಿಯೇ ಶಿಕ್ಷಕ ವೃತ್ತಿ

ಎಲ್ಲಾ ವೃತ್ತಿಗಳ ತಾಯಿಯೇ ಶಿಕ್ಷಕ ವೃತ್ತಿ

ನೂತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆಯಲ್ಲಿ ಸಂಸ್ಥೆಯ ಅಧ್ಯಕ್ಷ ಪರಶುರಾಮನಗೌಡ

ದಾವಣಗೆರೆ, ಸೆ.10- ಎಲ್ಲಾ ವೃತ್ತಿಗಳ ತಾಯಿಯೇ ಶಿಕ್ಷಕ ವೃತ್ತಿ. ಶಿಕ್ಷಕ ವಿದ್ಯಾರ್ಥಿಗಳ ಹೃದಯ ಗೆಲ್ಲಬೇಕು ಎಂದು ನೂತನ ವಿದ್ಯಾಸಂಸ್ಥೆಯ ಅಧ್ಯಕ್ಷ ಪರಶುರಾಮನಗೌಡ ಅವರು ಹೇಳಿದರು.

ಅವರು ನಗರದ ನೂತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಕ್ಷಕ ನಿತ್ಯ ವಿದ್ಯಾರ್ಥಿಯಾಗಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಲು ಸಮರ್ಥನಾಗಬೇಕು. ಹೊಸ ವಿಷಯಗಳನ್ನು ಅರಿಯುವುದರ ಜೊತೆಗೆ ವೃತ್ತಿಯನ್ನು ಪೂಜಿಸಬೇಕು ಹಾಗೂ ಗೌರವಿಸಬೇಕು ಅವರು ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್.ಪಿ.ಎಸ್. ನಗರದ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕರಾದ ಸಿ.ಎಂ. ಮೇಘನಾಥ್ ಅವರು ಮಾತನಾಡಿ, ಎಲ್ಲಾ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿಯಾಗಿದೆ. ಈ ವೃತ್ತಿಯಲ್ಲಿ ಕೈ ಗಲೀಜು ಮಾಡಿಕೊಳ್ಳುವಂತಹ ಸಂದರ್ಭಗಳು ಇಲ್ಲ. ಆದ್ದರಿಂದ ಶಿಕ್ಷಕರು ನೆಮ್ಮದಿಯ ಜೀವನ ಸಾಗಿಸಲು ಇದು ಅತ್ಯಂತ ಅವಶ್ಯಕ. 

ಸರ್ಕಾರಿ ಮಾಜಿ ಪುರಸಭೆ ಪಿ.ಯು. ಕಾಲೇಜು (ಪ್ರೌಢಶಾಲಾ ವಿಭಾಗ)ದ ಸಹಶಿಕ್ಷಕ ಜಿ.ಎಸ್.ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬಿತ್ತುವಂತಹ ಕೆಲಸವಾಗಬೇಕು. ಕನಸು ಕಾಣುವುದು ಪಾಪವಲ್ಲ. ಆದರೆ, ಅದನ್ನು ನನಸಾಗಿ ಮಾಡಿಕೊಳ್ಳದಿರುವುದು ಅಪರಾಧ. ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಪ್ರತಿಯೊಬ್ಬ ಶಿಕ್ಷಕನ ಆದ್ಯ ಕರ್ತವ್ಯ ಎಂದು ನುಡಿದರು. 

ಮತ್ತೋರ್ವ ಮುಖ್ಯ ಅತಿಥಿಯಾಗಿದ್ದ ಆರ್.ಜಿ.ಕೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ.ಸಿನಿರಂಜನ್ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ. ಪ್ರಸ್ತುತ ದಿನಮಾನಗಳಲ್ಲಿ ಕೆಲಸದ ಒತ್ತಡದ ಜೊತೆಗೆ ಕರ್ತವ್ಯ ನಿರ್ವಹಣೆ ಹೊಣೆ ಅಷ್ಟೇ ಮಹತ್ವದ್ದಾಗಿದೆ ಎಂದು ತಿಳಿಸಿದರು. 

ನೂತನ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಕೆ.ಎಸ್. ದಿವಾಕರ ನಾಯ್ಕ್ ಅವರು ಮಾತನಾಡಿ, ದೇಶದ ಅಭಿವೃದ್ಧಿ ಶಿಕ್ಷಣದಲ್ಲಿದೆ. ಶಿಕ್ಷಕರನ್ನು ತಯಾರು ಮಾಡುವಂತಹ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿ ಮಾಡಬೇಕಾಗಿದೆ. ಗುಣಮಟ್ಟವನ್ನು ಸಾಧಿಸಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. 21ನೇ ಶತಮಾನಕ್ಕೆ ಹೊಂದಿಕೊಳ್ಳುವಂತಹ ಶಿಕ್ಷಕರ ಶಿಕ್ಷಣದ ಪಠ್ಯಕ್ರಮವನ್ನು ಅಳವಡಿಸಿಕೊಳ್ಳುವುದರ ಮೂಲಕ ಶಿಕ್ಷಕರ ಗುಣಮಟ್ಟವನ್ನು ಸುಧಾರಿಸಲು ಸಾಧ್ಯ ಎಂದು ತಿಳಿಸಿದರು.  

ಪ್ರಶಿಕ್ಷಣಾರ್ಥಿಗಳಾದ ಕು. ಗೌತಮಿ ಹಾಗೂ ಕು. ಎಸ್. ಬಿಂದು ಅವರು ಪ್ರಾರ್ಥಿಸಿದರೆ, ಕು. ಬಿ.ಎಂ. ಚೈತ್ರ ಸ್ವಾಗತಿಸಿದರು. ಕು. ಎನ್. ಅಶ್ವಿನಿ, ಕು. ಟಿ.ಆರ್. ಅಕ್ಷತಾ ಹಾಗೂ ಕು. ಆರ್. ಕಾವ್ಯ ಅತಿಥಿಗಳ ಪರಿಚಯ ಮಾಡಿದರೆ, ಕು. ಕೆ.ವಿ. ಚೈತ್ರ ಅವರು ಶಿಕ್ಷಕರ ದಿನಾಚರಣೆ ಕುರಿತು ಭಾಷಣ ಮಾಡಿದರು. ಕು. ಸಿ. ಹೀನಾ ಕೌಸರ್ ಅವರು ವಂದಿಸಿದರು.
ಕು. ಅಜ್ಜೋಳ ಕಾವ್ಯ ಅವರು ಕಾರ್ಯಕ್ರಮ ನಿರೂಪಿಸಿದರು.

error: Content is protected !!