ಪೌರ ಕಾರ್ಮಿಕರ ಮಕ್ಕಳೂ ಅಧಿಕಾರಿಗಳಾಗಲಿ

ಪೌರ ಕಾರ್ಮಿಕರ ಮಕ್ಕಳೂ ಅಧಿಕಾರಿಗಳಾಗಲಿ

ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡುವಂತೆ ಪೌರ ಕಾರ್ಮಿಕರಿಗೆ ಪಾಲಿಕೆ ಆಯುಕ್ತೆ ರೇಣುಕಾ ಕರೆ

ದಾವಣಗೆರೆ, ಸೆ.11- ನಿಮ್ಮ ಮಕ್ಕಳೂ ನಮ್ಮಂತೆ ಅಧಿಕಾರಿಗಳಾಗಲಿ. ಅದಕ್ಕಾಗಿ ನೀವು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿ ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಪೌರ ಕಾರ್ಮಿಕರಿಗೆ ಕರೆ ನೀಡಿದರು.

ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ 58ನೇ ಅಂತರ ರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚೆಗೆ ಪಾಲಿಕೆಯಲ್ಲಿ 11 ಜನರಿಗೆ ಅನು ಕಂಪದ ಆಧಾರದಲ್ಲಿ ಕೆಲಸ ನೀಡಲಾಗಿದೆ. ಈ ಪೈಕಿ ಒಬ್ಬರು ಮಾತ್ರ ಪದವಿ ಪಡೆದಿದ್ದ ರಿಂದ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ನೀಡಲಾಗಿದೆ. ಉಳಿದಂತೆ ಹತ್ತು ಜನರಿಗೆ ಕಡಿಮೆ ವಿದ್ಯಾಭ್ಯಾಸದ ಕಾರಣ `ಡಿ’ ದರ್ಜೆ ನೌಕರಿ ನೀಡಲಾಗಿದೆ ಎಂದರು.

ಪೌರ ಕಾರ್ಮಿಕರ ದಿನದಂದು ಪೌರ ಕಾರ್ಮಿಕರಿಗೆ ಗೌರವ ಧನ ನೀಡಲಾಗುತ್ತದೆ. ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾ ಗುತ್ತಿದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಿ. ಕೆಲಸ ಮುಗಿದ ಮೇಲೆ ಮನೆಯಲ್ಲಿ ಟಿವಿ ಧಾರಾವಾಹಿ ನೋಡುವುದು ಕಡಿಮೆ ಮಾಡಿ. ಮಕ್ಕಳ ವಿದ್ಯಾಭ್ಯಾಸದತ್ತ ಗಮನ ಹರಿಸಿ ಎಂದು ಕಿವಿ ಮಾತು ಹೇಳಿದರು. ಸಹಿ ಮಾಡುವುದನ್ನೂ ಕಲಿಯಲಿಲ್ಲ ಎಂದರೆ ನಿಮ್ಮ ವೇತನ ಅಥವಾ ಸೌಲಭ್ಯಗಳು ಬೇರೆಯವರ ಪಾಲಾಗುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ನೀವೂ ಸಹ ಸಾಕ್ಷರರಾಗಬೇಕು ಎಂದರು.

ದೂಡ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಯಾವುದೇ ಸರ್ಕಾರವಿದ್ದರೂ ಸಾಕ್ಷರತೆಗೆ ಮಹತ್ವ ನೀಡುತ್ತದೆ. ಅದಕ್ಕಾಗಿ  ಹಲವು ಯೋಜನೆಗಳನ್ನೂ ಜಾರಿಗೆ ತರುತ್ತದೆ. ಇದನ್ನು ಉಪಯೋಗಿಸಿಕೊಂಡು ಪೌರ ಕಾರ್ಮಿಕರೂ ಸಹ ಸಾಕ್ಷರರಾಗಬೇಕು ಎಂದರು.

ನಿಮ್ಮ ಮಕ್ಕಳು ನಿಮ್ಮಂತೆ ಪೌರ ಕಾರ್ಮಿಕರಾಗುವುದಕ್ಕಿಂತ ಉನ್ನತ ಹುದ್ದೆಗಳನ್ನು ಪಡೆಯುವಂತಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಸಾಕ್ಷರತೆ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಕ್ಷರತಾ ಪ್ರಮಾಣ ವಚನ ಬೋಧಿಸಲಾಯಿತು. ಸಾಕ್ಷರ ಸೇನಾನಿಗಳಾದ ಹೆಗ್ಗೆರೆ ರಂಗಪ್ಪ, ಐರಣಿ ಚಂದ್ರು ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಇಲಾಖೆ, ಶಾಲಾ ಶಿಕ್ಷಣ, ಡಯಟ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಮಹಾನಗರ ಪಾಲಿಕೆ  ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೂ ಮುನ್ನ ಮಹಾನಗರ ಪಾಲಿಕೆ ಮೇಯರ್ ಬಿ.ಹೆಚ್. ವಿನಾಯಕ್ ಧ್ವಜಾರೋಹಣ ನೆರವೇರಿಸಿದ್ದರು. ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ್ ಬಿ. ಇಟ್ನಾಳ್ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯ ಎ.ನಾಗರಾಜ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ನಿರ್ದೇಶಕಿ ಗೀತಾ ಎಸ್., ಪಾಲಿಕೆ ಆರೋಗ್ಯಾಧಿಕಾರಿ ಚಂದ್ರಮೋಹನ್, ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ವಾಗಿಶ್‌ ಮಲ್ಕಿ ಒಡೆಯರ್, ಕೆ.ಸಿ. ಬಸವರಾಜ್, ಗುರುಸಿದ್ಧ ಸ್ವಾಮಿ ಇತರರು ಉಪಸ್ಥಿತರಿದ್ದರು. ಆವರಗೊಳ್ಳದ ಸಹ ಶಿಕ್ಷಕ ವಾಗೀಶ್ ಮಲ್ಕಿ ಒಡೆಯರ್ ಸ್ವಾಗತಿಸಿದರು.

error: Content is protected !!